ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆಸೊಪ್ಪಿಗೆ ಕಾಡಿದ ಸೊರಗು ರೋಗ

ಜೂನ್‌ ತಿಂಗಳಲ್ಲಿ ಕ್ಷೀಣಿಸಿದ ವಾಡಿಕೆ ಮಳೆ; ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ರೈತರು
Last Updated 29 ಜೂನ್ 2021, 6:34 IST
ಅಕ್ಷರ ಗಾತ್ರ

ಹುಣಸೂರು: ಮೇ ತಿಂಗಳಲ್ಲಿ ಸುರಿದ ಉತ್ತಮ ಮಳೆಯಿಂದಾಗಿತಂಬಾಕು ಬೆಳೆಗಾರರು ಉತ್ಸಾಹದಿಂದ ಹೊಗೆಸೊಪ್ಪು ನಾಟಿ ಮಾಡಿದ್ದರು. ಆದರೆ, ಜೂನ್ ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಹೊಗೆಸೊಪ್ಪು ರೋಗಬಾಧೆಗೆ ಸಿಲುಕಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಹುಣಸೂರು ಉಪವಿಭಾಗದ 60 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಹೊಗೆಸೊಪ್ಪು ನಾಟಿ ಮಾಡಿದ್ದರು. ಮೊದಲ ಹಂತದ ಗೊಬ್ಬರವನ್ನೂ ನೀಡಿದ್ದರು. ಆದರೆ, ಜೂನ್ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆ ಸಕಾಲದಲ್ಲಿ ಬಾರದ ಕಾರಣ, ರೈತರು ಆಕಾಶದತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ.

ಮಳೆ ಕೊರತೆ: ಮೇ ತಿಂಗಳಲ್ಲಿ 80ರಿಂದ 85 ಮಿ.ಮೀ ಮಳೆಯಾಗಿತ್ತು. ಜೂನ್ ತಿಂಗಳಲ್ಲಿ ನಿರೀಕ್ಷಿತ ಮಟ್ಟದ ಮಳೆಯಾಗಿಲ್ಲ. ಕೇವಲ 26 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಉತ್ತಮ ತಂಬಾಕು ಬೇಸಾಯಕ್ಕೆ ಮೇ, ಜೂನ್ ಮತ್ತು ಜುಲೈ ತಿಂಗಳು ಸರಾಸರಿ 80 ಮಿ.ಮೀ ಮಳೆಯ ಅಗತ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು.

ಒಣಹವೆಯಿಂದಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ, ಭೂಮಿಯಲ್ಲಿ ಆಮ್ಲಜನಕದ ಪ್ರಮಾಣ ಕುಸಿಯುತ್ತದೆ. ಸಸಿ ಬೇರಿನಲ್ಲಿ ಪ್ಯೂಸೇರಿಯಂ ಎನ್ನುವ ರೋಗಕಾರಕ ಶಿಲೀಂಧ್ರ ಹೆಚ್ಚಾಗಿ ಬೇರಿನಲ್ಲಿ ಗಂಟು ಬಾಧೆ ಮತ್ತು ಕಪ್ಪು ಕಡ್ಡಿ ರೋಗ (ಸೊರಗು ರೋಗ) ಕಾಣಿಸಿಕೊಳ್ಳುತ್ತಿದೆ ಎಂದು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣ ತಿಳಿಸಿದರು.

ರೋಗ ಉಲ್ಬಣ: ರೈತರ ತಪ್ಪಿನಿಂದಾಗಿ ಸೊರಗು ರೋಗ ಹರಡಲಿದೆ. ರೋಗಬಾಧಿತ ಸಸಿಯನ್ನು ಗುರುತಿಸಿ ತೆಗೆದು ಹಾಕದೆ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿರುವ ಶಿಲೀಂಧ್ರ ಇತರೆ ಪ್ರದೇಶಕ್ಕೆ ಹರಡುತ್ತದೆ. ನೀರು ಹಾಯಿಸಿದಾಗಲೂ ಸೊರಗು ರೋಗ ಶಿಲೀಂಧ್ರ ನೀರಿನಲ್ಲಿ ಪೂರ್ಣ ಪ್ರದೇಶ ಆವರಿಸುತ್ತದೆ. ರೈತರು ಎಚ್ಚರಿಕೆ ಕ್ರಮ ಅನುಸರಿಸಲೇ ಬೇಕು.

ಔಷಧೋಪಚಾರ: ಸೊರಗುರೋಗ ನಿಯಂತ್ರಣಕ್ಕೆ ಬ್ಲೈಟೆಕ್ಸ್ ಅಥವಾ ಕೋಸೈಡ್ ಔಷಧವನ್ನು ಪ್ರತಿ ಒಂದು ಲೀಟರ್‌ ನೀರಿಗೆ 2 ಗ್ರಾಂ ಮಿಶ್ರಣ ಮಾಡಿ ಸೊರಗು ರೋಗಬಾಧಿತ ಸಸಿ ಬೇರಿಗೆ ಹಾಕಬೇಕು ಅಥವಾ ಪ್ರತಿ ಕ್ಯಾನಿಗೆ 10 ಮಿ.ಲೀ ಟಿಲ್ಟ್ ಔಷಧವನ್ನು ಬೆರಸಿ ಗಿಡಕ್ಕೆ ಸಿಂಪಡಣೆ ಮಾಡಬೇಕು. ಇದರಿಂದ ರೋಗ ಹತೋಟಿಗೆ ತರಬಹುದು ಎಂದು ಹೇಳಿದರು.

ಹಸಿರು ಹುಳ ಬಾಧೆ: ಮಳೆ ಕಡಿಮೆಯಾಗಿದ್ದರಿಂದಹೊಗೆಸೊಪ್ಪಿಗೆ ಹಸಿರು ಹುಳ ರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರು ಕೊರಾಜಿನ್ ಔಷಧವನ್ನು ಪ್ರತಿ ಲೀಟರ್‌ಗೆ 5 ಮಿ.ಲೀ ಮಿಶ್ರಣ ಮಾಡಿ ಸಿಂಪಡಿಸಬೇಕು. ಗುಣಮಟ್ಟದ ತಂಬಾಕು ಪಡೆಯಲು ಆರಂಭದಲ್ಲೇ ಪೊಟಾಶಿಯಂ ನೈಟ್ರೈಟ್ ಸಿಂಪಡಿಸುವುದು ಅಗತ್ಯವಿದೆ ಎಂದು ಸಲಹೆ ನೀಡಿದರು.

‘ಹೈಬ್ರಿಡ್‌ ತಳಿಗೆ ಮುಗಿ ಬೀಳಬೇಡಿ’

ಸಿಟಿಆರ್‌ಐ ಅಭಿವೃದ್ಧಿ ಪಡಿಸಿರುವ ಎಫ್‌ಸಿಎಚ್‌ 222 ತಂಬಾಕು ತಳಿಯಲ್ಲಿ ಸೊರಗು ರೋಗ ನಿರೋಧಕ ಶಕ್ತಿ ಇದೆ. ರೈತರು ಹೆಚ್ಚು ಇಳುವರಿಯನ್ನು ಪಡೆಯುವ ಆಸೆಯಿಂದ ವಿವಿಧ ಹೈಬ್ರಿಡ್‌ ತಳಿಗೆ ಮುಗಿ ಬೀಳುತ್ತಿದ್ದಾರೆ. ಇದರಿಂದ ಹೊಗೆಸೊಪ್ಪು ಸೊರಗು ರೋಗಕ್ಕೆ ತುತ್ತಾಗುವುದು ಹೆಚ್ಚಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT