ಗುರುವಾರ , ಆಗಸ್ಟ್ 11, 2022
27 °C
ಪರೀಕ್ಷಾ ಮೌಲ್ಯಮಾಪನ: ಹಿಂದಿನಂತೆಯೇ ಎರಡು ಬಾರಿ ನಡೆಸಲು ಒತ್ತಾಯ

ಅಂಕಪಟ್ಟಿಯಲ್ಲಿನ ಲೋಪ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ವಿಶ್ವವಿದ್ಯಾನಿಲಯ ವಿತರಿಸುವ ಅಂಕಪಟ್ಟಿಯಲ್ಲಿನ ಲೋಪ ಇಂದಿಗೂ ಮುಂದುವರೆದಿದೆ. ಇದು ಸ್ನಾತಕೋತ್ತರ ಪದವಿ ಕಲಿಯುವ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಾಕಾಂಕ್ಷಿಗಳ ಪಾಲಿಗೆ ತೊಂದರೆಯಾಗಿದೆ’ ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಟಿ.ಕೃಷ್ಣೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಮಾನಸ ಗಂಗೋತ್ರಿ ಆವರಣದ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಎರಡನೇ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೃಷ್ಣೇಗೌಡ, ‘ನಮ್ಮ ಕಾಲೇಜಿನಲ್ಲಿ ನಿತ್ಯವೂ ಕನಿಷ್ಠ 20 ವಿದ್ಯಾರ್ಥಿನಿಯರು ಅಂಕಪಟ್ಟಿಯಲ್ಲಿನ ಲೋಪದ ಅಹವಾಲು ಸಲ್ಲಿಸುತ್ತಿದ್ದಾರೆ. ವಿಶ್ವವಿದ್ಯಾಲಯಕ್ಕೆ ಪತ್ರ ಬರೆಯುವುದೇ ನಮ್ಮ ಕೆಲಸವಾಗಿದೆ’ ಎಂದು ಆಕ್ಷೇಪಿಸಿದರು.

‘ಅಂಕಪಟ್ಟಿಯಲ್ಲಿನ ಲೋಪ ನಿರಂತರವಾಗಿ ನಡೆಯುತ್ತಿರುವುದರಿಂದ ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರಲಿದೆ’ ಎಂದು ಕೆ.ಟಿ.ಕೃಷ್ಣೇಗೌಡ ಹೇಳಿದ್ದಕ್ಕೆ, ‘ಕಾಲೇಜುಗಳಿಂದಲೇ ತಪ್ಪು ಬರುತ್ತಿದೆ’ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಕೆ.ಎಂ.ಮಹದೇವನ್ ಪ್ರತಿಕ್ರಿಯಿಸಿದರು.

ಶಿಕ್ಷಣ ಮಂಡಳಿ ಸದಸ್ಯರಾಗಿರುವ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಈ ವಿಷಯವನ್ನು ಸಭೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರತಿಪಾದಿಸಲು ಮುಂದಾಗುತ್ತಿದ್ದಂತೆ, ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಇಲ್ಲಿ ಪ್ರಸ್ತಾಪಿಸುವುದು ಬೇಡ ಎನ್ನುವ ಮೂಲಕ ಅಂಕಪಟ್ಟಿಯ ವಿಷಯಕ್ಕೆ ತೆರೆ ಎಳೆದರು.

ಪರೀಕ್ಷಾ ಪಾವಿತ್ರ್ಯತೆಯ ಪ್ರಶ್ನೆ: ‘ಈ ಹಿಂದಿನಂತೆಯೇ ಎರಡು ಬಾರಿ ಮೌಲ್ಯಮಾಪನ ನಡೆಸಬೇಕು. ಈಗಿನ ಒಂದು ಬಾರಿಯ ಮೌಲ್ಯಮಾಪನದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಈ ಪದ್ಧತಿಯ ಬಗ್ಗೆ ಅತೃಪ್ತಿಯಿದೆ’ ಎಂದು ಪ್ರೊ.ನೀಲಗಿರಿ ಎಂ.ತಳವಾರ ತಿಳಿಸಿದರು. ಇದಕ್ಕೆ ಸಭೆಯಲ್ಲಿದ್ದ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿಮಗೆ ವಿದ್ಯಾರ್ಥಿಗಳಿಂದ ದೂರು ಬಂದಿದೆಯಾ ಎಂದು ಪ್ರಶ್ನಿಸಿದರು.

ಸದಸ್ಯರ ಆಕ್ಷೇಪಕ್ಕೆ ಆಫ್‌ ದ ರೆಕಾರ್ಡ್‌ನಲ್ಲಿ ಉತ್ತರಿಸಿದ ತಳವಾರ, ‘ಇದು ಪರೀಕ್ಷಾ ಪಾವಿತ್ರ್ಯದ ಪ್ರಶ್ನೆ. ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಬೇಕು. ನನ್ನ ಬಳಿ ಹಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ಶೇ 60ರ ನಿರೀಕ್ಷೆಯಿತ್ತು. ಆದರೆ ಶೇ 80 ಫಲಿತಾಂಶ ಬಂದಿದೆ ಎಂದವರು ಇದ್ದಾರೆ. ಇಂತಹವರು ಏಕೆ ದೂರು ದಾಖಲಿಸುತ್ತಾರೆ’ ಎಂದು ಪ್ರೊ.ನೀಲಗಿರಿ ತಿಳಿಸಿದರು.

ಈ ವಿಷಯದ ಬಗ್ಗೆ ಪರ–ವಿರೋಧ ಚರ್ಚೆ ನಡೆಯಿತು. ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ‘ಆಯಾ ವಿಭಾಗವಾರು ಬೋಧಕರ ಸಭೆ ನಡೆಸಿ, ಅಲ್ಲಿ ಚರ್ಚಿಸಿ ತೀರ್ಮಾನಿಸೋಣ. ನ್ಯೂನತೆ ಸರಿಪಡಿಸೋಣ’ ಎಂದು ಹೇಳಿದರು.

ಫೊರೆನ್ಸಿಕ್‌ ಸೈನ್ಸ್‌: ಸಮಿತಿ ರಚನೆ

ಬಿಎಸ್‌ಸಿಯಲ್ಲಿ ಫೊರೆನ್ಸಿಕ್‌ ಸೈನ್ಸ್‌ ಅನ್ನು ಒಂದು ವಿಷಯವಾಗಿ ಕಲಿಸಲು ವಿಶ್ವವಿದ್ಯಾಲಯ ಮುಂದಾಗಬೇಕು ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ.ಕೃಷ್ಣೇಗೌಡ ನೀಡಿದ ಸಲಹೆ ಸಭೆಯಲ್ಲಿ ಚರ್ಚೆಯಾಯಿತು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಫೊರೆನ್ಸಿಕ್‌ ಸೈನ್ಸ್‌ ವಿಭಾಗ ಆರಂಭಿಸಲಿಕ್ಕಾಗಿ ಡೀನ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಮುಂದಿನ ಶೈಕ್ಷಣಿಕ ಸಭೆಗಳಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸೋಣ ಎಂದು ಕುಲಪತಿ ತಿಳಿಸಿದರು.

ವಾರದಲ್ಲಿ ನಿರ್ಧಾರ: ಪದವಿ ಕಾಲೇಜು ಆರಂಭವಾಗಿವೆ. ಆದರೆ ಅಕಾಡೆಮಿಕ್ ಕ್ಯಾಲೆಂಡರ್ ಇನ್ನೂ ಬಿಡುಗಡೆಯಾಗಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ಪ್ರಸ್ತಾಪಿಸಿದ್ದಕ್ಕೆ, ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಗೊಂಡಿಲ್ಲ. ಮುಂದಿನ ವಾರದಲ್ಲಿ ಸರ್ಕಾರದೊಟ್ಟಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಮಂತ್‌ ಕುಮಾರ್‌ ಹೇಳಿದರು.

ವಿ.ವಿ.ಯ ಸ್ನಾತಕೋತ್ತರ ಪದವಿಯ ಎಲ್ಲಾ ವಿಭಾಗದಲ್ಲೂ ಹೊರ ರಾಜ್ಯದ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ, ಪ್ರತ್ಯೇಕ ಕೋಟಾ ನಿಗದಿಪಡಿಸುವಂತೆ ಪ್ರೊ.ನಿರಂಜನ್ ನೀಡಿದ ಸಲಹೆಯೂ ಸಭೆಯಲ್ಲಿ ಚರ್ಚೆಯಾಯ್ತು.

ವಿಧಾನ ಪರಿಷತ್‌ ಸದಸ್ಯ ಆರ್.ಧರ್ಮಸೇನ, ಶಿಕ್ಷಣ ಮಂಡಳಿಗೆ ಸದಸ್ಯರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಪ್ರೊ.ಮುಜಾಫರ್ ಅಸಾದಿ, ಮಂಡಳಿಯ ಸದಸ್ಯರಾದ ಪ್ರೊ.ಡಿ.ಆನಂದ್‌ ಮತ್ತಿತರರು ಸಭೆಯಲ್ಲಿದ್ದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಸ್ವಾಗತಿಸಿ, ವಂದಿಸಿದರು.

ಶಿಕ್ಷಣ ಮಂಡಳಿ ಸಭೆಯ ಪ್ರಮುಖ ನಿರ್ಧಾರಗಳು

* ಅನುಕಂಪ ಆಧಾರಿತ ಹುದ್ದೆ ಎಸ್‌ಡಿಸಿಯಿಂದ ಎಫ್‌ಡಿಸಿಗೆ

* ಚಿನ್ನದ ಪದಕದ ಮೊತ್ತ: ದೇಣಿಗೆ ಹೆಚ್ಚಳಕ್ಕೆ ಸಮಿತಿ ರಚನೆ

* ಘಟಕ ಕಾಲೇಜಾಗಿ ಹಳ್ಳಿ ಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು

* ದೃಷ್ಟಿ ವಿಶ್ವಾಸಿಗರ ಸಮನ್ವಯ ಸಬಲೀಕರಣ ಕೇಂದ್ರದಲ್ಲಿ ಅಂಧರಿಗೆ ಮೀಸಲಾತಿ

* ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಅಧ್ಯಯನ ಪೀಠದ ಚಟುವಟಿಕೆಗಳಿಗೆ ಅನುಮೋದನೆ

* ಸ್ಮಾರ್ಟ್‌ ವಿಲೇಜ್‌ನ ಆದಿವಾಸಿಗಳಿಗೆ 2 ಸ್ಥಾನ ಮೀಸಲು

* ಹೊಸ ಕಾಲೇಜು ಆರಂಭಕ್ಕೆ ಅನುಮತಿ

* ಡೆಪ್ಯುಟಿ ರಿಜಿಸ್ಟ್ರಾರ್‌ ಹುದ್ದೆಯಲ್ಲಿ ಮಹಿಳಾ ಮೀಸಲು

* ಪಿಎಚ್‌ಡಿ ನಿಯಮಾವಳಿ–2017ರ ಮಾರ್ಪಾಡಿಗೆ ಅನುಮೋದನೆ

* 2019–20ನೇ ಸಾಲಿನ ವಾರ್ಷಿಕ ವರದಿ ಸರ್ಕಾರಕ್ಕೆ ಸಲ್ಲಿಕೆ

* ಹೊಸ ವಿಶೇಷ ಕೋರ್ಸ್‌ ಆರಂಭಕ್ಕೆ ಅನುಮತಿ

* 40ಕ್ಕೂ ಹೆಚ್ಚು ಸಮಿತಿ ರಚನೆಗೆ ಅನುಮೋದನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು