ಬುಧವಾರ, ಸೆಪ್ಟೆಂಬರ್ 29, 2021
19 °C

ದಾನಿಗಳು ಕೊಟ್ಟ 8 ಸಾವಿರ ಪುಸ್ತಕ ಸೈಯದ್‌ ಇಸಾಕ್‌ ಗ್ರಂಥಾಲಯಕ್ಕೆ ಹಸ್ತಾಂತರ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪುಸ್ತಕ ಪ‍್ರೇಮಿ ಸೈಯದ್‌ ಇಸಾಕ್‌ ಅವರ ಗ್ರಂಥಾಲಯಕ್ಕೆ ನೀಡಲು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುಜಾಫರ್‌ ಅಸಾದಿ ಇದುವರೆಗೆ ಎಂಟು ಸಾವಿರ ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ರಾಜ್ಯದಲ್ಲಷ್ಟೇ ಅಲ್ಲದೆ, ದೇಶ–ವಿದೇಶಗಳಿಂದ ದಾನಿಗಳು ಪುಸ್ತಕಗಳನ್ನು ಉಚಿತವಾಗಿ ಕಳುಹಿಸಿಕೊಟ್ಟಿದ್ದು, ಮೈಸೂರು ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ಅಧ್ಯಯನ ವಿಭಾಗದ ಕೊಠಡಿಯಲ್ಲಿ ಜೋಡಿಸಿಡಲಾಗಿದೆ.

ಇಸಾಕ್‌ ಅವರ ಗ್ರಂಥಾಲಯವು ಬೆಂಕಿಗೆ ಆಹುತಿಯಾದ ಮರುದಿನವೇ ಪ್ರೊ.ಅಸಾದಿ ಅವರು ಪುಸ್ತಕ ದಾನ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ಅಮೆರಿಕ, ಕೆನಡಾ, ಇಂಗ್ಲೆಂಡ್‌, ದುಬೈ, ಕೋಲ್ಕತ್ತ, ದೆಹಲಿ, ಪಟಿಯಾಲ, ಲಖನೌ, ಮುಂಬೈ, ಹೈದರಾಬಾದ್‌, ವಿಶಾಖಪಟ್ಟಣ, ಚೆನ್ನೈ, ತಿರುವನಂತಪುರ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಉಚಿತ ಪುಸ್ತಕಗಳು ರವಾನೆಯಾಗಿವೆ.

‘ವಿವಿಧ ವಿಚಾರಗಳ ಪುಸ್ತಕಗಳು ಕೊಡುಗೆಯಾಗಿ ಬಂದಿದ್ದು, ಲೇಖಕರೊಬ್ಬರು 800 ಪುಸ್ತಕ ನೀಡಿದ್ದಾರೆ. ಅಂಬೇಡ್ಕರ್‌ ಜೀವನ ಕುರಿತ 22 ಸಂಪುಟಗಳು ಬಂದಿವೆ. ಯಾರು, ಯಾವ ಪುಸ್ತಕ ನೀಡಿದ್ದಾರೆ ಎಂಬುದರ ಕುರಿತು ದಾಖಲೀಕರಣ ಮಾಡುತ್ತಿದ್ದೇವೆ‌. ಗ್ರಂಥಾಲಯ ಕಟ್ಟಡ ನಿರ್ಮಿಸಿದ ಮೇಲೆ ಇಸಾಕ್‌ ಅವರಿಗೆ ಪುಸ್ತಕಗಳನ್ನು ಕೊಡಲಾಗುವುದು’ ಎಂದು ಪ್ರೊ.ಅಸಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಹಣ ಕೊಡಲು ಮುಂದೆ ಬರುತ್ತಿದ್ದಾರೆ. ಹಣ ಪಡೆಯುವುದಿಲ್ಲ. ಬದಲಾಗಿ ಪುಸ್ತಕ ಕಳುಹಿಸಿಕೊಡುವಂತೆ ಕೋರುತ್ತಿದ್ದೇನೆ‌’ ಎಂದರು.

ಉದಯಗಿರಿಯ ಶಾಂತಿನಗರದಲ್ಲಿ ಇಸಾಕ್‌ ಅವರ ಗ್ರಂಥಾಲಯಕ್ಕೆ ಏ.9ರಂದು ಬೆಂಕಿ ಕಿಡಿ ಬಿದ್ದು ಸಂಪೂರ್ಣ ಭಸ್ಮವಾಗಿತ್ತು. 10 ಸಾವಿರಕ್ಕೂ ಅಧಿಕ ಪುಸ್ತಕಗಳು ಸುಟ್ಟು ಬೂದಿಯಾಗಿದ್ದವು.

ಕಗ್ಗಂಟಾದ ಗ್ರಂಥಾಲಯ ನಿರ್ಮಾಣ: ಗ್ರಂಥಾಲಯ ಭಸ್ಮವಾದ ಜಾಗದಲ್ಲೇ ₹ 35 ಲಕ್ಷ ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಿಸಲು ಉದ್ದೇಶಿಸಿರುವ ಗ್ರಂಥಾಲಯ ಇಲಾಖೆಗೆ ಅನುದಾನದ ಸಮಸ್ಯೆ ಉಂಟಾಗಿದೆ.

ಸಿಎ ನಿವೇಶನ ನೀಡಲು ಮುಂದಾಗಿರುವ ಮುಡಾ, ಈಗ ಹಣ ಪಾವತಿಸುವಂತೆ ಇಲಾಖೆಯನ್ನು ಕೇಳುತ್ತಿದೆ. ಅಲ್ಲದೇ, ಕಟ್ಟಡ ನಿರ್ಮಿಸಿ ಕೊಡುವ ವಿಚಾರದಲ್ಲಿ ಪಾಲಿಕೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.

‘ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗುವುದು. ಅನುದಾನದ ವಿಚಾರ ಬಗೆಹರಿಯುತ್ತಿದ್ದಂತೆ ಗ್ರಂಥಾಲಯ ನಿರ್ಮಾಣಕ್ಕೆ ದಿನಾಂಕ ನಿಗದಿಪಡಿಸಲಾಗುವುದು. ಕಟ್ಟಡದಲ್ಲಿ ಇಸಾಕ್‌ ಅವರಿಗೆ ಒಂದು ಕೋಣೆ ಮಾತ್ರ ನಿಗದಿಪಡಿಸಿ ಅವರ ಪುಸ್ತಕ ಇಡಲು ಅವಕಾಶ ಮಾಡಿಕೊಡಲಾಗುವುದು. ಪುತ್ರನಿಗೆ ತಾತ್ಕಾಲಿಕ ಹುದ್ದೆ ನೀಡಲಾಗುವುದು’ ಎಂದು ಜಿಲ್ಲಾ ಹಾಗೂ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಮಂಜುನಾಥ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು