ಬುಧವಾರ, ಜುಲೈ 28, 2021
20 °C
ಮೈಸೂರು ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ನಿಯೋಗದಿಂದ ಸೆಸ್ಕ್‌ ಎಂಡಿ ಭೇಟಿ

ವಿದ್ಯುತ್‌ ಶುಲ್ಕ ಮನ್ನಾ: ಕ್ರಮದ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಂಎಸ್‍ಎಂಇಗಳಿಗೆ ಲಾಕ್‌ಡೌನ್ ಅವಧಿಯಲ್ಲಿನ ವಿದ್ಯುತ್‌ ನಿಗದಿತ ಶುಲ್ಕ ಮನ್ನಾ ಮಾಡುವಲ್ಲಿ ಆಗಿರುವ ವಿಳಂಬ ಮತ್ತು ಲೋಪ ಸರಿಪಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಮನೋಹರ ಎಂ.ಬೇವಿನಮರ ಶುಕ್ರವಾರ ಭರವಸೆ ನೀಡಿದ್ದಾರೆ.

ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಸು ನೇತೃತ್ವದ ನಿಯೋಗ ಭೇಟಿ ಮಾಡಿ, ದಾಖಲೆ ಸಹಿತ ಮನವಿ ಸಲ್ಲಿಸಿದ ಬಳಿಕ ಬೇವಿನಮರ ಈ ಭರವಸೆ ನೀಡಿದರು.

‘ವಿದ್ಯುತ್ ನಿಗದಿತ ಶುಲ್ಕ ಮನ್ನಾ ಸೌಲಭ್ಯ ಪಡೆಯಲು ಎಂಎಸ್ಎಂಇ ದೃಢೀಕರಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ ವಾಸ್ತವಿಕವಾಗಿ ಎಂಎಸ್ಎಂಇ ಉದ್ಯೋಗ್ ಆಧಾರ್ ಮೆಮೋರಂಡಮ್ ಪಡೆಯುವುದು ಎಂಎಸ್ಎಂಇ ಕಾಯ್ದೆ 2006ರ ಅನ್ವಯ ಕಡ್ಡಾಯವಾಗಿರುವುದಿಲ್ಲ. ಜುಲೈ 1ರಿಂದ ಕಾಯ್ದೆಯ ವ್ಯಾಖ್ಯಾನ, ಮಾನದಂಡ ಮತ್ತು ಹೆಸರು ‘ಉದ್ಯೋಗ ನೋಂದಣಿ’ ಎಂದು ಬದಲಾವಣೆಯಾಗಿದೆ. ಜತೆಗೆ ಈಗ ನೋಂದಣಿ ಸಂಖೈ ಮಾತ್ರ ಆನ್‍ಲೈನ್‍ನಲ್ಲಿ ದೊರೆಯುತ್ತಿದ್ದು, ಉದ್ಯೋಗ ನೋಂದಣಿ ಪತ್ರ ದೊರೆಯುತ್ತಿಲ್ಲ’ ಎಂಬ ವಿಷಯವೂ ಚರ್ಚೆ ಸಂದರ್ಭ ಪ್ರಸ್ತಾಪವಾಯ್ತು.

ಕೈಗಾರಿಕೆ ಪ್ರಾರಂಭದ ಮೊದಲು ಇ.ಎಂ ಭಾಗ 1 ಪಡೆದ, ಮುದ್ರಣಾಲಯಗಳು, ನ್ಯೂಸ್ ಪೇಪರ್ ಪ್ರಿಂಟಿಂಗ್ ಉದ್ಯಮ, ಸಾಮಿಲ್, ಮದ್ಯ ತಯಾರಿಕೆ, ರವೆ ಮಿಲ್, ಜಾಗರಿ, ಕಾಫಿ ರೋಸ್ಟಿಂಗ್ ಇತ್ಯಾದಿ ಕೈಗಾರಿಕೆಗಳು ಸರ್ಕಾರದ ಸಹಾಯ ಧನ, ಪ್ರೋತ್ಸಾಹ, ಸೌಲಭ್ಯ ಮತ್ತು ರಿಯಾಯಿತಿಗಳಿಲ್ಲದ ಕಾರಣ ಇಎಂ ಭಾಗ 2 ಅಥವಾ ಎಂಎಸ್ಎಂಇ ನೋಂದಣಿ ಪತ್ರ ಪಡೆದಿರುವುದಿಲ್ಲ.

ಈ ಉದ್ಯಮಗಳು ಈಗ ಪಡೆದಿರುವ ಎಂಎಸ್ಎಂಇ ಪ್ರಮಾಣ ಪತ್ರವನ್ನು ಮತ್ತು ಜುಲೈ 1ರ ನಂತರ ಪಡೆದ ಉದ್ಯೋಗ ನೋಂದಣಿ ಪತ್ರದ ಸಂಖ್ಯೆಯನ್ನು ಪರಿಗಣಿಸಿ ವಿದ್ಯುತ್ ನಿಗದಿತ ಶುಲ್ಕ ಮನ್ನಾ ಸೌಲಭ್ಯ ನೀಡಬೇಕು ಎಂದು ನಿಯೋಗ ತನ್ನ ಮನವಿಯಲ್ಲಿ ತಿಳಿಸಿದೆ.

ಕೆಲವೊಂದು ಸಣ್ಣ ಕೈಗಾರಿಕೆಗಳು ಮಾಹಿತಿ ಕೊರತೆಯಿಂದ, ಗುತ್ತಿಗೆದಾರರ ಸಲಹೆ ಕೊರತೆಯಿಂದ ಕೈಗಾರಿಕಾ ವರ್ಗ ಎಲ್.ಟಿ 5ರ ಬದಲು, ವಾಣಿಜ್ಯ ಎಲ್.ಟಿ 3 ಸಂಪರ್ಕ ಪಡೆದಿವೆ. ಈ ಉದ್ಯಮಗಳ ವಿದ್ಯುತ್ ಸಂಪರ್ಕವನ್ನು ವಾಣಿಜ್ಯದಿಂದ ಕೈಗಾರಿಕಾ ವರ್ಗಕ್ಕೆ ಬದಲಾಯಿಸಿ ವಿದ್ಯುತ್ ನಿಗದಿತ ಶುಲ್ಕ ವಿನಾಯಿತಿ ನೀಡಬೇಕು ಎಂದೂ ಇದೇ ಸಂದರ್ಭ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪಿ.ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಓ.ಡಿ, ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಖಜಾಂಚಿ ಮಂಜುನಾಥ್, ಕಾಸಿಯಾ ಪ್ರತಿನಿಧಿ ಎನ್.ಸತೀಶ್, ಬೆಳವಾಡಿ ಕೈಗಾರಿಕಾ ಪ್ರದೇಶದ ಪ್ರತಿನಿಧಿ ಅಮೀರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು