ಸೋಮವಾರ, ಸೆಪ್ಟೆಂಬರ್ 16, 2019
29 °C
ಪುತ್ರರಾದ ಸೋಮಶೇಖರ, ಶಿವಕುಮಾರ ಅವರೂ ಕಲಾಯನಾದಲ್ಲಿ ಭಾಗಿ

ನಂದಿಧ್ವಜದ ಸಾಧಕ ಇಂದ್ರಶೇಖರ್

Published:
Updated:
Prajavani

ಬೆಟ್ಟದಪುರ: ತಂಬಾಕು ಮಂಡಳಿಯಲ್ಲಿ ‘ಡಿ’ ದರ್ಜೆಯ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಇ.ಇಂದ್ರಶೇಖರ್ ನಂದಿಧ್ವಜ ಕುಣಿತದಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಕಲಾವಿದರು. ಕಳೆದ 30 ವರ್ಷಗಳಿಂದಲೂ ಇವರು ಇದೇ ಕಲೆಯನ್ನು ಹವ್ಯಾಸವಾಗಿ ಸ್ವೀಕರಿಸಿ ಹಲವೆಡೆ ಪ್ರದರ್ಶನಗಳನ್ನು ನೀಡಿದ್ದಾರೆ. ಜತೆಗೆ, ಇವರ ಪುತ್ರರಾದ ಸೋಮಶೇಖರ ಮತ್ತು ಶಿವಕುಮಾರ ಅವರೂ ಕಲೆಯಲ್ಲಿ ಪಾರಂಗತರಾಗಿದ್ದಾರೆ.

20 ರಿಂದ 25 ಅಡಿ ಉದ್ದ ಮತ್ತು 4 ಇಂಚು ಅಗಲವಿರುವ ನಂದಿಧ್ವಜವನ್ನು ಹೊತ್ತುಕೊಂಡು ಕುಣಿಯಬೇಕೆಂದರೆ ಅಸಾಧ್ಯ ಪ್ರತಿಭೆ ಮತ್ತು ಸಾಮರ್ಥ್ಯ ಇರಬೇಕು. ಇದಕ್ಕೆ ಸಾಕಷ್ಟು ಕೌಶಲವೂ ಬೇಕು. ಇಂತಹ ಅಪರೂಪದ ಮತ್ತು ಕ್ಲಿಷ್ಟದ ಕಲೆಯನ್ನು ಇವರು ಕರಗತ ಮಾಡಿಕೊಂಡು ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರುವಾಸಿಯಾಗಿದ್ದಾರೆ.

‘ನಾವು ಈ ನೃತ್ಯಕಲೆಯನ್ನು ಕಲಿಯಲು ತಮ್ಮ ತಂದೆಯೇ ಸ್ಪೂರ್ತಿ’ ಎನ್ನುವ ಇವರು ‘ಚಿಕ್ಕಂದಿನಲ್ಲಿ ತಂದೆ ನಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡು ನೃತ್ಯಭ್ಯಾಸ ಮಾಡುತ್ತಿದ್ದರು’ ಎಂದು ಸ್ಮರಿಸುತ್ತಾರೆ.

‘ನವರಾ’ ಎಂಬ ಚೀಲವನ್ನು ಧರಿಸಿ ಅದರಲ್ಲಿ ಬಿದಿರಿನ ಧ್ರುವವು ಸಮತೋಲಿತವಾಗಿ ಇಟ್ಟುಕೊಂಡು ಅಭಿನಯದ ಸಮಯದಲ್ಲಿ ಲಯ ಬದ್ಧ ಚಲನೆಗಳು ಮತ್ತು ಸಂಗೀತದ ಜೊತೆಗೂಡಿ ಭಾವನಾತ್ಮಕ ರಾಗಗಳಿಗೆ ಹೆಜ್ಜೆ ಹಾಕಬೇಕು. ಇದಕ್ಕೆ ದೇಹದಲ್ಲಿ ಸಾಕಷ್ಟು ಸಾಮರ್ಥ್ಯ ಮತ್ತು ಸತತ ಅಭ್ಯಾಸ ಇರಲೇಬೇಕು ಎಂದು ಅವರು ಹೇಳುತ್ತಾರೆ.

ತಾಲ್ಲೂಕಿನ ಕೆಲ್ಲೂರು ಗ್ರಾಮದಲ್ಲಿ ಈ ನಂದಿ ಧ್ವಜವನ್ನು ಇವರಿಗೆ ನೀಡಲಾಯಿತು. ಇದನ್ನೇ ಇವರು ತಮ್ಮ ಕಲೆಯ ಅಭಿವ್ಯಕ್ತಿಗೆ ಬಳಸಿಕೊಂಡಿದ್ದಾರೆ.

ಕಿಲ್ಲೂರು ಗೌರಮ್ಮತಾಯಿ ಯುವಕರ ಸಂಘ, ಪಿರಿಯಾಪಟ್ಟಣ ಬಸವೇಶ್ವರ ಸೇವಾ ಸಮಿತಿ, ವೀರಶೈವ ಸಜ್ಜನ ಬಳಗ ಸಂಘಟನೆಯ ಸದಸ್ಯರಿಗೆ ಇವರು ಕಲಿಸುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳಾದ ಸೋಮಶೇಖರ ಮತ್ತು ಶಿವಕುಮಾರ ಅವರಿಗೂ ಸಹ ಚಿಕ್ಕದಿನಿಂದಲೂ ಈ ಕಲೆಯನ್ನು ಕಲಿಸುತ್ತಾ ಬಂದಿದ್ದಾರೆ.

ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಸೇರಿದಂತೆ ಯುವ ದಸರಾ, ಗ್ರಾಮೀಣ ದಸರಾ, ನಾಡಹಬ್ಬ, ಆರಾಧನೆ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬಸವೇಶ್ವರ ದೇವತಾ ಕಾರ್ಯಗಳಲ್ಲಿ ವಿಶೇಷವಾಗಿ ಭಾಗವಹಿಸಿ ಈ ಕಲೆಯ ಪ್ರದಶನ ನೀಡಿ ಗ್ರಾಮೀಣ ಭಾಗದಲ್ಲಿ ಮನೆಮಾತಾಗಿದ್ದಾರೆ.

Post Comments (+)