ಭಾನುವಾರ, ಏಪ್ರಿಲ್ 18, 2021
29 °C
ಮುರಿದುಬಿದ್ದಿವೆ ಫುಟ್‌ಪಾತ್‌ಗಳಿಗೆ ಅಳವಡಿಸಿರುವ ಟೈಲ್ಸ್‌, ಮೃತ್ಯುಕೂಪವಾದ ಫುಟ್‌ಪಾತ್‌

ಪಾದಚಾರಿ ಮಾರ್ಗ: ಅಪಾಯದ ಹಾದಿ...

ಪ್ರದೀಪ ಕುಂದಣಗಾರ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾಂಸ್ಕೃತಿಕ ನಗರಿ, ಪ್ರವಾಸಿಗರ ತಾಣವಾಗಿರುವ ಮೈಸೂರಿನ ಅಂದವನ್ನು ಹೆಚ್ಚಿಸುವ ಸಲುವಾಗಿ ಸದಾ ಒಂದಿಲ್ಲೊಂದು ಕಾಮಗಾರಿ ನಡೆಯುತ್ತಲೇ ಇರುತ್ತದೆ. ರಸ್ತೆ ರಿಪೇರಿ, ಡಾಂಬರೀಕರಣ, ಕಾಂಕ್ರೀಟೀಕರಣ, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಗಳಿಗೆ ಬಿಳಿ ಪಟ್ಟಿ, ರಸ್ತೆ ಮಧ್ಯೆ ಪ್ರತಿಫಲಿಸುವ ದೀಪಗಳನ್ನು ಅಳವಡಿಸಲಾಗುತ್ತಿದೆ. ಕೆಲವು ಕಡೆ ಪಾದಚಾರಿ ಮಾರ್ಗ (ಫುಟ್‌ಪಾತ್‌ಗಳಿಗೆ ಟೈಲ್ಸ್‌ ಹಾಕಲಾಗುತ್ತಿದೆ. ಅಲ್ಲದೆ, ಫುಟ್‌ಪಾತ್‌ಗಳ ಅಂಚಿಗೆ ಸ್ಟೀಲ್ ಬ್ಯಾರಿಕೇಡ್‌ಗಳನ್ನೂ ಅಳವಡಿಸಲಾಗುತ್ತಿದೆ. ಇವುಗಳು ರಸ್ತೆಗೆ ಅಂದವನ್ನೂ, ಪಾದಚಾರಿಗಳಿಗೆ ಖುಷಿಯನ್ನೂ ನೀಡುವಂತಿವೆ. ಆದರೆ, ಫುಟ್‌ಪಾತ್‌ ಚೆನ್ನಾಗಿದೆ ಎಂದು ಆರಾಮವಾಗಿ ನಡೆದಾಡುವಂತಿಲ್ಲ. ಸ್ವಲ್ಪ ಮೈಮರೆತರೂ ಬೀಳುವ ಅಪಾಯವೇ ಹೆಚ್ಚಾಗಿದೆ.

ನಗರದ ಬಹುತೇಕ ಫುಟ್‌ಪಾತ್‌ಗಳು ಇನ್ನೂ ಸುಧಾರಣೆ ಕಾಣಬೇಕಿದೆ. ಅವ್ಯವಸ್ಥೆಯಿಂದಾಗಿ ಪಾದಚಾರಿಗಳು ನಿರ್ಭಯವಾಗಿ ಓಡಾಡುವಂತಿಲ್ಲ. ಫುಟ್‌ಪಾತ್‌ಗಳಿಗೆ ಅಳವಡಿಸಿರುವ ಟೈಲ್ಸ್‌ ಮುರಿದುಬಿದ್ದಿವೆ. ಅರಮನೆ ಮುಂಭಾಗದ ರಸ್ತೆಯ (ವಸ್ತುಪ್ರದರ್ಶನ ಮೈದಾನದ ಬಳಿ) ಪಾದಚಾರಿ ಮಾರ್ಗವಂತೂ ಮೃತ್ಯುಕೂಪದಂತಿದೆ.

ರಾಜಪಥ ರಸ್ತೆಯನ್ನಾಗಿ ನಿರ್ಮಾಣ ಮಾಡಿದ್ದು, ಪಾದಚಾರಿ ಮಾರ್ಗಗಳ ಅಂಚಿಗೆ ವಿನ್ಯಾಸಗೊಳಿಸಿರುವ ಕಲ್ಲಿನ ಕಂಬಗಳನ್ನು ನಿಲ್ಲಿಸಿ ಅಂದ ಹೆಚ್ಚಿಸಿದ್ದಾರೆ. ಆದರೆ, ಈಗ ಅವುಗಳಲ್ಲಿ ಕೆಲವು ಕಂಬಗಳು ಕಳಚಿಕೊಂಡು ಅಂದಗೆಟ್ಟಿದೆ. ವಸ್ತುಪ್ರದರ್ಶನ ಮೈದಾನಕ್ಕೆ ಹೋಗಲು ಸಬ್‌ ವೇ ಬಳಿ ಮುರಿದ ಕಂಬಗಳ ರಾಶಿಯೇ ಇದೆ. ಅದನ್ನು ತೆಗೆಯುವ, ದುರಸ್ತಿಗೊಳಿಸುವ ಕಾರ್ಯ ಹಲವು ತಿಂಗಳಾದರೂ ನಡೆದಿಲ್ಲ.

ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಬಾಕ್ಸ್‌ ಚರಂಡಿ ನಿರ್ಮಿಸಲಾಗಿದ್ದು, ಅದರ ಮೇಲೆ ಟೈಲ್ಸ್‌ ಅಳವಡಿಸಿ ಪಾದಚಾರಿಗಳು ಸಂಚರಿಸಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಅಲ್ಲಲ್ಲಿ ಟೈಲ್ಸ್‌ ಸರಿದಾಡಿವೆ. ಒಂದೆರಡು ಕಡೆ ಟೈಲ್ಸ್‌ ಮುರಿದಿದ್ದು ಮಧ್ಯದಲ್ಲಿ ದೊಡ್ಡದಾದ ಹಳ್ಳ ಬಿದ್ದಂತಾಗಿದೆ. ಬಿಸಿಲಿದ್ದಾಗ, ಮಳೆ ಬಂದಾಗ ಅದು ಹತ್ತಿರ ಹೋಗುವವರೆಗೂ ಕಾಣುವುದೇ ಇಲ್ಲ. ರಾತ್ರಿಯ ಸ್ಥಿತಿ ಹೇಳುವುದೇ ಬೇಡ. ಹೀಗಾಗಿ ಪಾದಚಾರಿಗಳು ಅವಸರದಲ್ಲಿ ಹೆಜ್ಜೆ ಹಾಕಿದರೆ ಅಪಾಯ ಖಂಡಿತ. ಟೈಲ್ಸ್‌ ಕಿತ್ತುಹೋದ ಕೆಲವು ಕಡೆ 2 ಅಡಿ ಆಳ ಇದ್ದು, ಎಡವಿ ಬಿದ್ದರೆ, ಹಳ್ಳದಲ್ಲಿ ಇಲ್ಲವೇ ಕಾಂಕ್ರೀಟ್ ಗೋಡೆಗೆ ತಾಗಿ ಗಾಯವಾಗುವ ಸಂಭವವೂ ಇದೆ.

ನಗರದ ಆಲ್ಬರ್ಟ್‌ ವಿಕ್ಟರ್‌ ರಸ್ತೆಯ ರಾಜಕುಮಾರ್‌ ಉದ್ಯಾನದ ಬದಿಯಲ್ಲೂ ಕೆಲವು ಕಡೆ ಪಾದಚಾರಿ ಮಾರ್ಗದ ಟೈಲ್ಸ್‌ ಕಿತ್ತುಹೋಗಿ ಅಪಾಯಕ್ಕೆ ಆಹ್ವಾನಿಸುತ್ತಿವೆ.

ಹಲವಾರು ಪ್ರವಾಸಿಗರು ಅರಮನೆಯನ್ನು ನೋಡಿ ಮೃಗಾಲಯ ವೀಕ್ಷಿಸಲು ನಡೆದುಕೊಂಡೇ ಹೋಗುತ್ತಾರೆ. ಕತ್ತಲಾದಾಗ ಅನೇಕ ಮಂದಿ ಇದೇ ಪಾದಚಾರಿ ಮಾರ್ಗಗಳ ಮೇಲೆಯೇ ನಡೆದುಕೊಂಡು ಹೋಗಬೇಕು. ವಿದ್ಯುತ್‌ ಇಲ್ಲದ ವೇಳೆ, ಮಳೆ ಹೆಚ್ಚಿದ್ದಾಗ ಟೈಲ್ಸ್‌ ಕಿತ್ತುಹೋಗಿರುವುದು ಗಮನಕ್ಕೆ ಬಾರದೆ ಎಡವಿ ಬೀಳುವ ಅಪಾಯ ಇದೆ. ವಾಹನ ಸಂಚಾರಕ್ಕೆ ಸೂಕ್ತ ರಸ್ತೆ ನಿರ್ಮಿಸುವ ಪಾಲಿಕೆ ಆಡಳಿತ ಪಾದಚಾರಿಗಳಿಗೂ ಸರಿಯಾದ ರೀತಿಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಆಟೊ ಚಾಲಕ ಜಗದೀಶ್ ಒತ್ತಾಯಿಸುತ್ತಾರೆ.

ಜನನಿಬಿಡ ರಸ್ತೆಯ ಸ್ಥಿತಿ ಹೀಗಿದೆ: ಹಗಲು-ರಾತ್ರಿಯೆನ್ನದೆ ಸದಾ ಜನರಿಂದ ತುಂಬಿರುವ ಸಯ್ಯಾಜಿರಾವ್ ರಸ್ತೆ, ದೇವರಾಜ್‌ ಮಾರುಕಟ್ಟೆ ಸುತ್ತಲಿನ ಪ್ರದೇಶದಲ್ಲೂ ಫುಟ್‌ಪಾತ್‌ ಸಮಸ್ಯೆ ಸಾಕಷ್ಟಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ವ್ಯಾಪಾರದ ದಟ್ಟಣೆಯಲ್ಲಿ ಪಾದಚಾರಿಗಳು ನುಸುಳಿಕೊಂಡು ಮುಂದೆ ಸಾಗಬೇಕು. ಜೋರಾಗಿ ಮಳೆಯಾದರೆ ಸಾಕು ಫುಟ್‌ಪಾತ್‌ ಮೇಲೆ ಅರ್ಧ ಅಡಿಗಿಂತ ಹೆಚ್ಚು ನೀರು ಹರಿಯುತ್ತಿರುತ್ತದೆ. ಅದರಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆ ಗುರು ಸ್ವೀಟ್ಸ್‌ನಿಂದ ಬಾಟಾ ಶೋ ರೂಂವರೆಗೆ ಹೆಚ್ಚಿದೆ.

ಚಿಕ್ಕಗಡಿಯಾರದ ಸುತ್ತಮುತ್ತ ಫುಟ್‌ಪಾಟ್‌ ಇದ್ದರೂ ಅದು ಅಂಗಡಿಯವರ ಸಾಮಗ್ರಿ ಇಡಲಿಕ್ಕೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಮಾತ್ರ ಎನ್ನುವಂತಾಗಿದೆ.

ಸಂತೆ ಪೇಟೆ ಹೋಗುವ ವಾರ್ಗದಲ್ಲಿ ಪಾದಚಾರಿ ಮಾರ್ಗದಲ್ಲಿಯೇ ವಿದ್ಯುತ್‌ ಕಂಬ, ಅದಕ್ಕೆ ಹೊಂದಿಕೊಂಡೆ ವ್ಯಾಪಾರ ಹೀಗಾಗಿ ಜನನಬಿಡ ರಸ್ತೆಯಲ್ಲಿಯೇ ಪಾದಚಾರಿಗೆ ದಾರಿಯೇ ಇಲ್ಲದೇ ಮುಖ್ಯ ರಸ್ತೆಯೇ ರಾಜಮಾರ್ಗವಾಗಿದೆ.

ಅಗ್ರಹಾರ, ನಾರಾಯಣಶಾಸ್ತಿ ರಸ್ತೆ, ಇರ್ವೀನ್ ರಸ್ತೆ, ಜೆಎಲ್‌ಬಿ ರಸ್ತೆ, ದಿವಾನ್ಸ್‌ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಹೀಗೆ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಫುಟ್‌ಪಾತ್‌ ಪಾದಚಾರಿಗಳಿಗಿಂತ ಅಂಗಡಿಯವರ ವಸ್ತುಗಳನ್ನು ಇಟ್ಟುಕೊಳ್ಳಲು ಬಳಕೆಯಾಗುತ್ತಿದ್ದು, ಪಾದಚಾರಿಗಳ ಸಮಸ್ಯೆ ನಿತ್ಯನೂತನವಾಗಿದೆ.

ಸರಸ್ವತಿಪುರಂ ಕಾಮಾಕ್ಷಿ ಆಸ್ಪತ್ರೆಯ ಸುತ್ತಲಿನ ಪ್ರದೇಶ, ಕುವೆಂಪುನಗರದ ಪ್ರಮುಖ ರಸ್ತೆಗಳು, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ನಂಜು ಮಳಿಗೆ ಸುತ್ತಮುತ್ತ ಹೀಗೆ ಪ್ರಮುಖ ಸ್ಥಳಗಳಲ್ಲೂ ಪಾದಚಾರಿ ಮಾರ್ಗಗಳು ಜನ ಬಳಕೆಗೆ ಅಷ್ಟಕಷ್ಟೇ ಎನ್ನುವಂತಿವೆ.

ಸ್ಥಳ ಪರಿಶೀಲಿಸಿ ಕ್ರಮ
ನಗರದ, ಅರಮನೆ ಸುತ್ತಲಿನ ಪ್ರದೇಶ ಸೇರಿದಂತೆ, ಪ್ರಮುಖ ಸ್ಥಳಗಳ ಪಾದಚಾರಿ ಮಾರ್ಗಗಳನ್ನು ಖುದ್ದಾಗಿ ಪರಿಶೀಲಿಸುವೆ. ಸಮಸ್ಯೆ ಆಲಿಸಿ ಸೋಮವಾರದ ನಂತರ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ನಾಗರಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಕಮಿಷನರ್ ಶಿಲ್ಪಾ ನಾಗ್‌ ಹೇಳಿದರು.

ಜನ ಏನಂತಾರೆ?

ಮಳೆಯಾದರೆ ಅಂಗಡಿಗೆ ನೀರು
ಕಾಂಕ್ರೀಟ್ ಮಾಡಿದ್ದರಿಂದ ಸಯ್ಯಾಜಿರಾವ್ ರಸ್ತೆ ಚೆನ್ನಾಗಿ ಆಗಿದೆ. ಅದಕ್ಕೆ ತಕ್ಕಂತೆ ಫುಟ್‌ಪಾತ್ ಎತ್ತರಗೊಳಿಸಿಲ್ಲ. ರಸ್ತೆ ಬದಿಗೆ ಮಳೆ ನೀರು ಹೋಗಲು ವ್ಯವಸ್ಥೆಯನ್ನೂ ಮಾಡಿಲ್ಲ. ಹೀಗಾಗಿ ಮಳೆಯಾದರೆ ಫುಟ್‌ಪಾತ್‌ ಹಾಗೂ ಅಂಗಡಿಗೆ ನೀರು ನುಗ್ಗುತ್ತದೆ. ಕಳೆದ ವಾರ ಎರಡ್ಮೂರು ಬಾರಿ ಮಳೆಯಾದಾಗ ಅಂಗಡಿಗೆ ನುಗ್ಗಿದ್ದ ನೀರನ್ನು ಹೊರಹಾಕಲು, ಒರೆಸಲು ಅರ್ಧ ದಿನವೇ ಹಿಡಿಯಿತು. ನಮ್ಮ ಸಮಸ್ಯೆ ಕೇಳುವವರೇ ಇಲ್ಲ.
–ಶರಣ್‌, ಬಟ್ಟೆ ವ್ಯಾಪಾರಿ

ಸಮಸ್ಯೆ ತಪ್ಪಿಸಲು ಮನವಿ
ಜನರಿಗೆ ಅನುಕೂಲವಾಗಲೆಂದು ಸಯ್ಯಾಜಿರಾವ್‌ ರಸ್ತೆಯಲ್ಲಿ ಸಬ್‌ ವೇ ಮಾಡಿದ್ದಾರೆ. ಆದರೆ, ಅದು ಸ್ವಚ್ಛತೆ ಇಲ್ಲದೆ ಅನನುಕೂಲವೇ ಹೆಚ್ಚಾಗಿದೆ. ಕಸ– ಕಡ್ಡಿ ಬಿದ್ದು, ಮಳೆ ನೀರು ನಿಂತು ಸೊಳ್ಳೆಗಳ ತಾಣವಾಗಿದೆ. ಫುಟ್‌ಪಾತ್‌ ವ್ಯವಸ್ಥೆ ಸರಿಯಾದರೆ, ಗ್ರಾಹಕರಿಗೂ– ವ್ಯಾಪಾರಿಗಳಿಗೂ ಅನುಕೂಲವಾಗಲಿದೆ.
–ದೀಪಕ್, ವ್ಯಾಪಾರಿ

ಭಯದಲ್ಲಿ ನಡೆಯುವ ಸ್ಥಿತಿ
ಮಾರುಕಟ್ಟೆ ಪ್ರದೇಶಕ್ಕೆ ಮಕ್ಕಳನ್ನು ಕರೆದುಕೊಂಡು ಹೋದರೆ, ರಸ್ತೆ ಮೇಲೆ ನಡೆಯಬೇಕಾಗುತ್ತದೆ. ಆಗ ವಾಹನಗಳು ಎಲ್ಲಿ ಡಿಕ್ಕಿ ಹೊಡೆಯುವವೋ ಎಂಬ ಭಯವೂ ಪಾದಚಾರಿಗಳದ್ದಾಗಿದೆ. ವ್ಯಾಪಾರಿ ಸ್ಥಳಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟರೆ ಉತ್ತಮ. ಇದು ವ್ಯಾಪಾರಕ್ಕೂ ಸಹಕಾರಿಯಾಗುವುದು.
–ಪಿ.ಕೆ.ಅನಿಲ್‌ಕುಮಾರ್, ನಾಗರಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು