ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಶುಂಠಿ ಬೆಳೆಗೆ ಮುಗಿಬಿದ್ದ ರೈತ

ವಿಶೇಷ ವರದಿ
Last Updated 24 ಡಿಸೆಂಬರ್ 2019, 5:59 IST
ಅಕ್ಷರ ಗಾತ್ರ

ಹುಣಸೂರು: ಹುಣಸೂರು ಉಪ‍ ವಿಭಾಗದ ವಾಣಿಜ್ಯ ಬೆಳೆ ಶುಂಠಿ ಬೇಸಾಯ ಭರದಿಂದ ಸಾಗಿದ್ದು, ರೈತರು ಹೊಲ ಹದಗೊಳಿಸುವಲ್ಲಿ ತೊಡಗಿದ್ದಾರೆ.

ತಾಲ್ಲೂಕು ಸೇರಿದಂತೆ ಉಪವಿಭಾಗದ ನಾಲ್ಕು ತಾಲ್ಲೂಕಿನಲ್ಲೂ ಶುಂಠಿ ಬೇಸಾಯ ಬೆಳೆಯುವಲ್ಲಿ ರೈತ ಆಸಕ್ತಿ ತೋರಿ ಆರ್ಥಿಕ ಸಧೃಡತೆಗೆ ಲಗ್ಗೆ ಹಾಕಿದ್ದಾನೆ. ಈ ಬೆಳೆ ಬಹುತೇಕ ಇಳಿಜಾರು ಪ್ರದೇಶದ ಕೆಂಪು ಮಣ್ಣು ಅಥವಾ ಮೃದು ಮಣ್ಣಿನಲ್ಲಿ ಬೆಳೆಯುವುದು ಸಾಮಾನ್ಯ.

ತಾಲ್ಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೇಸಾಯ ಮಾಡುವ ಅಂಕಿ ಅಂಶವಿದ್ದು, ಕಳೆದ ಸಾಲಿನಲ್ಲಿ ಈ ಬೆಳೆಗೆ ಉತ್ತಮ ದರ ಸಿಗಲಾಗಿ ಈ ಸಾಲಿನಲ್ಲಿ ಬೆಳೆ ಮತ್ತಷ್ಟು ಹೆಚ್ಚಿನ ಪ್ರದೇಶದಲ್ಲಿ ಆವರಿಸುವ ಸಾಧ್ಯತೆ ಇದೆ.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧರಾಜು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ಶುಂಠಿ ಬೇಸಾಯ ಈ ಹಿಂದೆ ಮಲೆನಾಡು ಪ್ರದೇಶದಲ್ಲಿ ವಾಡಿಕೆ ಬೆಳೆಯಾಗಿತ್ತು. ಹುಣಸೂರು ಉಪವಿಭಾಗದಲ್ಲಿ ಕೇರಳದ ವಲಸಿಗ ರೈತರು ಶುಂಠಿ ಬೇಸಾಯ ಆರಂಭಿಸಿ ಈಗ ಅವ್ಯಾಹಿತವಾಗಿ ಹರಡಿಕೊಂಡಿದೆ ಎಂದು ತಿಳಿಸಿದರು.

ಬಿತ್ತನೆಗೆ ಸಿದ್ಧತೆ: ಶುಂಠಿ ಬಿತ್ತನೆ ಬೀಜ ಪ್ರತಿ 60 ಕೆ.ಜಿ ಬ್ಯಾಗ್‌ಗೆ ₹ 4 ಸಾವಿರವಿದ್ದು, ಒಂದು ಹೆಕ್ಟೇರ್ ಪ್ರದೇಶಕ್ಕೆ 1,500 ರಿಂದ 1,600 ಕೆ.ಜಿ ಬಿತ್ತನೆ ಬೇಕಾಗುತ್ತದೆ. ಇದಲ್ಲದೆ ಒಂದು ಹೆಕ್ಟೇರ್ ಪ್ರದೇಶಕ್ಕೆ ಕೊಟ್ಟಿಗೆ ಗೊಬ್ಬರ 8 ರಿಂದ 10 ಟನ್ ಅಗತ್ಯವಿದೆ. ಇದಲ್ಲದೆ, ರಾಸಾಯನಿಕ ಗೊಬ್ಬರ ಹೆಚ್ಚುವರಿಯಾಗಿ ಎರಡು ಬಾರಿ ನೀಡಬೇಕಾಗುವುದು. ಒಟ್ಟು ಒಂದು ಹೆಕ್ಟೇರ್ ಶುಂಠಿಗೆ ಕನಿಷ್ಠ ₹ 2ರಿಂದ 3 ಲಕ್ಷ
ಬಂಡವಾಳ ಬೇಕಾಗುವುದು ಎಂದು ಮಾಹಿತಿ ನೀಡಿದರು.

ವಾರ್ಷಿಕ ಬೆಳೆ ಶುಂಠಿಗೆ ಅಗತ್ಯಕ್ಕೆ ತಕ್ಕಷ್ಟು ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿದ ಔಷಧೋಪಚಾರ ಮಾಡಿದರೆ ಸಾಕು. ರೈತರು
ಮನಸೋಯಿಚ್ಛೆ ಔಷಧಿ ಬಳಸುತ್ತಿದ್ದು ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಇಲಾಖೆ ಸಾವಯವ ಗುಣವುಳ್ಳ ‘ಕಾಪರ್ ಆಕ್ಸೈಡ್ ಕ್ಲೋರೈಡ್‌’ ಶಿಫಾರಸು ಮಾಡುತ್ತಿದ್ದಾರೆ. ಕೆಲವರು ಕೇರಳ ವಲಸಿಗರು ಬಳಸುವ ಹಾನಿಕಾರಕ ಔಷಧಿ ‘ರೆಡಾಮಿಲ್’ ಬಳಸುತ್ತಿದ್ದು ಇದರಿಂದ ಅನೇಕ ಸಮಸ್ಯೆ ಎದುರಿಸಬೇಕಾಗುವುದು. ಬೆಳೆ ಬಳಿದ ಬಳಿಕ ಸೇವನೆಯಿಂದ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಸಿದರು.

ಶುಂಠಿ ಹೊಲದ ತೇವಾಂಶ ಕಾದುಕೊಳ್ಳಲು ನೆರಳಿಗೆ ರೈತರು ಕಬ್ಬಿನ ತರಗಿಗೆ ಮೊರೆ ಹೋಗಿದ್ದಾರೆ. ಒಂದು ಟ್ರ್ಯಾಕ್ಟರ್ ಲೋಡ್
ಕಬ್ಬಿನ ತರಗು ₹ 6 ಸಾವಿರ ನೀಡಿ ಖರೀದಿಸಬೇಕಾಗಿದೆ ಎಂದು ರೈತರು ಹೇಳಿದರು.

*
ತಂಬಾಕು ಬೇಸಾಯಕ್ಕಿಂತಲೂ ಶುಂಠಿ ಬೇಸಾಯ ಪರ್ಯಾಯ ಆರ್ಥಿಕ ಬೆಳೆಯಾಗಿದ್ದು, 1 ಹೆಕ್ಟೇರ್ ಪ್ರದೇಶದಲ್ಲಿ 40ರಿಂದ 45 ಟನ್‌ ಸರಾಸರಿ ಬೆಳೆ ಬೆಳೆಯಬಹುದು.
-ಮಹದೇವ್, ರೈತ, ನೇರಳಕುಪ್ಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT