ಮೈಸೂರು: ‘ಬುದ್ಧಿಜೀವಿಗಳು ತಮ್ಮ ಸಮುದಾಯಗಳನ್ನು ವಿಮರ್ಶಿಸುವ ಮೂಲಕ ಅವುಗಳನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದಾರೆ. ಅಂತಹ ಕೆಲಸವನ್ನು ನಟ, ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅವರು ಮಾತು, ಸಂವಾದದ ಮೂಲಕ ಮಾಡಿದ್ದಾರೆ’ ಎಂದುವಿಮರ್ಶಕ ಪ್ರೊ.ನಟರಾಜ ಹುಳಿಯಾರ್ ಹೇಳಿದರು.
ಜನಮನ ಸಂಸ್ಥೆ ವತಿಯಿಂದ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ದೋಪ್ದಿ’ ನಾಟಕ ಪ್ರದರ್ಶನ ಹಾಗೂ ಪ್ರೊ.ಜಿ.ಕೆ.ಗೋವಿಂದರಾವ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕುವೆಂಪು, ಅನಂತಮೂರ್ತಿ, ಎಂ.ಕೆ.ಇಂದಿರಾ ಸೇರಿದಂತೆ ಅನೇಕರು ತಮ್ಮ ಸಮುದಾಯಗಳನ್ನು ವಿಮರ್ಶಿಸುವ ಮೂಲಕ ಸಮುದಾಯಕ್ಕೆ ಜಾಗೃತಿ ಮೂಡಿಸಿದ್ದರು. ಎಸ್.ಎಲ್.ಭೈರಪ್ಪ ಆ ಕೆಲಸವನ್ನು ಮಾಡಿದ್ದಾರೆ. ಬ್ರಾಹ್ಮಣ ಸಮಾಜದೊಳಗೆ ಇದ್ದ ಬುದ್ಧಿಜೀವಿಗಳು ಆ ಸಮುದಾಯವನ್ನು ಹೇಗೆ ಬಿಡುಗಡೆಗೊಳಿಸಿದರು ಎಂಬುದನ್ನು ಗಮನಿಸಬೇಕು’ ಎಂದರು.
‘ಸಾಹಿತ್ಯ, ವಕೀಲಿ ವೃತ್ತಿ, ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿರುವ ಎಲ್ಲರೂ ಬುದ್ಧಿಜೀವಿಗಳು. ಆದರೆ, ಸಾಹಿತ್ಯ, ಸಮಾಜ–ವಿಜ್ಞಾನ ಕ್ಷೇತ್ರದಲ್ಲಿರುವವರು ಹೊರಗೆ ಹೆಚ್ಚಾಗಿ ಕಾಣಿಸುವುದರಿಂದ ಅವರನ್ನೇ ಬುದ್ಧಿಜೀವಿಗಳೆಂದು ಭಾವಿಸಲಾಗಿದೆ. ದೇಶವನ್ನು ಕಟ್ಟಲು ಎಲ್ಲ ಕ್ಷೇತ್ರಗಳ ಬುದ್ಧಿಜೀವಿಗಳು ಅಗತ್ಯ’ ಎಂದು ಅಭಿಪ್ರಾಯಪಟ್ಟರು.
‘ಸಾರ್ವಜನಿಕ, ಸಾಮಾಜಿಕ, ಜಾತ್ಯತೀತ ಬುದ್ಧಿಜೀವಿ ಹೇಗಿರಬೇಕೆಂಬುದಕ್ಕೆ ಮಾದರಿ ಜಿ.ಕೆ.ಗೋವಿಂದರಾವ್. ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸುವ ತಾನು ಸುಂದರ ವ್ಯಕ್ತಿ ಎಂದು ಅವರು ದೃಢವಾಗಿ ನಂಬಿದ್ದರು. ಬಿತ್ತಿದ್ದು ಬೆಳೆಯಬೇಕು ಎಂದು ಇಂಗ್ಲಿಷ್ ಬೋಧಿಸುತ್ತಿದ್ದರು. ಷೇಕ್ಸ್‌ಪಿಯರ್‌ನಿಂದ ಪಡೆದ ವೈಚಾರಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು. ಸಾಹಿತ್ಯದ, ಬೋಧನಾ ಶಕ್ತಿಯನ್ನು ತೋರಿಸಿಕೊಟ್ಟಿದ್ದರು’ ಎಂದು ಸ್ಮರಿಸಿದರು.
‘ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಗೆ ಬಂದಾಗ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅವರ ಪರ ಗೋವಿಂದರಾವ್ ಪ್ರಚಾರ ನಡೆಸಿದ್ದರು. ಸಿದ್ದರಾಮಯ್ಯ ಗೆದ್ದ ಬಳಿಕ ಅವರೊಂದಿಗೆ ಹೋಗಲಿಲ್ಲ. ಇಂದಿರಾ ಗಾಂಧಿ, ಮೋದಿಯನ್ನೂ ವಿಮರ್ಶೆಗೆ ಒಳಪಡಿಸಿದ್ದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರೊಂದಿಗೆ ಸಂವಾದ ನಡೆಸುತ್ತಿದ್ದರು’ ಎಂದು ಹೇಳಿದರು.
ಪ್ರೊ.ಜಿ.ಕೆ.ಗೋವಿಂದರಾವ್ ರಚಿಸಿದ ‘ಗಾಂಧೀಜಿಯವರ ಉಪವಾಸಗಳು ಮತ್ತು...’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾದೇವಿ ರಚಿಸಿದ ಕಥೆಯನ್ನು ಆಧರಿಸಿದ ‘ದೋಪ್ದಿ’ ನಾಟಕ ಪ್ರದರ್ಶನಗೊಂಡಿತು. ಇದನ್ನು ಕೆ.ಆರ್.ಸುಮತಿ ರಂಗರೂಪ ಹಾಗೂ ನಿರ್ದೇಶನ ಮಾಡಿದ್ದಾರೆ.
‘ಬೋಧಿ ವೃಕ್ಷದಂತೆ ಬದುಕಿದ ಗೋವಿಂದರಾವ್’
ರಂಗಕರ್ಮಿ ಜನಾರ್ಧನ್ (ಜನ್ನಿ) ಮಾತನಾಡಿ, ‘ವೈಚಾರಿಕ, ಜಾತ್ಯತೀತವಾಗಿ ಮನುಷ್ಯ ಸಂಬಂಧಗಳನ್ನು ಬೆಸೆಯುವ, ಮಾನವೀಯ ಮೌಲ್ಯಗಳನ್ನು ಬಿತ್ತುವ, ಬೋಧಿ ವೃಕ್ಷದ ರೀತಿಯಲ್ಲಿ ಬದುಕಿದವರು ಗೋವಿಂದರಾವ್. ಬುದ್ಧ, ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಅಂತರಂಗಕ್ಕೆ ತೆಗೆದುಕೊಂಡು ಷೇಕ್ಸ್‌ಪಿಯರ್ ಬಗ್ಗೆ ಮಾತನಾಡುತ್ತಿದ್ದರು. ಸಾವಿರಾರು ಮಕ್ಕಳಿಗೆ ಬೋಧಿಸಿದ್ದಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.