ಶನಿವಾರ, ಮಾರ್ಚ್ 25, 2023
22 °C
ಯುವಕರು ಉದ್ಯೋಗಕ್ಕೆ ನಗರಗಳಿಗೆ ತೆರಳುವುದು ಬೇಡ: ಗ್ರೀಷ್ಮಾ ಸಲಹೆ

ರೈತನ ಪುತ್ರಿಗೆ ‘ಕೃಷಿ’ಯಲ್ಲಿ ಚಿನ್ನದ ಗರಿ

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದ ಕೃಷಿಕ ದಂಪತಿ ಲಕ್ಷ್ಮಣೇಗೌಡ, ನಿರ್ಮಲಾ ದೇವಿ ಪುತ್ರಿ ಎಲ್‌.ಗ್ರೀಷ್ಮಾ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಎರಡು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.

ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದಲ್ಲಿ ಶೇ 91.2 ಅಂಕ ಪಡೆದು ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ   ಚಿನ್ನದ ಪದಕಕ್ಕೆ ಕೊರಳೊಡ್ಡಿದ ಪ್ರತಿಭೆ ಗ್ರೀಷ್ಮಾ. ಹುಣಸೂರಿನ ಶಾಸ್ತ್ರಿ ಶಾಲೆಯಲ್ಲಿ ಪ್ರಾಥಮಿಕ, ಮೈಸೂರಿನಲ್ಲಿ ಪ್ರೌಢಶಾಲೆ, ಪಿಯು ಶಿಕ್ಷಣ ಪೂರೈಸಿ, ಬೆಂಗಳೂರಿನಲ್ಲಿ  ಕೃಷಿ ಪದವಿಯನ್ನು ಪಡೆದಿದ್ದು. ಕೃಷಿ ವಿಜ್ಞಾನಿಯಾಗುವ ಕನಸು ಕಂಡಿದ್ದಾರೆ.

‘ಯುವ ಸಮುದಾಯ ಉದ್ಯೋಗಕ್ಕಾಗಿ ನಗರಕ್ಕೆ ತೆರಳುವುದು ಬೇಡ. ಹಳ್ಳಿಯಲ್ಲಿ ಪಾರಂಪರಿಕ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಳ್ಳಬಹುದು. ಸಹಜ, ಸಮಗ್ರ, ಸಾವಯವ ಕೃಷಿ ಪದ್ಧತಿ ಮೂಲಕ ಪೋಷಕರಿಗೆ ನೆರವಾಗಬೇಕು’ ಎಂಬುದು ಗ್ರೀಷ್ಮಾ ಸಲಹೆ.

‘ಕೃಷಿ ತಂತ್ರಜ್ಞಾನ ಬೆಳೆದಿದೆ. ಮೊಬೈಲ್‌ನಲ್ಲಿಯೇ ಅಗತ್ಯ ಕೃಷಿ ಮಾಹಿತಿಗಳು ದೊರೆಯುತ್ತಿವೆ. ಭೂಮಿಯನ್ನು ನಂಬಿದವರು ಒಂದಲ್ಲ ಒಂದು ದಿನ ಚಿನ್ನದ ಬೆಳೆ ಕಾಣುತ್ತಾರೆ. ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಅರೆ ಉದ್ಯೋಗಗಳನ್ನು ಪಡೆಯುವುದಕ್ಕಿಂತ ಕೃಷಿ ಮಾರ್ಗದಲ್ಲಿ ರಾಜರಂತೆ ಬದುಕಬಹುದು. ರೈತರಲ್ಲಿ ಕೃಷಿ ವಿಜ್ಞಾನದ ಕುರಿತು ಅರಿವು ಮೂಡಿಸಬಹುದು’ ಎಂದು
ಹೇಳಿದರು.

ಸ್ನಾತಕೋತ್ತರ ಪದವಿಯಲ್ಲಿ ಗೋಡಂಬಿ ಬೇಸಾಯ ಕುರಿತು ಪ್ರಬಂಧ ಬರೆದಿರುವ ಗ್ರೀಷ್ಮಾ ಅವರು, ‘ಸಮಗ್ರ ಬೇಸಾಯದಿಂದ ಕೃಷಿಯಲ್ಲಿ ಯಾರಿಗೂ ನಷ್ಟ ಎಂಬುದಿಲ್ಲ. ಹೈನುಗಾರಿಕೆ, ಅಣಬೆ ಬೇಸಾಯ, ಮೀನು, ಕುರಿ, ಕೋಳಿ ಸಾಕಾಣಿಕೆಯನ್ನು ರೈತರು ಕೃಷಿಯೊಂದಿಗೆ ಜೋಡಿಸಿಕೊಂಡಲ್ಲಿ ಆದಾಯ ನಿರಂತರವಾಗಿರುತ್ತದೆ’ ಎಂದು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಜೇನುಸಾಕಣೆಗೆ ಬೇಡಿಕೆ: ಕೃಷಿ ಉದ್ಯಮದಲ್ಲಿ ಜೇನುಸಾಕಾಣೆ ಬೇಡಿಕೆ ಕೃಷಿಯಾಗಿದೆ. ಇದರಿಂದ ರೈತ ತನ್ನ ಆರ್ಥಿಕ ವರಮಾನ ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಹೊಲ, ತೋಟಗಳಲ್ಲಿ ಜೇನು, ಮೇಣ ಉತ್ಪತ್ತಿಯಾಗಲಿದೆ. ಈ ಸಣ್ಣ ಪುಟ್ಟ ಕಸುಬನ್ನು ಕೃಷಿಯಲ್ಲಿ ಸೇರಿಸಿಕೊಂಡಲ್ಲಿ ರೈತರಿಗೆ ಉತ್ತಮ ವರಮಾನ ದೊರೆಯುತ್ತದೆ ಎಂದು ಗ್ರೀಷ್ಮಾ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ ನಡೆಸುವ ಹಂಬಲವಿರುವ ಅವರು, ಸದ್ಯ ಕೆನರಾ ಬ್ಯಾಂಕ್ ಕೃಷಿ ವಿಭಾಗದ ಉದ್ಯೋಗಿಯಾಗಿದ್ದಾರೆ. ತಂದೆಯ 7 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ನಡೆಸುವ ಕನಸು ಕಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು