ಶುಕ್ರವಾರ, ಡಿಸೆಂಬರ್ 3, 2021
26 °C
ಜಯಂತಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಆರೋಪ; ಶೇ 7.5ರಷ್ಟು ಮೀಸಲಾತಿ ನೀಡಲು ಆಗ್ರಹ

ವಾಲ್ಮೀಕಿ ಸಮುದಾಯ ಮರೆತ ಸರ್ಕಾರಗಳು: ಶಾಸಕ ಅನಿಲ್ ಚಿಕ್ಕಮಾದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ‘ರಾಮನ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಮನನ್ನು ಪರಿಚಯಿಸಿದ ವಾಲ್ಮೀಕಿ ಸಮುದಾಯವನ್ನು ಮರೆತು ಬಿಟ್ಟಿವೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ದೂರಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ತಾಲ್ಲೂಕಿನ ಆಡಳಿತ ಹಾಗೂ ನಾಯಕ ಸಮುದಾಯದ ಸಹಕಾರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು 80 ಲಕ್ಷ ನಾಯಕ ಸಮುದಾಯದವರು ಇದ್ದರೂ ಪ್ರಗತಿ ಕಂಡಿಲ್ಲ. ಶೇ 7.5ರಷ್ಟು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಈ ಸಮುದಾಯದ ಒಳಿತಿಗಾಗಿ ನನ್ನ ತಂದೆ ಚಿಕ್ಕಮಾದು ಹೋರಾಟ ಮಾಡಿದ್ದರು. ಅದೇ ಮಾರ್ಗವನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ’ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸುತ್ತೂರು ಮಾಲಿನಿ ಮಾತನಾಡಿ, ‘ಯಾವ ವ್ಯಕ್ತಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಗುಣ ಹೊಂದಿರುತ್ತಾನೋ ಅವನು ಮಾತ್ರ ಶ್ರೇಷ್ಠ ವ್ಯಕ್ತಿ ಆಗಲು ಸಾಧ್ಯ. ಪ್ರಪಂಚದ ಎಲ್ಲಾ ಭಾಷೆಗಳಿಗೂ ಭಾಷಾಂತರವಾದ ಏಕೈಕ ಮಹಾಕಾವ್ಯ ರಾಮಾಯಣ. ಇದು ಜಗತ್ತಿಗೆ ಸ್ಫೂರ್ತಿ ತಂದುಕೊಟ್ಟ ಮಹಾಕಾವ್ಯ’ ಎಂದು ಬಣ್ಣಿಸಿದರು.

‘ವಾಲ್ಮೀಕಿ ಸಮಾಜ ಸುಧಾರಕರಾಗಿ, ತತ್ವಜ್ಞಾನಿಯಾಗಿ ಸಮಾಜವನ್ನು ಪರಿವರ್ತನೆ ಮಾಡಿದ್ದರು. ಭರತಖಂಡದ ಚರಿತ್ರೆಯ ಎಲ್ಲಾ ಕಾವ್ಯಗಳನ್ನು ಒಗ್ಗೂಡಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ’ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಥ್ರೋ ಬಾಲ್‌ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ಇಟ್ನ ಕಾಲೊನಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮೇಟಿಕುಪ್ಪೆ ರಸ್ತೆಯಲ್ಲಿರುವ ವಾಲ್ಮೀಕಿ ವೃತದಿಂದ ಅಂಬೇಡ್ಕರ್ ಸಮುದಾಯ ಭವನದವರೆಗೆ ನಂದಿ ಕಂಬ, ನಾದಸ್ವರ, ನಗಾರಿ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಮುಖಂಡ ಜಯಪ್ರಕಾಶ್, ಪುರಸಭಾ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷೆ ಗೀತಾ, ಶಾಸಕರ ಪತ್ನಿ ಸೌಮ್ಯಾ, ನಾಯಕ ಸಮುದಾಯದ ಅಧ್ಯಕ್ಷ ಶಂಭುಲಿಂಗನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಚಿಕ್ಕವೀರನಾಯಕ, ಪಿ. ರವಿ, ಮುಖಂಡರಾದ ಕ್ಯಾತನಹಳ್ಳಿ ನಾಗರಾಜು, ಜಿನ್ನಹಳ್ಳಿ ರಾಜನಾಯಕ, ದೊಡ್ಡನಾಯಕ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹ ಮೂರ್ತಿ, ಪುಟ್ಟಬಸವ ನಾಯಕ, ಅಂಕನಾಯಕ, ರಾಜು, ದಾಸನಾಯಕ, ಚಲುವಕೃಷ್ಣನಾಯಕ, ಮಾದೇವನಾಯಕ, ದೊಡ್ಡ ವೀರನಾಯಕ, ಚಿಕ್ಕ, ಮಣಿ, ಗೋವಿಂದ, ಬೆಟ್ಟನಾಯಕ, ಸೋಮಣ್ಣ, ಬಿ.ಪಿ.ಸಿದ್ದನಾಯಕ, ರಾಜೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು