ಮಂಗಳವಾರ, ಜನವರಿ 18, 2022
27 °C

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ: ಡಾ.ಜೆ.ಸಿ.ರವೀಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಅಧಿಕಾರವು ಸದನ ಹಾಗೂ ಸಚಿವ ಸಂಪುಟಕ್ಕಿದೆ’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿಯ ಮಾಧ್ಯಮ ವಕ್ತಾರ ಡಾ.ಜೆ.ಸಿ.ರವೀಂದ್ರ ಹೇಳಿದರು.

‘2006ರಲ್ಲಿ ಉಮಾದೇವಿ ಪ್ರಕರಣದ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಕಾಯಂಗೊಳಿಸಲು ಸರ್ಕಾರವು ಹಿಂದೇಟು ಹಾಕುತ್ತಿದೆ. ಆದರೆ, 1977ರ ಕೆ.ಸಿ.ಎಸ್‌ ನಿಯಮಾವಳಿ 14ರ ಅಡಿಯಲ್ಲಿ ತಾತ್ಕಾಲಿಕ ನೌಕರರನ್ನು ಕಾಯಂಗೊಳಿಸುವ ಅಧಿಕಾರ ಸಂಪುಟ ಹಾಗೂ ಸದನಕ್ಕಿದೆ. ಅಲ್ಲದೆ, ಸಂವಿಧಾನದ 309ನೇ ವಿಧಿಯು ನೇಮಕಾತಿಯಲ್ಲಿ ಶಾಸಕಾಂಗಕ್ಕಿರುವ ಹಕ್ಕನ್ನು ತಿಳಿಸುತ್ತದೆ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪಂಜಾಬ್‌, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ₹ 50 ಸಾವಿರದವರೆಗೆ ಗೌರವ ಧನ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ₹ 11 ಸಾವಿರದಿಂದ ₹ 13 ಸಾವಿರ ನೀಡಲಾಗುತ್ತಿದೆ. ಹೀಗಾಗಿಯೇ ಉಪನ್ಯಾಸಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಸರ್ಕಾರವು ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಚಿಂತಕ ಪ್ರೊ.ಕಾಳಚನ್ನೇಗೌಡ ಮಾತನಾಡಿ, ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಿರುವ ರಾಜ್ಯ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಮೊದಲು ಬಗೆಹರಿಸಲಿ. ನಂತರವಷ್ಟೇ ಎನ್‌ಇಪಿ ಜಾರಿಗೊಳಿಸಿದ ಕಿರೀಟವನ್ನು ತೊಡಲಿ’ ಎಂದು ಕಿಡಿಕಾರಿದರು.

‘ಅತಿಥಿ ಉಪನ್ಯಾಸಕರನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ. ಉತ್ತಮ ಸಂಬಳ ನೀಡಿ ಅರ್ಹರನ್ನು ಕಾಯಂಗೊಳಿಸಬೇಕು. ಸೇವಾ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿದರು.

‘ಆಗ್ರಹಗಳು ಸಂವಿಧಾನಬದ್ಧವಾಗಿವೆ’: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ದೇವಸ್ಥಾನಗಳನ್ನು ಅಲ್ಲಿನ ಅರ್ಚಕರು, ಭಕ್ತರಿಗೆ ನೀಡುವ ಮೂಲಕ ಉದ್ಯೋಗ ಭದ್ರತೆ ನೀಡುವ ಸರ್ಕಾರವು, ರಾಜ್ಯಕ್ಕೆ ಮಾನವ ಸಂಪನ್ಮೂಲವನ್ನು ದಶಕಗಳಿಂದ ನೀಡಿರುವ ಅತಿಥಿ ಶಿಕ್ಷಕರ ಬೇಡಿಕೆಯನ್ನು ಈಡೇರಿಸಬೇಕು. ಅವರ ಆಗ್ರಹಗಳು ಸಂವಿಧಾನ ಬದ್ಧವಾಗಿವೆ. ಹೋರಾಟಕ್ಕೆ ರೈತಸಂಘದ ಬೆಂಬಲವಿದೆ’ ಎಂದರು. 

‘ಸರ್ಕಾರಗಳು ಉತ್ಪಾದನಾ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿವೆ. ಅಂತೆಯೇ ನ್ಯಾಯಾಂಗವನ್ನು ಖಾಸಗಿಯವರಿಗೆ ಒಪ್ಪಿಸಿಬಿಡುತ್ತಾರೆಯೇ’ ಎಂದು ಪ್ರಶ್ನಿಸಿದರು

‘ದುಂದು ವೆಚ್ಚಗಳನ್ನು ಕಡಿಮೆ ಮಾಡಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲಿ. ಶಾಲಾ– ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯ ಮಾಡುವ ಬದಲು ಪೌಷ್ಟಿಕ ಆಹಾರ ವಿತರಿಸಲಿ’ ಎಂದು ಸಲಹೆ ನೀಡಿದರು. 

ದಲಿತ ಚಳುವಳಿಗಳ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ, ಲೇಖಕ ನಾ.ದಿವಾಕರ ಮಾತನಾಡಿದರು. 

ರೈತಸಂಘದ ಪ್ರಸನ್ನ ಎನ್‌. ಗೌಡ, ಸಮಿತಿಯ ಜಿಲ್ಲಾಧ್ಯಕ್ಷ ಹನುಮಂತೇಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು