ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಾಗ್ಯಭಾವ ನಿವಾರಣೆ; ಸ್ಮಶಾನಗಳಲ್ಲೂ ಹಸಿರೀಕರಣ

Last Updated 4 ಮೇ 2019, 20:20 IST
ಅಕ್ಷರ ಗಾತ್ರ

ಅಂತ್ಯಸಂಸ್ಕಾರಕ್ಕೆಂದು ಸ್ಮಶಾನಕ್ಕೆ ಹೋದರೆ ಅಲ್ಲಿನ ವಾತಾವರಣ ಕಂಡು ಇನ್ನಷ್ಟು ವೈರಾಗ್ಯ ಭಾವ ತಾಳುವುದನ್ನು ತಡೆಯಲು ಮಹಾನಗರ ಪಾಲಿಕೆಯು ಹಸಿರೀಕರಣಕ್ಕೆ ಮುಂದಾಗಿದೆ.

ಇದರ ಪೂರ್ಣ ಪ್ರಮಾಣದ ಪರಿಣಾಮವನ್ನು ವಿಜಯನಗರ 4ನೇ ಹಂತದಲ್ಲಿರುವ ಮುಕ್ತಿಧಾಮದಲ್ಲಿ ಕಾಣಬಹುದು. 2013ರಲ್ಲಿ ಉದ್ಘಾಟನೆಗೊಂಡ ಅದು ಸ್ಮಶಾನ ಎನ್ನಿಸುವುದಿಲ್ಲ. ಅಲ್ಲಿನ ಅಲಂಕಾರ ಹೂವಿನ ಗಿಡಗಳು, ಬೇವಿನಮರಗಳು, ಅರಳಿಮರ, ಮಾವಿನಮರ, ಹೊಂಗೆಮರಗಳು ಬೆಳೆದು ನೆರಳು ನೀಡುತ್ತಿವೆ. ಜತೆಗೆ, ತಂಪಾದ ವಾತಾವರಣವನ್ನು ಸೃಷ್ಟಿಸಿವೆ. ಐದು ಎಕರೆಯೊಂದಿಗೆ ಐದು ಗುಂಟೆಯ ಈ ಸ್ಮಶಾನದ ಕಟ್ಟಡದ ಮುಂದೆ ಆಕರ್ಷಣೀಯವಾದ ಕಾರಂಜಿಯೊಂದಿಗೆ ಉದ್ಯಾನವಿದೆ. ಇಲ್ಲಿ ಶಿವ, ಬುದ್ಧ ಹಾಗೂ ಗಣೇಶ ವಿಗ್ರಹಗಳಿವೆ. ಉಳಿದ ಪ್ರದೇಶದಲ್ಲಿ ವಿವಿಧ ಗಿಡಗಳಿವೆ. ಕಟ್ಟಡದ ಹಿಂಭಾಗದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ.

ಅಂತ್ಯಸಂಸ್ಕಾರಕ್ಕೆಂದು ಬಂದವರು ಇಲ್ಲಿನ ವಾತಾವರಣ ಕಂಡು ತಮ್ಮ ದುಃಖವನ್ನು ಕೊಂಚವಾದರೂ ಕಡಿಮೆ ಮಾಡಿಕೊಳ್ಳುತ್ತಾರೆ.

ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 38 ಸ್ಮಶಾನಗಳಿದ್ದು, ಮುಳ್ಳುಕಂಟಿ ಬೆಳೆದಿರುವುದನ್ನು ಸ್ವಚ್ಛಗೊಳಿಸಿ ಮಳೆಗಾಲ ಶುರುವಾಗುವ ಮೊದಲು ಗಿಡಗಳನ್ನು ನೆಡಲು ಪಾಲಿಕೆ ಮುಂದಾಗಿದೆ.

ಈಗಾಗಲೇ 15 ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ಸ್ಮಶಾನಗಳನ್ನು ಸ್ವಚ್ಚಗೊಳಿಸಲಾಗುತ್ತಿದೆ. ಜತೆಗೆ, ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದು ನೆಡುವುದು ನಿರಂತರವಾಗಿರುತ್ತದೆ ಎನ್ನುತ್ತಾರೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್‌.

ಔಷಧೀಯ ಗಿಡಗಳೊಂದಿಗೆ ಆಲದಮರ, ಹೊಂಗೆ, ಸಿಲ್ವರ್‌, ಮಹಾಗಣಿ, ಹಿಪ್ಪೆ, ಹುಣಸೆ, ನೇರಳೆ, ಆಕಾಶಮರ, ಬೇವು, ತೇಗು, ಬನ್ನಿಮರ, ಸಂಪಿಗೆ, ಕಾಡುಬಾದಾಮಿ ಗಿಡಗಳನ್ನು ನೆಡಲಾಗುತ್ತಿದೆ. ಈಗಾಗಲೇ ರಾಮಸ್ವಾಮಿ ವೃತ್ತ ಸೇರಿದಂತೆ ಮೀಡಿಯನ್‌ ಅಂದರೆ ನಗರದ ಎರಡು ರಸ್ತೆಗಳ ನಡುವೆ ಗಿಡಗಳನ್ನು ನೆಡಲಾಗುತ್ತಿದೆ. ಈಮೂಲಕ ನಗರದ ಹಸೀರಿಕರಣ ಪ್ರಯುಕ್ತ ಗಿಡ ನೆಡುವ ಯೋಜನೆಯನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ ನಾಗರಾಜ್.

ಇದರೊಂದಿಗೆ ಶೂನ್ಯ ತ್ಯಾಜ್ಯ ಘಟಕ, ವಿದ್ಯಾರಣ್ಯಪುರಂನ ಸುಯೇಜ್‌ ಫಾರಂ ಒಳಗಡೆ ಕೂಡಾ ಗಿಡಗಳನ್ನು ನೆಡುವುದು ನಿರಂತರವಾಗಿದೆ ಎನ್ನುತ್ತಾರೆ. ಇದು ವಿಶ್ವ ಪರಿಸರದ ದಿನ ಅಂಗವಾಗಿ ಹೆಚ್ಚಲಿವೆ. ಅರಣ್ಯ ಇಲಾಖೆಯಿಂದ ಹೆಚ್ಚು ಗಿಡಗಳನ್ನು ತರಿಸಿ ನೆಡುವುದು ನಡೆಯಲಿದೆ ಎಂದು ಹೇಳುತ್ತಾರೆ.

ಆದರೆ, ವಿಶ್ವೇಶ್ವರನಗರದ ಪೌರಕಾರ್ಮಿಕರ ಸ್ಮಶಾನದಲ್ಲಿ ಗಿಡಗಳನ್ನು ನೆಡಲು ಜಾಗದ ಕೊರತೆಯಿದೆ. ಅಂದರೆ ಗೋರಿಗಳು ಹೆಚ್ಚಿವೆ. ಸದ್ಯ ಇರುವ ಹಳೆಯ ಮರಗಳು ಬೀಳುವ ಹಂತದಲ್ಲಿವೆ. ವಿಶ್ವೇಶ್ವರನಗರದ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಗಿಡಗಳು ಹೆಚ್ಚಿದ್ದು, ನೆರಳು ಸಿಗುತ್ತಿದೆ. ಕುವೆಂಪುನಗರದ ಆರ್‌ಎಂಪಿ ಕ್ವಾಟರ್ಸ್‌ ಹಿಂಭಾಗದ ಸ್ಮಶಾನದಲ್ಲಿ ಗಿಡಗಳನ್ನು ನೆಡಲು ಅವಕಾಶವಿದೆ ಎನ್ನುತ್ತಾರೆ ಇವುಗಳ ಉಸ್ತುವಾರಿ ಹೊತ್ತುಕೊಂಡಿರುವ ಮಂಜುನಾಥ್.

ಸ್ಮಶಾನವೆಂದರೆ ಭಯದ ವಾತಾವರಣ ಇರುತ್ತದೆ ಎನ್ನುವುದನ್ನು ಹೋಗಲಾಡಿಸುವ ಉದ್ದೇಶ ಪಾಲಿಕೆಗಿದೆ. ಇದಕ್ಕಾಗಿ ಶುದ್ಧ ಗಾಳಿಗಾಗಿ, ಪರಿಸರಕ್ಕಾಗಿ ಗಿಡಗಳನ್ನು ಸ್ಮಶಾನದಲ್ಲಿ ನೆಡುವುದು ಆದ್ಯತೆಯಾಗಿದೆ ಎನ್ನುತ್ತಾರೆ ಪಾಲಿಕೆಯ ತೋಟಗಾರಿಕೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸದಾಶಿವ ಕೆ.ಚಟ್ನಿ.‌

ಗಾಂಧಿನಗರದ ಆದಿಕರ್ನಾಟಕ ಸ್ಮಶಾನದಲ್ಲಿ ಸಾಕಷ್ಟು ಮರಗಳಿವೆ. ಕ್ಯಾತಮಾರನಹಳ್ಳಿಯ ಕೆ.ಎನ್‌.ಪುರ ಬಡಾವಣೆಯ ನಾಯಕರ ಸ್ಮಶಾನದಲ್ಲಿ ಸಾಕಷ್ಟು ಜಾಗವಿದ್ದು, ಗಿಡಗಳನ್ನು ಹಾಕಲಾಗಿದೆ. ಇನ್ನು ಬೆಳೆಯಬೇಕಿದೆ. ಈ ಬೇಸಿಗೆಯಲ್ಲೂ ಗಿಡಗಳು ಒಣಗದಂತೆ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಈ ಸ್ಮಶಾನಗಳನ್ನು ನೋಡಿಕೊಳ್ಳುತ್ತಿರುವ ಪಳನಿಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT