ಮಂಗಳವಾರ, ಸೆಪ್ಟೆಂಬರ್ 17, 2019
21 °C

‘ದೋಸ್ತಿ’ಗಳ ಮಧ್ಯೆ ವಾಕ್ಸಮರ: ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ

Published:
Updated:
Prajavani

ಮೈಸೂರು/ಮಂಡ್ಯ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ. ಆ ಮೂಲಕ ಮೈತ್ರಿ ಧರ್ಮಕ್ಕೆ ಕಂಟಕವಾಗುತ್ತಿದ್ದಾರೆ. ಐದು ವರ್ಷ ಅಧಿಕಾರದಲ್ಲಿದ್ದಾಗ ಅವರು ಏನು ಕೆಲಸ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ವಾಗ್ದಾಳಿ ನಡೆಸಿದರು.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಉತ್ತಮ ಆಡಳಿತ ನಡೆಸಿದ, ಐದು ವರ್ಷ ಪೂರೈಸಿದ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್‌ ಒಳ್ಳೆಯ ಆಡಳಿತ ಕೊಟ್ಟಿದ್ದರೆ ಕಳೆದ ಚುನಾವಣೆಯಲ್ಲಿ ಅವರ ಸಂಖ್ಯಾಬಲ 120 ರಿಂದ 78ಕ್ಕೆ ಏಕೆ ಇಳಿಯಿತು’ ಎಂದು ಪ್ರಶ್ನಿಸಿದರು.

‘ಉತ್ತಮ ಆಡಳಿತ ನೀಡಿದ ದೇವರಾಜ ಅರಸು ಅವರನ್ನು ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಏನು ಅರಸು ರೀತಿಯಲ್ಲಿ ಆಡಳಿತ ನಡೆಸಿದ್ದಾರಾ? ಅವರು ಮತ್ತೆ ಮುಖ್ಯಮಂತ್ರಿ ಆಗುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಮತ್ತೆ ಚುನಾವಣೆ ಬಂದಾಗ ಆ ಬಗ್ಗೆ ನೋಡೋಣ’ ಎಂದು ಕುಟುಕಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ನಾನೂ ಸಾಕಷ್ಟು ತ್ಯಾಗ ಮಾಡಿದ್ದೆ. ಈಗ ಅವರು ಬಹಳ ದೊಡ್ಡ ನಾಯಕ. ನಮ್ಮಂಥ ಶ್ರೀಸಾಮಾನ್ಯರು ಅವರ ಕಣ್ಣಿಗೆ ಬೀಳುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಿಖಿಲ್‌ ವಿರುದ್ಧ ಕಾಂಗ್ರೆಸ್‌ ಮುಖಂಡರು ಏನೇ ಷಡ್ಯಂತ್ರ ರೂಪಿಸಿದ್ದರೂ ಅದು ಮೇ 23ರಂದು ಗೊತ್ತಾಗಲಿದೆ. ಯಾರು ಏನೇ ಮಾಡಿದ್ದರೂ ನಿಖಿಲ್‌ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ವಿಶ್ವನಾಥ್‌ ಮಾತಿಗೆ ಕಿಮ್ಮತ್ತು ಕೊಡಬೇಕಿಲ್ಲ’

ಕಲಬುರ್ಗಿ: ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್‌ ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾನೆ. ಆತನ ಮಾತಿಗೆ ಕಿಮ್ಮತ್ತು ಕೊಡಬೇಕಿಲ್ಲ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

‘ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ ಆಗಿರಲಿಲ್ಲ’ ಎಂಬ ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡುತ್ತೇನೆ. ಅವನ ಮಾತಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದರು.

Post Comments (+)