ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಕೊಂಡಿ ಯುಗಾದಿ

Last Updated 5 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ‘ಆದಿ’ ಯುಗಾದಿ ಮತ್ತೆ ಬಂದಿದೆ. ಕನಸುಗಳನ್ನು ಸಾಕಾರಗೊಳಿಸುವ ಚೈತನ್ಯ ಮತ್ತು ವಾಸ್ತವಗಳಿಗೆ ಮುಖಾಮುಖಿಯಾಗಿ ಸೆಣಸುವ ದೃಢ ಸಂಕಲ್ಪ ಮಾಡಬೇಕೆಂಬ ಸಂದೇಶ ಸಾರುವ ಈ ಹಬ್ಬ ಬೇವು-ಬೆಲ್ಲದ ಹಬ್ಬವೂ ಆಗಿದೆ. ಹಳೆಯದನ್ನು ಮರೆತು ಹೊಸದರತ್ತ ಅಡಿ ಇಡುವ ಹೊಸ ಆಲೋಚನೆಯತ್ತ ಕರೆದೊಯ್ದು ಬದುಕನ್ನು ಚಲನಶೀಲಗೊಳಿಸುವ ಈ ಹಬ್ಬ ಹಿಂದೂ ಧರ್ಮಿಯರಿಗೆ ಅಮೃತ ಘಳಿಗೆಯೂ ಹೌದು! ಹೊಸ ಚೈತನ್ಯವನ್ನು ಮನ-ಮನಗಳಲ್ಲಿ ಮೂಡಿಸುವ, ನೋವು-ನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನಕ್ಕೆ ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಆದ್ದರಿಂದಲೇ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು

‘ಬನಬನದಲಿ ಅಚ್ಚಾಗಿದೆ
ಹೊಸ ವರ್ಷದ ಹೆಸರು
ಪಲ್ಲವಗಳ ಪಲ್ಲವಿಯು
ಗರಿಗೆದರಿದೆ ಗೀತವು!’... ಎಂದು ಯುಗಾದಿಯ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆಯೇ ಇದೆ. ಮೆರವಣಿಗೆಯ ಸಾಲಿನಂತೆ ಬರುವ ಈ ಹಬ್ಬಗಳಲ್ಲಿ ಮೊದಲನೇಯದೇ ಈ ಯುಗಾದಿ! ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಹ ಈ ಹಬ್ಬ ಕಳಸ-ಕನ್ನಡಿ ಹೊತ್ತು ಬರುವ ಹಿರಿಯ ಮುತ್ತೈದೆಯಂತೆ!

ಯುಗಾದಿ ಹಬ್ಬ ಬದುಕಿನಲ್ಲಿ ಹೊಸತನವನ್ನು ಅಳವಡಿಸುವ – ಎಚ್ಚರಿಸುವ ಹಬ್ಬವೂ ಹೌದು, ಋತುಗಳ ರಾಜನ ಆಗಮನದ ಹಬ್ಬವಾದ ಈ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುವ ಹಬ್ಬವೇ ಆಗಿದೆ. ಈ ಹಿನ್ನೆಲೆಯಲ್ಲೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಯುಗಾದಿ ಕುರಿತು ಹೀಗೆ ಹಾಡಿರುವದು..

‘ಒಳಿತು ಕೆಡುಕು ಏನು ಬಂದರು
ಇರಲಿ ಎಲದ್ದಕ್ಕೂ ಸ್ವಾಗತ
ಯುಗ-ಯುಗಾದಿಗೆ
ಹೊಸತು ಹರ್ಷವು ಬರಲಿ ಬಾರದೆ ಹೋಗಲಿ
ಬಂದ ಚೈತ್ರ ಚಿರವಿನೂತನ
ಮಂದಹಾಸವೇ ಉಳಿಯಲಿ! ಎಂದು ಯುಗಾದಿ ಕುರಿತು ಹಾಡಿ ಹೊಗಳಿದ್ದಾರೆ.

ಆಚರಣೆ-ಸಡಗರ: ಯುಗಾದಿ ಬೇರೆಲ್ಲಾ ಹಬ್ಬಗಳಿಗಿಂತ ಭಿನ್ನ. ಹೊಸ ವರ್ಷದ ಮೊದಲ ಹಬ್ಬವೇ ಇದಾಗಿರುವುದರಿಂದ ಮನೆ-ಮನೆಯಲ್ಲೂ ಹಬ್ಬದ ರಂಗು ಮೂಡುತ್ತದೆ. ಪ್ರಾಃತಕಾಲದಲ್ಲಿ ಎದ್ದವರು ನಿತ್ಯಕರ್ಮಗಳನ್ನು ಮುಗಿಸಿ ಅಭ್ಯಂಜನ ಸ್ನಾನ ಮಾಡಿ, ಮನೆಯನ್ನ ತಳಿರು-ತೋರಣಗಳಿಂದ, ಮಾವು-ಬೇವಿನ ಸೊಪ್ಪಿನಿಂದ ಸಿಂಗರಿಸಿ, ಹೊಸ ಬಟ್ಟೆ ಧರಿಸಿ ಕುಲದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಅನಂತರ ಪಂಚಾಂಗ ಶ್ರವಣ ಈ ದಿನದ ವಿಶೇಷ. ಇಂದು ಸೂರ್ಯನು ಮೇಷರಾಶಿಯನ್ನು ಪ್ರವೇಶಿಸುವನು. ನವನಾಯಕರ ಖಾತೆ ಬದಲಾಗುವುದು. ಅಲ್ಲದೆ, ಯುಗಾದಿಯ ಬಿದಿಗೆ ಚಂದ್ರದರ್ಶನಕ್ಕೆ ವಿಶೇಷ ಮಹತ್ವವೂ ಇದೆ. ಚೌತಿಯ ಚಂದ್ರನ ದರ್ಶನದಿಂದಾದ ದೋಷ ನಿವಾರಣೆ ಬಿದಿಗೆ ಚಂದ್ರನ ದರ್ಶನದಿಂದಾಗುತ್ತದೆಂಬ ಪ್ರತೀತಿ ಇದೆ.

ನಾಡಿನಾದ್ಯಂತ ಎಲ್ಲರ ಮನೆ-ಮನಗಳ ಅಂಗಳದಲ್ಲಿ ಸಂಭ್ರಮ-ಸಡಗರ ಇಂದು ತುಂಬಿರುತ್ತದೆ. ದೇವಸ್ಥಾನಗಳಲ್ಲಿ ಘಂಟೆಯ ನಿನಾದ-ತುಪ್ಪದದೀಪ-ಮಂಗಳಾರತಿ ಇಂದಿನ ವಿಶೇಷ. ಈ ದಿನದ ಮತ್ತೊಂದು ಆಕರ್ಷಣೆಯೆಂದರೆ ಬೇವು-ಬೆಲ್ಲವನ್ನು ಸೇವಿಸುವದು. ಸ್ವೀಕರಿಸುವಾಗ...

‘ಶತಾಯವಜ್ರ ದೇಹಾಯ
ಸರ್ವ ಸಂಪತ್ಕರಾಯಚ
ಸರ್ವರಿಷ್ಟ ವಿನಾಶಯ
ನಿಂಬ ಕಂದಳ ಭಕ್ಷಣಂ!’
....ಎಂದು ಮಂತ್ರ ಹೇಳುತ್ತಾ ‘ಸರ್ವೇ ಜನೋ ಸುಖಿನೋಭವಂತು’ ಎಂಬ ಆಶಯದೊಂದಿಗೆ ಬೇವು-ಬೆಲ್ಲವನ್ನು ಸ್ವೀಕರಿಸಿ ಮೆಲ್ಲುವುದು ಯುಗಾದಿಯ ಸದಾಶಯವನ್ನು ನೆನೆಸುತ್ತದೆ. ಕಳೆದು ಹೋದ ವರುಷದ ನೆನಪುಗಳನ್ನು ಮೆಲುಕು ಹಾಕುವ ಮುಂದೆ ಸಾಧಿಸಬೇಕೆನ್ನುವುದಕ್ಕೆ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಸುಖ-ದುಃಖಗಳ ರೂಪ.

ಪಂಚಾಂಗ ಶ್ರವಣ-ಹೊನ್ನಾರು: ಯುಗಾದಿ ಹಬ್ಬ ಬಂತೆಂದರೆ ಹೊಸ ಸಂವತ್ಸರದ ಪಂಚಾಂಗಕ್ಕೆ ಅದರ ಶ್ರವಣಕ್ಕೆ ಎಲ್ಲಿಲ್ಲದ ಬೇಡಿಕೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಗೆ ಎಲ್ಲಿಲ್ಲದ ಮಹತ್ವವಿದೆ. ಹೊಸ ಋತುಚಕ್ರವು, ಮೇಷಾದಿ ಮಾಸ-ಲಗ್ನಗಳು ಅಶ್ವಿನ್ಯಾದಿ ಮಳೆ ನಕ್ಷತ್ರಗಳು, ಹಬ್ಬ-ಜಾತ್ರೆ, ರಥೋತ್ಸವ-ಮದುವೆ... ಇತ್ಯಾದಿ ಇಂದೇ ಆರಂಭವಾಗುವುದರಿಂದ ಇಂದು ಪಂಚಾಂಗಗಳಾದ... ತಿಥಿ (ಐಶ್ವರ್ಯ), ನಕ್ಷತ್ರ (ಆಯುರ್ ವೃದ್ಧಿ) ವಾರ (ಪಾಪ ಪರಿಹಾರ), ಯೋಗ (ರೋಗನಿವಾರಣೆ), ಕರಣ (ಕಾರ್ಯಸಿದ್ಧಿ)ಗಳ ಬಗ್ಗೆ ತಿಳಿಯುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹು ಹಿಂದಿನಿಂದಲೂ ಇದೆ.

ಪಂಚಾಂಗ ಶ್ರವಣದ ನಂತರ ರೈತರು ಹೊನ್ನಾರು ಕಟ್ಟುವದು ಇಂದಿನ ಮತ್ತೊಂದು ವಿಶೇಷ. ವ್ಯವಸಾಯಕ್ಕೆ ಸಿದ್ಧವಾಗಿರುವ ರೈತ ತನ್ನ ಹಾರು ಈ ಬಾರಿಯಾದರೂ ಹೊನ್ನಾರಾಗಲಿ ಎಂದು ಪ್ರಾರ್ಥಿಸುತ್ತ ಹೊಲವನ್ನು ಉಳುವ ಮೂಲಕ ತನ್ನ ಕೃಷಿ ಬದುಕಿಗೆ ಮುನ್ನಡಿ ಇಡುತ್ತಾನೆ. ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಮೆರವಣಿಗೆ ಮಾಡುತ್ತಾರೆ. ಊರ ಮುಂದಿರುವ ಹೊಲಗಳಲ್ಲಿ ಸೇರುವ ಈ ಹೊನ್ನಾರಗಳು ಉಳುವುದನ್ನ ನೋಡುವದೇ ಕಣ್ಣಿಗೆ ಹಿತ-ಆನಂದ.

ಯುಗಾದಿಯಂದು ಕ್ರೀಡೋತ್ಸವ ನಡೆಯುತ್ತದೆ. ಮನೆಯಂಗಳದ ಆಟಕ್ಕೆ ಹೆಚ್ಚು ಒತ್ತು ಸಿಗುತ್ತದೆ. ಅದರಲ್ಲೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಯುಗಾದಿ ಸಮಯದಲ್ಲಿ ಕಾರ್ಡ್ಸ್ ಆಟದ ಗಮ್ಮತ್ತೆ ಹೆಚ್ಚು. ಜೂಜಿನ ಮೋಹಕ್ಕೆ ಬಿದ್ದವರು ಪಾಪರ್ ಆಗುವುದೂ ಉಂಟು!

ವಿಶಿಷ್ಟ ಅಡುಗೆ: ಯುಗಾದಿ ಹಬ್ಬದ ವೈಶಿಷ್ಟ್ಯತೆ ಎಂದರೆ ಭಕ್ಷ್ಯದ್ದು! ಇಂದು ಎಲ್ಲರ ಮನೆಯಲ್ಲೂ ಘಮ-ಘಮಿಸುವ ಅಡುಗೆ ಸಿದ್ಧವಾಗುತ್ತದೆ. ಮಾವಿನ ಕಾಯಿಯ ಚಿತ್ರಾನ್ನ, ಬಗೆ-ಬಗೆಯ ಭಕ್ಷ್ಯಗಳು ದೇವರ ನೈವೇದ್ಯಕ್ಕೆ ಸಿದ್ಧವಾಗುತ್ತದೆ. ಆದ್ದರಿಂದಲೇ ‘ಉಂಡಿದ್ದೇ ಯುಗಾದಿ-ಮಿಂದಿದ್ದೇ ದೀಪಾವಳಿ’ ಎಂಬ ಮಾತು ಬಂದಿರುವದು!

ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ಮನುಷ್ಯನ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯಪ್ರಜ್ಞೆಯನ್ನು ನಾವು ನಮ್ಮ-ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ವಾರ್ಥತೆಯನ್ನು ತೊರೆದು, ವಿಶಾಲಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿಹಬ್ಬದ ಕಳ-ಕಳಿ ಅರ್ಥವಾಗುತ್ತದೆ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವದೇ ಯುಗಾದಿ ಹಬ್ಬ ಆಚರಣೆಯ ಉದ್ದೇಶ. ಯುಗಾದಿ ಒಂದು ದಿನದ ಜಾತ್ರೆಯಾಗುವುದು ಬೇಡ. ಅದು ನೂರು ದಿನದ ಜಾತ್ರೆಯಾಗಲಿ, ಇಲ್ಲಿನ ದಾರಿದ್ರ್ಯ ಅಸಮಾನತೆ ತೊಲಗಿ ಬಾಳು ಬೆಳಗುವಂತಾಗಲಿ.

ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ

‘ಜೀವನವೆಲ್ಲ
ಬೇವುಬೆಲ್ಲ
ಎರಡೂ ಮೆಲ್ಲುವವನೆ
ಕವಿಮಲ್ಲ!’
....ಎಂಬಂತೆ ಆಗಬೇಕಿದೆ. ನೆಮ್ಮದಿಯ ನಾಳೆಗಾಗಿ ನಾವೆಲ್ಲ ಇಂದೇ ಪಣತೊಡಬೇಕಾಗಿದೆ. ಆದ್ದರಿಂದ ಈ ಯುಗಾದಿ ಸಂದರ್ಭದಲ್ಲಾದರೂ ಒಳ್ಳೆಯದರತ್ತ ಹೋಗೋಣ, ಆಲೋಚಿಸೋಣ, ಕಾರ್ಯಸನ್ನದ್ಧರಾಗೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT