ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚರಿತ್ರೆ ಮತ್ತೆ ಮತ್ತೆ ಹುಟ್ಟುವ ಬೀಜ’: ಡಾ.ಬಿ.ವಿ.ವಸಂತಕುಮಾರ್

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಹೇಳಿಕೆ
Last Updated 26 ಡಿಸೆಂಬರ್ 2021, 13:23 IST
ಅಕ್ಷರ ಗಾತ್ರ

ಮೈಸೂರು: ‘ಚರಿತ್ರೆ ಎಂಬುದು ಮುಗಿದ ಘಟನೆಯಲ್ಲ. ಮತ್ತೆ ಮತ್ತೆ ಹುಟ್ಟುವ ಬೀಜವಿದ್ದಂತೆ’ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಭಾನುವಾರ ಇಲ್ಲಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಂವಹನ ಪ್ರಕಾಶನದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಪ್ರೊ.ಮಲೆಯೂರು ಗುರುಸ್ವಾಮಿ ರಚಿತ ‘ಬಂಗಾರದೊಡ್ಡಿ’ ಚಾರಿತ್ರಿಕ ಕಾದಂಬರಿ ಬಿಡುಗಡೆಗೊಳಿಸಿದ ಅವರು ಮಾತನಾಡಿದರು.

‘ಬಂಗಾರದೊಡ್ಡಿ ಕಾದಂಬರಿ ಚರಿತ್ರೆಯ ನಿರಂತರದ ಭಾಗ. ಶ್ರೀಸಾಮಾನ್ಯರ ಅಸಮಾನ್ಯತೆ ತಿಳಿಸುವ ಸೃಜನಶೀಲ ಕಾದಂಬರಿ. ಸಾಮಾನ್ಯವಾಗಿ ದೇವದಾಸಿ, ರಾಣಿಯರ ಕುರಿತ ಕೃತಿಗಳಲ್ಲಿ ಹೆಣ್ಣಿನ ಸೌಂದರ್ಯ, ದೇಹವನ್ನೇ ವರ್ಣಿಸಿರುತ್ತಾರೆ. ಇದರಲ್ಲಿ ಅಶ್ಲೀಲವೇ ಹೆಚ್ಚಿರುತ್ತೆ. ಆದರೆ ಇದೇನು ತಪ್ಪಲ್ಲ. ಲೇಖಕರು ತಮ್ಮ ಕೃತಿಯಲ್ಲಿ ಬಂಗಾರದೊಡ್ಡಿಯ ಆತ್ಮ ಸೌಂದರ್ಯ ವರ್ಣಿಸಿದ್ದಾರೆ. ಸಾಂಸ್ಕೃತಿಕ ಸೌಂದರ್ಯ ಅನಾವರಣಗೊಳಿಸಿದ್ದಾರೆ’ ಎಂದರು.

‘ದೇವರದಾಸಿ ಎಂದರೇ ದೇವರಿಗೆ ದಾಸಿಯಾಗಬೇಕಾದವಳು. ಆದರೆ ಮನುಷ್ಯ ತನ್ನ ದಾಸಿಯನ್ನಾಗಿ ಮಾಡಿಕೊಂಡು, ವೇಶ್ಯೆ ಎಂದು ಕರೆಯುವಂತೆ ಮಾಡಿದ. ಇದರಿಂದ ದೇವರದಾಸಿ ಎಂಬ ಪರಿಕಲ್ಪನೆ ಬದಲಾಗಿದೆ’ ಎಂದು ಹೇಳಿದರು.

ವಿದ್ವಾಂಸ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ ‘ರಾಜನನ್ನು ಕೊಲ್ಲಲು ಬಂದ ದೇವದಾಸಿ ಬಂಗಾರದೊಡ್ಡಿ ರಾಜನ ಪ್ರೀತಿಗೆ ಮಾರು ಹೋಗಿ, ತನ್ನ ಉದ್ದೇಶವನ್ನೇ ಬಿಟ್ಟು ಪ್ರಾಣ ತ್ಯಾಗ ಮಾಡಿದಳು. ಈಕೆ ಭಾರತೀಯ ನಾರಿಯರ ಆದರ್ಶದ ಪ್ರತೀಕ. ಹೃದಯಹೀನ ಆಚರಣೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಚಿಂತಿಸುವುದನ್ನು ಕೃತಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ’ ಎಂದು ಶ್ಲಾಘಿಸಿದರು.

ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿದರು. ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಪ್ರಾಧ್ಯಾಪಕ ಡಾ.ಬಿ.ಗುರುಬಸವರಾಜ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಕಾದಂಬರಿ ಕರ್ತೃ ಪ್ರೊ.ಮಲೆಯೂರು ಗುರುಸ್ವಾಮಿ, ಪ್ರಕಾಶಕ ಡಿ.ಎನ್.ಲೋಕಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT