ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಪೌಷ್ಟಿಕ ಮಕ್ಕಳಿಗೆ ‘ಮನೆ ಆರೈಕೆ’

ಹೊಸ ರೂಪದಲ್ಲಿ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರ
Last Updated 25 ಜುಲೈ 2021, 3:31 IST
ಅಕ್ಷರ ಗಾತ್ರ

ಮೈಸೂರು: ಪುಟ್ಟಪುಟ್ಟ ಹೆಜ್ಜೆಗಳೊಂದಿಗೆ ಓಡುತ್ತಿದ್ದ ಮಗುವನ್ನು ತಾಯಿಯೊಬ್ಬರು ಹಿಂಬಾಲಿಸಿ ಹಿಡಿದು ಸಿರಪ್‌ ಕುಡಿಸಿದರು. ಇನ್ನೊಂದು ಮಗು ಪ್ಲಾಸ್ಟಿಕ್‌ ಸೈಕಲ್‌ ಓಡಿಸುತ್ತಿತ್ತು. ಮಗನ ತುಂಟಾಟವನ್ನು ದೂರದಿಂದಲೇ ನೋಡುತ್ತಿದ್ದ ತಂದೆ ಮತ್ತೊಂದು ಕಡೆ. ಗೋಡೆಗಳ ಮೇಲೆ ತರಕಾರಿ, ತಾಯಿ ಹಾಲುಣಿಸುವ, ಸ್ವಚ್ಛತೆ ಹಾಗೂ ಪೌಷ್ಟಿಕ ಆಹಾರ, ಮಿಕ್ಕಿಮೌಸ್‌, ಮೋಟುಪತ್ಲು, ಛೋಟಾ ಭೀಮ್‌ ಹಾಗೂ ಕಾಡುಪ್ರಾಣಿಗಳ ಕಾರ್ಟೂನ್‌ಗಳು...

ಚೆಲುವಾಂಬಾ ಆಸ್ಪತ್ರೆಯಮಕ್ಕಳ ವಿಭಾಗದ 11ನೇ ವಾರ್ಡ್‌ನ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಕಂಡು ಬಂದ ಚಿತ್ರಣವಿದು.

ಚೈಲ್ಡ್‌ ಫಂಡ್‌ ಇಂಡಿಯಾ ಹಾಗೂ ಹೋಪ್‌ ಎನ್‌ಜಿಒ ಸಹಯೋಗದಲ್ಲಿ ಈಚೆಗೆ ಈ ಕೇಂದ್ರಕ್ಕೆ ‘ಮಕ್ಕಳಸ್ನೇಹಿ’ ವಾರ್ಡ್‌ ಆಗಿ ಹೊಸ ರೂಪ ನೀಡಲಾ ಗಿದೆ. ಅಪೌಷ್ಟಿಕ ಮಕ್ಕಳಿಗೆ ಇಲ್ಲಿ ಗರಿಷ್ಠ 14 ದಿನಗಳವರೆಗೆ ಔಷಧಿ ನೀಡಿ ಆರೈಕೆ ಮಾಡಲಾಗುತ್ತದೆ. ಡಯಟೀಷಿಯನ್‌ ಮಾರ್ಗದರ್ಶನದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತದೆ. ಮಕ್ಕಳಿಗೆ ಉತ್ತಮ ವಾತಾವರಣ ಸೃಷ್ಟಿಸುವ ಸಲುವಾಗಿ ಗೋಡೆಯ ಮೇಲೆ ಚಿತ್ರಗಳನ್ನು ಬಿಡಿಸಿ ಮತ್ತಷ್ಟು ಆಕರ್ಷಣೀಯವನ್ನಾಗಿಸಲಾಗಿದೆ.

ಕೇಂದ್ರದಲ್ಲಿ ವೈದ್ಯರು, ಇಬ್ಬರು ನರ್ಸ್‌, ಡಯಟೀಷಿಯನ್‌, ಅಡುಗೆ ಮಾಡುವವರು ಹಾಗೂ ಸಹಾಯಕರು ಇದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು ಹಾಗೂ ಹಾಸನದಿಂದಲೂ ಮಕ್ಕಳನ್ನು ಕರೆತರುತ್ತಿದ್ದಾರೆ.

‘ 2013ರಿಂದಲೂ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರ ಇದೆ. ಜಿಲ್ಲೆಯಲ್ಲಿ ಎಚ್‌.ಡಿ.ಕೋಟೆ ಸೇರಿದಂತೆ ಎರಡು ಕೇಂದ್ರಗಳಿವೆ. ನಮ್ಮಲ್ಲಿ 10 ಹಾಸಿಗೆ ಸಾಮರ್ಥ್ಯವಿದೆ. ಸಾಧಾರಣ, ತೀವ್ರ ಅಪೌಷ್ಟಿಕತೆ ಹಾಗೂರಕ್ತಹೀನತೆ (ಅನೀಮಿಯಾ) ಸಮಸ್ಯೆಯುಳ್ಳ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಮಸ್ಯೆಗೆ ಕಾರಣ ತಿಳಿದು ಚಿಕಿತ್ಸೆ ಮುಂದುವರೆಸುತ್ತೇವೆ. ತಾಯಿಗೆ ಒಂದು ದಿನಕ್ಕೆ ₹275 ಸೇರಿದಂತೆ ಪ್ರತಿ ಮಗುವಿಗೆ ₹650 ಸರ್ಕಾರ ದಿಂದ ಭರಿಸಲಾಗುತ್ತದೆ. ತಾಯಿ ಕೂಲಿ ಮಾಡಿಕೊಂಡಿದ್ದರೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನೆರವು ನೀಡುತ್ತಿದೆ’ ಎಂದು ಚೆಲುವಾಂಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸುಧಾ ರುದ್ರಪ್ಪ ‘ಪ್ರಜಾವಾಣಿ’ಗೆ ಮಾಹಿತಿ
ನೀಡಿದರು.

‘ಇಲ್ಲಿ ದಾಖಲಾದ ಮಕ್ಕಳು ಮನೆಗೆ ತೆರಳುವಾಗ ಅವರಿಗೆ ಏನೆಲ್ಲಾ ಆಹಾರ ಕೊಡಬೇಕು ಎಂಬ ಸಲಹೆ ನೀಡ
ಲಾಗುತ್ತದೆ. ಕೇಂದ್ರದಲ್ಲಿ ಮೊಟ್ಟೆ, ಹಾಲು, ‘ಪೌಷ್ಟಿಕ ಲಡ್ಡು’ ಹಾಗೂ ಮೂರು ಹೊತ್ತು ಊಟ ನೀಡಲಾಗುತ್ತದೆ’ ಎಂದರು.

‘ಉಸಿರಾಟ ಹಾಗೂ ಪದೇಪದೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರಿಂದ ಇಲ್ಲಿಗೆ ಮಗು ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ’ ಎಂದು ಚಾಮರಾಜನಗರ ಜಿಲ್ಲೆ ಶಿವಪುರದ ಲಕ್ಷ್ಮಮ್ಮ ಹೇಳಿದರು. ಗ್ರಾಮೀಣ ಭಾಗದ ಅಂಗನವಾಡಿಗಳಿಂದಲೂ ಅಪೌಷ್ಟಿಕ ಮಕ್ಕಳನ್ನು ಇಲ್ಲಿಗೆ ಶಿಫಾರಸು ಮಾಡಲಾಗುತ್ತಿದೆ.

ಉತ್ತಮ ಆಹಾರ ನೀಡಿ’: ‘ಹಳ್ಳಿಗಳಲ್ಲಿ ಬಾಣಂತಿಯರಿಗೆ ಸರಿಯಾದ ಊಟ ನೀಡುವುದಿಲ್ಲ. ಅನ್ನ, ತಿಳಿಸಾರು ಕೊಡುತ್ತಾರೆ. ಮೂಢನಂಬಿಕೆ ಬಿಟ್ಟು ಉತ್ತಮ ಆಹಾರ ನೀಡಬೇಕು. ಹಣ್ಣು, ತರಕಾರಿ, ಮೊಟ್ಟೆ ಹಾಗೂ ಮಾಂಸಾಹಾರ ಕೊಡಬಹುದು’ ಎಂದು ಡಯಟೀಷಿಯನ್‌ ದಿವ್ಯಾಶ್ರೀ ಸಲಹೆ ನೀಡುತ್ತಾರೆ.

‘ಗರ್ಭಿಣಿಯರು ವಿಟಮಿನ್‌, ಫೋಲಿಕ್‌ ಆಸಿಡ್‌ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಬಾಣಂತಿಯರು ಕನಿಷ್ಠ 6 ತಿಂಗಳು ಹಾಗೂ ಗರಿಷ್ಠ 2 ವರ್ಷ ಎದೆ ಹಾಲುಣಿಸಬೇಕು. ಮಗುವಿಗೆ 6 ತಿಂಗಳ ನಂತರ ತೆಳ್ಳನೆಯ ರಾಗಿ ಸೆರಿ ಕುಡಿಸಬಹುದು. ಪೊಟ್ಟಣದ ಆಹಾರ ಒಳ್ಳೆಯದಲ್ಲ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT