ಹೋಂ ಕ್ವಾರಂಟೈನ್: ಮನೆಯ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚನೆ

ಮೈಸೂರು: ಹೋಂ ಕ್ವಾರಂಟೈನ್ನಲ್ಲಿರುವವರ ನಿವಾಸದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಮೂಲಕ, ಕೋವಿಡ್–19 ಹರಡುವಿಕೆ ತಡೆಗಟ್ಟಲು ರಾಜ್ಯ ಸರ್ಕಾರ ಪರಿಣಾಮಕಾರಿ ಕ್ರಮ ಜರುಗಿಸಿದೆ.
ರಾಜ್ಯದಲ್ಲಿ ಕೋವಿಡ್–19 ಪ್ರಕರಣ ಹೆಚ್ಚುತ್ತಿದ್ದಂತೆ, ಪೀಡಿತರ ಮನೆ ಹಾಗೂ ಪ್ರತ್ಯೇಕ ನಿಗಾದಲ್ಲಿರುವವರ ಮನೆಗಳ ತ್ಯಾಜ್ಯವನ್ನು ‘ಬಯೋ ಮೆಡಿಕಲ್ ತ್ಯಾಜ್ಯ’ ಎಂದು ಪರಿಗಣಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ, ವಿಲೇವಾರಿ ಮಾಡುತ್ತಿದೆ.
ಈ ಸಂಬಂಧ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದು, ನಗರ/ಪಟ್ಟಣ ಪ್ರದೇಶದಲ್ಲಿ ನಗರಸಭೆ/ಪುರಸಭೆ ಇದರ ಮೇಲುಸ್ತುವಾರಿ ಹೊಣೆ ಹೊತ್ತರೆ, ಗ್ರಾಮೀಣ ಪ್ರದೇಶದಲ್ಲಿ ಆಯಾ ತಾಲ್ಲೂಕು ಆಡಳಿತವೇ ಇದನ್ನು ವ್ಯವಸ್ಥಿತವಾಗಿ ನಿಭಾಯಿಸಬೇಕು ಎಂದು ಸೂಚಿಸಿದೆ.
‘ಹೋಂ ಕ್ವಾರಂಟೈನ್ ನಿವಾಸದ ತ್ಯಾಜ್ಯವನ್ನು ಹಳದಿ ಕೈಚೀಲದಲ್ಲೇ ಸಂಗ್ರಹಿಸಬೇಕು. ಮೂಲದಲ್ಲೇ ಒಣ–ಹಸಿ ಕಸ ಎಂಬುದನ್ನು ಬೇರ್ಪಡಿಸಬೇಕು. ಈ ಕಸ ಸಂಗ್ರಹಣೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು. ವಾಹನವೂ ಪ್ರತ್ಯೇಕವಾಗಿರಬೇಕು’ ಎಂಬುದು ಸುತ್ತೋಲೆಯಲ್ಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪಾಲಿಕೆಯ ನಿಯೋಜಿತ ಸಿಬ್ಬಂದಿ ಸಂಗ್ರಹಿಸಿದ ಒಣ ಕಸವನ್ನು ಖಾಸಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಡುತ್ತಿದ್ದೇವೆ. ಹಸಿ ಕಸವನ್ನು ಕೆಸರೆಯಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಸ್ಕರಿಸಿ, ಡಿ ಕಾಂಪೋಸ್ಟ್ ಮಾಡಲಾಗುತ್ತಿದೆ. ಪ್ರತಿ ಹಂತದಲ್ಲೂ ನಿರ್ದೇಶನಾಲಯದ ಸುತ್ತೋಲೆಯಲ್ಲಿನ ಎಲ್ಲ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗುತ್ತಿದೆ’ ಎಂದು ಹೇಳಿದರು.
‘ಕಸ ಸಂಗ್ರಹಿಸುವ ಸಿಬ್ಬಂದಿ, ವಾಹನದ ಚಾಲಕರಿಗೆ ಮೂರು ಪದರದ ಮುಖಗವಸು, ಹ್ಯಾಂಡ್ ಗ್ಲೌಸ್, ಕನ್ನಡಕ, ಗೌನ್ ಕೊಡಲಾಗಿದೆ. ನಿತ್ಯವೂ ಹೊಸ ಪರಿಕರ ನೀಡಲಾಗುತ್ತದೆ. ಬಳಸಿದವನ್ನು ಸಹ ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿದ್ದೇವೆ. ವಾಹನಕ್ಕೆ ಸೋಂಕು ನಾಶಕ ಸಿಂಪಡಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ನಿತ್ಯ ಆರೋಗ್ಯ ತಪಾಸಣೆ
‘ಹೋಂ ಕ್ವಾರಂಟೈನ್ಗಳ ನಿವಾಸದ ಕಸ ಸಂಗ್ರಹಿಸುವ ಸಿಬ್ಬಂದಿಯ ಆರೋಗ್ಯವನ್ನು ನಿತ್ಯವೂ ತಪಾಸಣೆ ನಡೆಸಲಾಗುವುದು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯಗೊಳಿಸಿದ್ದೇವೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ನಾಗರಾಜು ತಿಳಿಸಿದರು.
‘ಮೈಸೂರು ನಗರ, ನಂಜನಗೂಡಿನಲ್ಲಿ ಪ್ರಸ್ತುತ ಹೋಂ ಕ್ವಾರಂಟೈನ್ಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸಿದೆ. ಆದರೂ ಸ್ಥಳೀಯ ಆಡಳಿತಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ. ಪರಿಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡಲು ಸಿದ್ಧವಾಗಿವೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.