ಬುಧವಾರ, ಡಿಸೆಂಬರ್ 2, 2020
16 °C
ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಹಾಸ್ಟೆಲ್‌ ಕಟ್ಟಡ–ವರದಿ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿರುವ ಹಾಸ್ಟೆಲ್‌ ಕೊಠಡಿಯನ್ನು ಹೊಸದಾಗಿ ನಿರ್ಮಿಸಬೇಕೇ ಅಥವಾ ನವೀಕರಿಸಬೇಕೇ ಎಂಬುದರ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಅವರು ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅಲ್ಲದೇ, ಹಾಸ್ಟೆಲ್‌ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಂಜಿನಿಯರ್‌ಗಳು, ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಹೊಸ ಕಟ್ಟಡ ನಿರ್ಮಿಸಬೇಕೆಂದರೆ ವ್ಯವಸ್ಥೆ ಮಾಡುತ್ತೇನೆ. ಇಲ್ಲವೆಂದರೆ ನವೀಕರಿಸಲಾಗುವುದು. ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದ ನಿಧಿಯಿಂದ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅನುದಾನದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

58 ವರ್ಷಗಳ ಹಳೆಯ ಕಟ್ಟಡವಿದು. ಶೋಚನೀಯ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಹೀಗಾಗಿ, ಅಧಿಕಾರಿಗಳು, ಎಂಜಿನಿಯರ್‌ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಹಿಂದಿನ ಸರ್ಕಾರಗಳು ಈ ಕಟ್ಟಡದತ್ತ ಗಮನ ಹರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋವಿಡ್‌ ಪ್ರಕರಣ ಕಡಿಮೆ ಆಗುತ್ತಿರುವುದರಿಂದ ಕೋವಿಡ್‌ ಕೇಂದ್ರ ಗಳನ್ನು ಮುಚ್ಚಲಾಗು ತ್ತಿದೆ. ಅವಶ್ಯವಿದ್ದರೆ ಮಾತ್ರ ಮುಂದುವರಿಸಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್‌ ನಂತರದ ಚಿಕಿತ್ಸೆಗಾಗಿ ಪುನರ್‌ ಚೇತನ ಕೇಂದ್ರಗಳನ್ನು ಆರಂಭಿಸಲು ಸೂಚನೆ ನೀಡಿದ್ದೇನೆ’ ಎಂದೂ ಹೇಳಿದರು.

ತಲಕಾಡಿನಲ್ಲಿ ನಡೆಯಲಿರುವ ಪಂಚಲಿಂಗ ದರ್ಶನ ಮಹೋತ್ಸವ ಸಂಬಂಧ ಕೈಗೊಳ್ಳಬೇಕಿರುವ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸ ಲಾಗುವುದು ಎಂದು ತಿಳಿಸಿದರು.

ಉಸಾಬರಿ ನಮಗೇಕೆ?: ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ‘ಸಂಪುಟ ಪುನಾರಚನೆ ಉಸಾಬರಿ ನಮಗೇಕೆ? ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಏನು ಮಾಡಬೇಕೆಂಬುದು ಮುಖ್ಯಮಂತ್ರಿಯ ಪರಮಾಧಿಕಾರ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಉಪ ಚುನಾವಣೆಗಳಲ್ಲಿ ಹಣದ ಹೊಳೆ ಹರಿಸಿ ಗೆದ್ದಿರಬಹುದು. ಆ ಆಧಾರದ ಮೇಲೆ ಈ ಉಪಚು ನಾವಣೆಯಲ್ಲೂ ಹಣದ ಹೊಳೆ ಹರಿದಿದೆ ಎಂಬುದಾಗಿ ಆರೋಪಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ವ್ಯವಸ್ಥೆ ಸರಿಪಡಿಸಿಕೊಳ್ಳಲು ಸೂಚನೆ
ಮೈಸೂರು ವೈದ್ಯಕೀಯ ಕಾಲೇಜಿನ ಆಡಳಿತ ಕಾರ್ಯವೈಖರಿಯಲ್ಲಿನ ನ್ಯೂನತೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವಂತೆ ಸಚಿವ ಡಾ.ಸುಧಾಕರ್‌ ಸೂಚನೆ ನೀಡಿದರು.

ಹೊರಗುತ್ತಿಗೆ ವಿಷಯದಲ್ಲಿ ಲೋಪಗಳನ್ನು ಸರಿಪಡಿಸಲು ವೈದ್ಯಕೀಯ ಕಾಲೇಜು, ಕೆ.ಆರ್‌,ಆಸ್ಪತ್ರೆ, ಚೆಲುವಾಂಬ ಮತ್ತು ಪಿಕೆ ಸ್ಯಾನಿಟೋರಿಯಂಗಳಿಗೆ ಒಂದೇ ಗುತ್ತಿಗೆ ನೀಡಬೇಕು. ಪ್ರತ್ಯೇಕವಾಗಿ ನೀಡಿರುವುದನ್ನು ರದ್ದು ಮಾಡಬೇಕು ಎಂದು ಆದೇಶಿಸಿದರು.

ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾದ ಸಂಶೋಧನಾ ಲೇಖನಗಳ ಮಾಹಿತಿ ನೀಡಲು ಪರದಾಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಲೋಪಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಕಟ್ಟಡ ನಿರ್ವಡಹಣೆಗೆ ಇರುವ ಹಣದ ಬಳಕೆ ಮಾಡದೇ ಮೂರು ವರ್ಷದಿಂದ ಕಾಲಾಹರಣ ಮಾಡುತ್ತಿರುವುದನ್ನು ಕಂಡು ಗರಂ ಆದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸುವ ಸಂಬಂಧ ಶಾಸಕ ಎಲ್‌.ನಾಗೇಂದ್ರ ಮಾಡಿದ ಮನವಿಗೆ ಸ್ಪಂದಿಸಿದರು. ಮುಂದಿನ ವರ್ಷಕ್ಕೆ ನೂರು ವರ್ಷ ಪೂರೈಸಲಿರುವ ಕೆ.ಆರ್‌.ಆಸ್ಪತ್ರೆ ಕಟ್ಟಡಗಳ ನವೀಕರಣ ಮತ್ತು ದುರಸ್ತಿ ಕಾರ್ಯಕ್ಕೆ 52 ಕೋಟಿ ಪ್ರಸ್ತಾವನೆಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದರು.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜ.1 ರಿಂದ‌ ಉಚಿತವಾಗಿ‍ ‍ಆರೋಗ್ಯ ಪರೀಕ್ಷೆ ಹಾಗೂ ಔಷಧ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜನೆ ರೂಪಿಸುವ ಸಂಬಂಧ ಸಚಿವ ಡಾ.ಕೆ.ಸುಧಾಕರ್‌ ಬುಧವಾರ ಇಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಿಂದ ಹಿಡಿದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆವರೆಗೆ ಇದು ಅನ್ವಯಿಸುತ್ತದೆ. ರಕ್ತ ಪರೀಕ್ಷೆ ಸೇರಿದಂತೆ ಯಾವುದೇ ರೀತಿಯ ಪರೀಕ್ಷೆಗಳಿಗೂ ಶುಲ್ಕ ಪಡೆಯದಂಥ ವ್ಯವಸ್ಥೆ ಜಾರಿಗೆ ತರುವ ವಿಚಾರ ಪ್ರಸ್ತಾಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಔಷಧ ಅಂಗಡಿ ಇರಬಾರದು. ಬದಲಾಗಿ ಸರ್ಕಾರ ನೀಡುವ ಔಷಧ, ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಹಾಗೂ ಗುಣಮಟ್ಟದ ಸೇವೆ ನೀಡುವಂತೆ ಮಾಡಲು ಸಮಿತಿ ರಚಿಸಲಾಗುವುದು ಎಂದೂ ಹೇಳಿದ್ದಾರೆ.

ಜನರಿಕ್ ಔಷಧಿ ಮಳಿಗೆ ತಕ್ಷಣ ಆರಂಭಿಸಬೇಕು, ಹೊರಗಿನಿಂದ ಖರೀದಿಗೆ ಚೀಟಿ ಕೊಡುವ ಪರಿಪಾಠ ನಿಲ್ಲಬೇಕು. ಸರ್ಕಾರಿ ಔಷಧ ಮಳಿಗೆಗಳಲ್ಲಿ ಖಾಸಗಿ ಕಂಪನಿಗಳ ಔಷಧಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದಾರೆ. ಸದ್ಯ ಕೆ.ಆರ್‌.ಆಸ್ಪತ್ರೆ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಬಳಕೆದಾರರ ಶುಲ್ಕ ಪಡೆಯಲಾಗುತ್ತಿದೆ.

ಬೆಂಗಳೂರು ಮೆಡಿಕಲ್ ಕಾಲೇಜು ಮಾದರಿಯಲ್ಲೇ ಸ್ಕಿಲ್‌ ಲ್ಯಾಬ್‌ ಅನ್ನು ಎಂಎಂಸಿಯಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಮೂಲಕ ಸ್ಥಾಪಿಸಲಾಗುವುದು. ಇಲ್ಲಿನ ನಾಲ್ಕು ಆಸ್ಪತ್ರೆಗಳ ಮೇಲುಸ್ತುವಾರಿಗೆ ವಿಶೇಷ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು