ಮಂಗಳವಾರ, ಅಕ್ಟೋಬರ್ 4, 2022
26 °C

‘ಉತ್ತಮ ವ್ಯಕ್ತಿತ್ವ ರೂಪಿಸಿದ ಬಿಸಿಎಂ ಹಾಸ್ಟೆಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಾನು ದೇವರಾಜ ಅರಸು ಅವರಂತಹ ಪುಣ್ಯಾತ್ಮ ನಿರ್ಮಿಸಿದ ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ’ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಎಂ.ಕೆ.ಸವಿತಾ ತಿಳಿಸಿದರು.

ಕುವೆಂಪುನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ಹಾಸ್ಟೆಲ್‌ನಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

‘ನಾನು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ನಮ್ಮಲ್ಲೇ ಪೈಪೋಟಿ ಇಟ್ಟುಕೊಂಡು ಓದುತ್ತಿದ್ದೆವು. ಜಾತಿ, ಮತ ಸೇರಿದಂತೆ ಯಾವುದೇ ತಾರತಮ್ಯವಿರಲಿಲ್ಲ. ಊಟ–ತಿಂಡಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕುಗ್ರಾಮಗಳಿಂದ ಬಂದ ನಮಗೆ ಮೈಸೂರಿನಂಥ ನಗರದಲ್ಲಿ ಉಳಿಯಲು ಜಾಗ ಸಿಕ್ಕಿದ್ದೇ ಪುಣ್ಯ. ನಾವು ಓದುವಾಗ ರ‍್ಯಾಂಕ್ ಪಡೆದಿದ್ದ ಶೈಲಜಾ ಎಂಬ ಹಿರಿಯ ವಿದ್ಯಾರ್ಥಿನಿಯಿಂದ ಆಗಿನ ಜಿಲ್ಲಾಧಿಕಾರಿ ಎಂ.ರಾಮಯ್ಯ ನಮಗೆ ಮಾರ್ಗದರ್ಶನ ಮಾಡಿಸುತ್ತಿದ್ದರು. ಅವರೇ ನಮಗೆ ರೋಲ್ ಮಾಡೆಲ್’ ಎಂದರು.

ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿ ಹಾಗೂ ಮೂಳೆತಜ್ಞ ಡಾ.ಮಾಲೇಗೌಡ ಮಾತನಾಡಿ. ‘ಹಿಂದುಳಿದ ವರ್ಗದ ಜನರ ನಾಡಿ ಮಿಡಿತವನ್ನು ಅರಿತಿದ್ದ ದೇವರಾಜ ಅರಸು ಅವರ ದೂರದೃಷ್ಟಿತ್ವದಿಂದ ಹಾಸ್ಟೆಲ್‌ಗಳು ಆರಂಭವಾದವು. ನಾವು ಹರಿದ ಬಟ್ಟೆಯಲ್ಲಿ ಬಂದಿದ್ದೆವು. ಈ ಹಾಸ್ಟೆಲ್‌ನಲ್ಲಿ ಓದಿದಂತಹ 20 ಮಂದಿ ವೈದ್ಯರಾಗಿ ಮೈಸೂರು ನಗರದಲ್ಲಿದ್ದೇವೆ. ಪ್ರಾಧ್ಯಾಪಕರಾಗಿದ್ದಾರೆ. ವಿಜ್ಞಾನಿಗಳಾಗಿದ್ದಾರೆ. ವಿವಿಧ ನೌಕರಿ ಪಡೆದಿದ್ದಾರೆ. ನಮಗೆ ವ್ಯಕ್ತಿತ್ವ ರೂಪಿಸಿದ ವಿದ್ಯಾರ್ಥಿನಿಲಯವನ್ನು ಮರೆಯಲಾಗದು’ ಎಂದು ತಿಳಿಸಿದರು.

ರಾಜ್ಯ ಬುಡಕಟ್ಟು ಸಂಸ್ಥೆಯ ಸಂಶೋಧನಾ ಅಧಿಕಾರಿ ಶಿವಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿ ದಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಮೊಬೈಲ್‌ ಫೋನ್‌ನಿಂದ ದೂವಿರಬೇಕು’ ಎಂದು ಸಲಹೆ ನೀಡಿದರು.

‘ಸರ್ಕಾರವು ವಿದ್ಯಾರ್ಥಿಗಳಿಗೆ ಎಲ್ಲ ಸವಲತ್ತುಗಳನ್ನೂ ನೀಡುತ್ತಿದೆ. ಸಾಮಾಜಿಕ ಜಾಲತಾಣದಿಂದ ದೂರವಿದ್ದು, ಜೀವನದಲ್ಲಿ ಮುಂದೆ ಬರುವ ಗುರಿ ಇಟ್ಟುಕೊಂಡು ಅಭ್ಯಾಸದಲ್ಲಿ ತೊಡಗಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಆರ್.ಮಹೇಶ ತಿಳಿಸಿದರು.

ಡಾ.ನಾಗೇಶ್, ಡಾ.ಶರತ್‌ಕುಮಾರ್, ಬಿ.ಸಿ.ರೇಖಾ, ಲತಾ ಶಿವರಾಂ, ಸೋನಿಯಾ, ಸುಷ್ಮಾ, ದಶರಥ, ಶಶಿಕಲಾ, ಮಂಜುಳಾ ಭದ್ರೇಗೌಡ ಮಾತನಾಡಿದರು.

ವಿಸ್ತರಾಣಾಧಿಕಾರಿ ಸತೀಶ್, ಸುಚೇಂದ್ರಕುಮಾರ್, ಬೀರೇಗೌಡ ಇದ್ದರು.

ತಾಲ್ಲೂಕು ಕಲ್ಯಾಣಾಧಿಕಾರಿ ಚಂದ್ರಕಲಾ ಸ್ವಾಗತಿಸಿದರು. ಸಿ.ಮಹಾಲಕ್ಷ್ಮಿ ನಿರೂಪಿಸಿದರು. ಅನುಪಮಾ ವಂದಿಸಿದರು.
 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.