ಬುಧವಾರ, ಮೇ 25, 2022
29 °C

ಅಂಬೇಡ್ಕರ್‌ ಚಿತ್ರ ತೆರವು: ಹೈಕೋರ್ಟ್‌ನಿಂದ ತನಿಖೆಗೆ ಶ್ರೀನಿವಾಸಪ್ರಸಾದ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ತೆರವು ಮಾಡಿದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸಮಗ್ರ ತನಿಖೆ ನಡೆಸಬೇಕು’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಒತ್ತಾಯಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳೇ ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರವಹಿಸಬೇಕಿದೆ’ ಎಂದರು.

‘ಈ ಘಟನೆ ನ್ಯಾಯಾಲಯದಲ್ಲಿ ಆಗಿರುವುದರಿಂದ ಅಲ್ಲಿನ ಜಿಲ್ಲಾಡಳಿತಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಲು ಆಗದು. ಘಟನೆ ಬಗ್ಗೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು. ಈ ಸಂಬಂಧ ಕಾನೂನು ಸಚಿವರಿಗೆ ಪತ್ರ ಬರೆಯುತ್ತೇನೆ’ ಎಂದು ಹೇಳಿದರು.

‘ಭಾವಚಿತ್ರ ಹಾಕದೇ ಇರುತ್ತಿದ್ದರೆ, ನಾವು ಯಾರೂ ಕೇಳುತ್ತಲೂ ಇರಲಿಲ್ಲ. ಆದರೆ ಅಲ್ಲಿ ಇರಿಸಿದ್ದ ಭಾವಚಿತ್ರ ತೆರವು ಮಾಡಿದ್ದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಒಬ್ಬ ಜಿಲ್ಲಾ ನ್ಯಾಯಾಧೀಶರ ಮನಃಸ್ಥಿತಿ ಈ ರೀತಿ ಇದೆಯೆಂದಾದರೆ, ಜನಸಾಮಾನ್ಯರ ಮನಸ್ಸು ಯಾವ ರೀತಿ ಇರಬೇಕು?’ ಎಂದು ವಿಷಾದ ವ್ಯಕ್ತಪಡಿಸಿದರು.

‘ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರ ಇಡಬೇಕೆಂಬ ಸೂಚನೆಯನ್ನು ಹೈಕೋರ್ಟ್‌ ನೀಡಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆದರೆ ಭಾವಚಿತ್ರ ತೆಗೆಯಬೇಕು ಎಂಬ ಸೂಚನೆ ಇದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು