ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲಾತಿ ನೀಡದಿದ್ದರೆ ಅ.1ರಿಂದ ಧರಣಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
Last Updated 31 ಆಗಸ್ಟ್ 2021, 3:42 IST
ಅಕ್ಷರ ಗಾತ್ರ

ಮೈಸೂರು: ‘ಸರ್ಕಾರ ನೀಡಿರುವ ಸೆ.15ರ ಗಡುವಿನ ಒಳಗೆ ಗೌಡ ಲಿಂಗಾಯತ, ಮಲೇಗೌಡ ಹಾಗೂ ದೀಕ್ಷಾ ಲಿಂಗಾಯತ ಒಳಗೊಂಡು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅ.1ರಿಂದ ಧರಣಿ ಹಮ್ಮಿಕೊಳ್ಳಲಾಗುವುದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದರು.

‘ಚಾಮರಾಜನಗರದಿಂದ ಆರಂಭಿಸಿರುವ ‘ಪ್ರತಿಜ್ಞಾ ಪಂಚಾಯತ್‌’ ಅಭಿಯಾನ ಮೈಸೂರು, ಕೊಡಗು ಜಿಲ್ಲೆಗಳನ್ನು ಸಂಚರಿಸಿ ಮಂಡ್ಯ ತಲುಪಿದೆ. ಮಂಗಳವಾರ (ಆ.31) ಹಾಸನ ಜಿಲ್ಲೆ ಪ್ರವೇಶಿಸಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

’ಈ ಭಾಗದಲ್ಲಿ ಗೌಡ ಲಿಂಗಾಯತ ಸಮಾಜ ಧಾರ್ಮಿಕವಾಗಿ ಮುಂದುವರೆದಿದೆ, ಆರ್ಥಿಕವಾಗಿ ಹಿಂದುಳಿದಿದೆ. ಆದರೆ, ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿದೆ. ಇಲ್ಲಿ ರಾಜಕೀಯ ನಾಯಕರ ಕೊರತೆಯಿದೆ. ಚಾಮರಾಜನಗರ, ಹನೂರು, ವರುಣಾ, ಕೃಷ್ಣರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಗೌಡ ಲಿಂಗಾಯತ ಸಮುದಾಯದವರಿದ್ದಾರೆ. ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ ಕುಮಾರ್‌ ಹೊರತುಪಡಿಸಿದರೆ ಬೇರೆ ಶಾಸಕರಿಲ್ಲ. ಆದ್ದರಿಂದ ರಾಜಕೀಯ ಪ್ರಾತಿನಿಧ್ಯ ಕೊಡಿ’ ಎಂದು ಆಗ್ರಹಿಸಿದರು.

‘ಮೀಸಲಾತಿ ಪಡೆಯಲು ರಾಜಕೀಯ ಅಧಿಕಾರ ಬೇಕಾಗುತ್ತದೆ. ಮತಬ್ಯಾಂಕ್‌ಗಾಗಿ, ಹಿಂಬಾಲಕರನ್ನಾಗಿ ಮಾತ್ರ ನಮ್ಮ ಸಮುದಾಯದವರನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಸಣ್ಣಪುಟ್ಟ ಸಮುದಾಯಗಳಿಗೆ ಅವಕಾಶ ನೀಡಲಾಗುತ್ತಿದೆ. ಮುಂಬರುವ ಜಿ.ಪಂ, ವಿಧಾನಸಭಾ ಕ್ಷೇತ್ರಗಳ ಚುನಾವಣೆಗಳಲ್ಲಿ ಸಮುದಾಯದವರಿಗೆ ಟಿಕೆಟ್‌ ನೀಡಬೇಕು’ ಎಂದು ಒತ್ತಾಯಿಸಿದರು.

‘ಅಭಿಯಾನ ಮುಗಿದ ಮೇಲೆ ಮೈಸೂರು ಭಾಗದಲ್ಲಿ ಬೃಹತ್‌ ಸಮಾವೇಶ ಕೈಗೊಂಡು, ರಾಜಕೀಯ ಪ್ರಾತಿನಿಧ್ಯಕ್ಕೆ ಹಕ್ಕೊತ್ತಾಯ ಮಾಡುತ್ತೇವೆ’ ಎಂದು ಹೇಳಿದರು.

ಪಂಚಮಸಾಲಿ ಲಿಂಗಾಯತ ಹೋರಾಟ ಸಮನ್ವಯ ಸಮಿತಿ ಸಂಚಾಲಕ ಮಲ್ಲೇಶ್‌, ಲಿಂಗಾಯತ ಗೌಡ ಮಹಾಸಭಾದ ರಾಜ್ಯಾಧ್ಯಕ್ಷ ಆಲನಹಳ್ಳಿ ಪುಟ್ಟಸ್ವಾಮಿ, ರಾಜ್ಯ ಕಾರ್ಯದರ್ಶಿ ಕೇಬಲ್‌ ಮಹೇಶ್‌, ಯುವ ಘಟಕದ ಅಧ್ಯಕ್ಷ ಶಂಭು ಪಟೇಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT