ಭಾನುವಾರ, ಮೇ 16, 2021
22 °C
ಏಪ್ರಿಲ್ 21ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆಯೋಜನೆ

ನಗರದಲ್ಲಿ ಕಂಸಾಳೆ ಮಹಾದೇವಯ್ಯ ಸ್ಮರಣೆ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸೀಮಿತ ಪರಿಸರದಲ್ಲಿದ್ದ ಕಂಸಾಳೆ ಕಲೆಯನ್ನು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ದವರು ಕಂಸಾಳೆ ಮಹದೇವಯ್ಯ.

ಇವರ ತಂದೆ ಕಂಸಾಳೆ ಕಲಾವಿದರಾಗಿದ್ದರೂ ಇವರು ಕಂಸಾಳೆ ಕಲಿತದ್ದು ಮಾತ್ರ ನೀಲಗಾರರಿಂದ. ಬಾಲ್ಯದಲ್ಲಿಯೇ ಕಂಸಾಳೆಯನ್ನು ಕರಗತ ಮಾಡಿಕೊಂಡ ಇವರು, ವೈಯಕ್ತಿಕ ಸಾಧನೆಯಿಂದ ತಂಡದ ಸಾಧನೆ ಮೇಲು ಎಂದು ತಿಳಿದು, ತಮ್ಮದೇ ಆದ ತಂಡವೊಂದನ್ನು ಇವರು ಕಟ್ಟಿದರು.

ಈ ಮಧ್ಯೆ ಇವರಿಗೆ ರೈಲ್ವೆಯಲ್ಲಿ ಉದ್ಯೋಗ ಲಭಿಸಿತು. ಆದರೆ, ಕಂಸಾಳೆ ಪ್ರದರ್ಶನಕ್ಕೆ ಇಲಾಖೆಯ ಕೆಲಸ ಅಡ್ಡ ಬರುತ್ತಿದ್ದುದ್ದರಿಂದ ಕಂಸಾಳೆಗಾಗಿ ಇವರು ಕೆಲಸವನ್ನೇ ತ್ಯಜಿಸಿ, ಕಲಾಸೇವೆಗೆ ನಿಂತರು. ಮಹದೇಶ್ವರ ಕಾವ್ಯವನ್ನು ಹಾಡುತ್ತಾ, ಕಂಸಾಳೆ ಕಲೆ ಪ್ರದರ್ಶಿಸುತ್ತಾ ಮಲೆಮಹದೇಶ್ವರ ಬೆಟ್ಟವನ್ನೇ ಹತ್ತುವಂತಹ ಸಾಹಸಿ ಇವರಾಗಿದ್ದರು.

ನಂತರ, ಇವರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಸಂದರ್ಶಕ ಕಲಾವಿದರಾಗಿ  ನೇಮಕವಾಗುತ್ತಾರೆ. ಇಲ್ಲಿನ ಜನಪದ ವಸ್ತು ಸಂಗ್ರಹಾಲಯದಲ್ಲಿ ಹಲವು ವರ್ಷ ಕೆಲಸ ಮಾಡುವ ಇವರು ಹಲವು ಮಂದಿಗೆ ಕಂಸಾಳೆಯನ್ನು ಕಲಿಸುತ್ತಾರೆ.

ಸಿದ್ಧಪ್ಪಾಜಿ ಕಥೆ, ಮಲೆಮಹದೇಶ್ವರ ಕಥೆ, ನಂಜುಂಡೇಶ್ವರ ಕಥೆ, ರಾಣಿ ಬಂಜೆಹೊನ್ನಮ್ಮ, ಚಾಮುಂಡೇಶ್ವರ ಕಥೆ, ಬಿಳಿಗಿರಿ ರಂಗನಾಥಸ್ವಾಮಿ ಕಥೆ, ಹಾಲಂಬಾಡಿ ಜುಂಜೇಗೌಡರ ಕಥೆ, ಶಿವಶರಣೆ ಶಂಕಮ್ಮ, ಇಡ್ಲಿ ಮಾದಮ್ಮ ಮೊದಲಾದ ಉಪಕಥೆಗಳನ್ನು ಸೇರಿದಂತೆ ಸುಮಾರು 40ಕ್ಕೂ ಹೆಚ್ಚಿನ  ಜನಪದ ಕಥೆಗಳನ್ನು ಇವರು ಹಾಡುತ್ತಿದ್ದರು.

ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಅವರು ಇವರ ಕಲಾ ಪ್ರದರ್ಶನವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಲವು ದೇಶಗಳಲ್ಲಿ ಇವರು ತಮ್ಮ ಕಲೆಯನ್ನು ಪ್ರದರ್ಶಿಸಿದ್ದರು.

ಕಂಸಾಳೆ ಭೀಷ್ಮ, ಕಂಸಾಳೆ ರತ್ನ ಪ್ರಶಸ್ತಿಗಳು, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳು ಇವರಿಗೆ ಸಂದಿವೆ.

1996ರ ಏಪ್ರಿ‌ಲ್ 21ರಂದು ಇವರು ನಿಧನರಾದರು. ಇವರ ಸ್ಮರಣೆಗಾಗಿ ರಾಮಾನುಜ ರಸ್ತೆ, ಜೆಎಲ್‌ಬಿ ರಸ್ತೆ ಸಂಧಿಸುವ ವೃತ್ತಕ್ಕೆ ಇವರ ಹೆಸರನ್ನೇ ಇಡುವ ಮೂಲಕ ಮೈಸೂರಿಗರು ಇವರಿಗೆ ಗೌರವ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು