ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ಹೆಚ್ಚಳ, ಜಿಲ್ಲೆಯಲ್ಲಿ ಕಟ್ಟೆಚ್ಚರ

ನೆಗೆಟಿವ್‌ ವರದಿ ಇದ್ದರಷ್ಟೆ ಕೋಟೆ ತಾಲ್ಲೂಕಿನ ರೆಸಾರ್ಟ್‌ಗೆ ಪ್ರವೇಶ, ಜಿಲ್ಲೆಯಾದ್ಯಂತ ಕಡ್ಡಾಯಕ್ಕೆ ಚಿಂತನೆ
Last Updated 3 ಆಗಸ್ಟ್ 2021, 4:35 IST
ಅಕ್ಷರ ಗಾತ್ರ

ಮೈಸೂರು: ‌ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ವಾಸ್ತವ್ಯಕ್ಕೆ 72 ಗಂಟೆಯೊಳಗಿನ ಆರ್‌ಟಿ‍–ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ.

ಕೇರಳ ಗಡಿ ಭಾಗದಲ್ಲಿರುವ ಎಚ್‌.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯ ರೆಸಾರ್ಟ್ ಹಾಗೂ ಹೋಂ ಸ್ಟೇಗಳಲ್ಲಿ ಈಗಾಗಲೇ ನೆಗೆಟಿವ್‌ ವರದಿ ತೋರಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ.

‘ಬೆಂಗಳೂರಿನಿಂದಲೇ ಶೇ 90ರಷ್ಟು ಪ್ರವಾಸಿಗರು ರೆಸಾರ್ಟ್‌ಗಳಿಗೆ ಬರುತ್ತಿದ್ದಾರೆ. ತಾಲ್ಲೂಕಿನಲ್ಲಿ 11 ರೆಸಾರ್ಟ್‌ಗಳಿವೆ. ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡುವಂತೆ ರೆಸಾರ್ಟ್‌ ಮಾಲೀಕರಿಗೆ ಪತ್ರ ಬರೆಯಲಾಗಿದೆ’ ಎಂದು ಎಚ್‌.ಡಿ.ಕೋಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಸಫಾರಿಗೆ ಮುನ್ನ ಪ್ರತಿ ಬಾರಿಯೂ ವಾಹನವನ್ನು ಸ್ಯಾನಿಟೈಸ್‌ ಮಾಡಬೇಕು. ಪ್ರವಾಸಿಗರನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಕೇರಳದಿಂದ ಬರುವ ಪ್ರವಾಸಿಗರ ಮೇಲೆ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ನಿಗಾ ಇಡಲಾಗಿದೆ’ ಎಂದರು.

ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ, ನಂಜನಗೂಡು ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡುವ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ಬರುವ ಪ್ರವಾಸಿ
ಗರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಈ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರವಾಸಿಗರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕೋವಿಡ್‌ ಮಾರ್ಗಸೂಚಿ ಪಾಲಿಸಲಾಗುತ್ತಿದೆ. ಸದ್ಯಕ್ಕೆ ನೆಗೆಟಿವ್‌ ವರದಿ ಕಡ್ಡಾಯ ಮಾಡಿಲ್ಲ.

’‍ನೆಗೆಟಿವ್‌ ವರದಿ ಕಡ್ಡಾಯಗೊಳಿಸು ವಂತೆ ಯಾವುದೇ ಸೂಚನೆ ಬಂದಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ’ ಎಂದು ಡಿಸಿಎಫ್‌ ಪ್ರಶಾಂತ್‌ ಕುಮಾರ್‌, ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಡಿ. ಮಹೇಶ್‌ ಕುಮಾರ್‌ ತಿಳಿಸಿದರು.

ಬಸ್‌ ಸಂಚಾರ ಬಂದ್‌: ಮೈಸೂರಿನಿಂದ ಕೇರಳಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

‘ಸಂಚಾರ ಸ್ಥಗಿತಗೊಳಿಸಿ ಮೂರು ದಿನಗಳಾಯಿತು. ಕೋವಿಡ್‌ ಇಲ್ಲದ ಸಮಯದಲ್ಲಿ ಮೈಸೂರು ಸಬ್‌ಅರ್ಬನ್‌ ಬಸ್‌ ನಿಲ್ದಾಣದ ಮೂಲಕ ಸುಮಾರು 25 ಬಸ್ಸುಗಳು ಕೇರಳಕ್ಕೆ ಸಂಚರಿಸುತ್ತಿದ್ದವು’ ಎಂದು ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌ ತಿಳಿಸಿದರು.

ಬಂಡೀಪುರ, ಬಿಆರ್‌ಟಿಯ ಕೆ.ಗುಡಿಯಲ್ಲಿ ಸಫಾರಿ ನಡೆಸಲು ನೆಗೆಟಿವ್‌ ವರದಿ ಪ್ರಮಾಣ ಪತ್ರವಿದ್ದರಷ್ಟೇ ಅವಕಾಶ ಎಂದು ಚಾಮರಾಜನಗರ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ವಾರಾಂತ್ಯದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಲಾಗಿದ್ದು, ಭರಚುಕ್ಕಿ, ಹೊಗೇನಕಲ್‌ ಜಲಪಾತ ಪ್ರದೇಶಗಳಿಗೆ ಹಾಗೂ ಮಲೆಮಹದೇಶ್ವರ ಬೆಟ್ಟ ಸೇರಿದಂತೆ ಜಿಲ್ಲೆಯ ಎಲ್ಲ ದೇವಾಲಯಗಳಿಗೆ ಶನಿವಾರ ಮತ್ತು ಭಾನುವಾರ ಪ್ರವೇಶವಿಲ್ಲ.

ನೆಗೆಟಿವ್‌ ವರದಿ ಇಲ್ಲದಿದ್ದರೆ ವಾಪಸ್‌: ‘ಕೇರಳ ಸೇರಿದಂತೆ ಹೊರ ರಾಜ್ಯಗಳ ಪ್ರಯಾಣಿಕರು ಮೈಸೂರು ಜಿಲ್ಲೆ ಪ್ರವೇಶಿಸಲು ಎರಡು ಡೋಸ್‌ ಲಸಿಕೆ ಪಡೆದಿದ್ದರೂ 72 ಗಂಟೆಯೊಳಗಿನ ಆರ್‌ಟಿ‍–ಪಿಸಿಆರ್‌ ನೆಗೆಟಿವ್‌ ವರದಿ ತೋರಿಸುವುದು ಕಡ್ಡಾಯ. ಇಲ್ಲದಿದ್ದರೆ ವಾಪಸ್‌ ಕಳುಹಿಸಲಾಗುವುದು‌’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್‌ ತಿಳಿಸಿದರು.

‘ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಆರೋಗ್ಯ, ಕಂದಾಯ, ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. 50 ಸರಕು ಸಾಗಣೆ ವಾಹನ ಸೇರಿದಂತೆ ಸುಮಾರು 150 ವಾಹನಗಳು ಕೇರಳದಿಂದ ನಿತ್ಯ ಬರುತ್ತಿವೆ’ ಎಂದರು.

ಚಾಮುಂಡಿ ಬೆಟ್ಟ; ಹೆಚ್ಚುತ್ತಿರುವ ಭಕ್ತಾದಿಗಳು: ‘ಆಷಾಢ ಮಾಸವಾಗಿರುವುದಿಂದ ಚಾಮುಂಡಿಬೆಟ್ಟಕ್ಕೆ ಬರುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ನಿತ್ಯ ಐದಾರು ಸಾವಿರ ಮಂದಿ ಬರುತ್ತಿದ್ದಾರೆ’ ಎಂದು ಚಾಮುಂಡೇಶ್ವರಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್‌ ಹೇಳಿದರು.

‘ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಒಳಬಿಡಲಾಗುತ್ತಿದ್ದು, ನಿತ್ಯ ಆವರಣವನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ನೆಗೆಟಿವ್‌ ವರದಿ ಕಡ್ಡಾಯ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT