ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೌತೆ ಪ್ರಭಾವ: ಮುಂಗಾರು ಬೆಳೆಗೆ ಜೀವ

ಕೃಪೆ ತೋರಿದ ಕೃತ್ತಿಕಾ l ಕೃಷಿಕರಲ್ಲಿ ಮಂದಹಾಸ l ಕೃಷಿ ಚಟುವಟಿಕೆ ಚುರುಕು
Last Updated 18 ಮೇ 2021, 3:52 IST
ಅಕ್ಷರ ಗಾತ್ರ

ಮೈಸೂರು: ತೌತೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಾದ್ಯಂತ ಚೆದುರಿದಂತೆ ಸಾಧಾರಣ ಮಳೆಯಾಗಿದೆ. ಎರಡ್ಮೂರು ದಿನದಿಂದ ಕೃಷಿ ಚಟುವಟಿಕೆಗೆ ಪೂರಕವಾದ ವಾತಾವರಣವಿರುವುದು ಕೃಷಿಕ ಸಮುದಾಯದ ಖುಷಿ ಹೆಚ್ಚಿಸಿದೆ.

ಭರಣಿ ಮಳೆ ಧರಣಿಗೆ ಬೀಳದಿದ್ದರಿಂದ ಈ ವರ್ಷದ ಮುಂಗಾರು ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಭೂಮಿಗೆ ಬಿತ್ತಿದ್ದ ಬೀಜವು ಮೊಳಕೆಯೊಡೆದು ಚಿಗುರಿದ್ದರೂ, ಮಳೆಯಿಲ್ಲದೆ ಬಿಸಿಲ ಝಳಕ್ಕೆ ಬಾಡುತ್ತಿತ್ತು. ಇದೀಗ ಮೂರ್ನಾಲ್ಕು ದಿನದ ವಾತಾವರಣ ಕೃಷಿ ಚಿತ್ರಣವನ್ನೇ ಬದಲಿಸಿದೆ.

ಒಣಗುತ್ತಿದ್ದ ಚೋಟುದ್ದ ಪೈರು ಹಸಿರಿನಿಂದ ನಳನಳಿಸುತ್ತಿದೆ. ಬಿತ್ತನೆಗೆ ಸಿದ್ದ ಮಾಡಿದ್ದ ಹೊಲ–ಗದ್ದೆಗೆ, ಬೆಳೆದಿದ್ದ ಪೈರಿಗೆ ರೈತರು ಗೊಬ್ಬರ ಚೆಲ್ಲುವ ಚಟುವಟಿಕೆ ಜಿಲ್ಲೆಯಾದ್ಯಂತ ಚುರುಕಿನಿಂದ ನಡೆದಿದೆ.

ಕೃತ್ತಿಕಾ ಮಳೆಯ ಕೃಪೆಯಿಂದ ಖುಷಿಯಾಗಿರುವ ಕೃಷಿಕ ಸಮೂಹ, ಕೊಂಚ ವಿಳಂಬವಾದರೂ ಹತ್ತಿ, ಹೆಸರು, ಉದ್ದು, ಅಲಸಂದೆ ಬಿತ್ತನೆಗೆ ಸಿದ್ಧತೆ ನಡೆಸಿಕೊಂಡಿದೆ. ಹಲವರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ ಬಿತ್ತನೆಯತ್ತಲೂ ತಮ್ಮ ಒಲವು ತೋರುತ್ತಿದ್ದಾರೆ ಎಂಬುದು ಕೃಷಿ ಇಲಾಖೆಯ ಮೂಲಗಳಿಂದ ಖಚಿತ ಪಟ್ಟಿದೆ.

ಶನಿವಾರದಿಂದಲೂ ಜಿಲ್ಲೆಯಲ್ಲಿ ಚಂಡಮಾರುತದ ಪ್ರಭಾವದಿಂದ ವರ್ಷಧಾರೆಯಾಗಿದ್ದು, ಸೋಮವಾರ ದಿನವಿಡಿ ಮೋಡ ಕವಿದ ವಾತಾವರಣವಿತ್ತು. ಹಲವರು ಇದೇ ಸಮಯವನ್ನು ಹೊಲ–ಗದ್ದೆಗೆ ಗೊಬ್ಬರ ಚೆಲ್ಲಲು ಬಳಸಿಕೊಂಡಿದ್ದು ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಗೋಚರಿಸಿತು.

ಮಳೆ ಬಿಡುವು ನೀಡಿದರೆ ಮಂಗಳವಾರದಿಂದಲೇ ಅಸಂಖ್ಯಾತ ರೈತರು ಮೆಕ್ಕೆಜೋಳ, ಹೈಬ್ರಿಡ್‌ ಜೋಳ, ಹೆಸರು, ಉದ್ದು, ಅಲಸಂದೆ, ರಾಗಿ, ಸೂರ್ಯಕಾಂತಿ, ನೆಲಗಡಲೆ, ಎಳ್ಳು, ಹತ್ತಿ, ತಂಬಾಕಿನ ನಾಟಿ ನಡೆಸಲಿದ್ದಾರೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗ ಸುರಿದ ವರ್ಷಧಾರೆಗೆ ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಸರಗೂರು ತಾಲ್ಲೂಕು ಸೇರಿದಂತೆ ಕೆ.ಆರ್‌.ನಗರ, ಸಾಲಿಗ್ರಾಮ ತಾಲ್ಲೂಕಿನ ಕೆಲ ಭಾಗದಲ್ಲಿ ತಂಬಾಕು ಸಸಿ ನಾಟಿಯ ಕೆಲಸ ವೇಗ ಪಡೆದುಕೊಳ್ಳಲಿದೆ.

ಮೈಸೂರು, ನಂಜನಗೂಡು, ತಿ.ನರಸೀಪುರ ತಾಲ್ಲೂಕು ಸೇರಿದಂತೆ ಕೆ.ಆರ್.ನಗರ, ಎಚ್‌.ಡಿ.ಕೋಟೆ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಹೆಸರು, ಅಲಸಂದೆ, ಉದ್ದಿನ ಫಸಲಿಗೆ ಮಳೆ ಸಹಕಾರಿಯಾಗಿದೆ.

ಹುಣಸೂರು, ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ ತಾಲ್ಲೂಕಿನಲ್ಲಿ ಈಗಾಗಲೇ ಬಿತ್ತನೆಯಾಗಿದ್ದ ಮೆಕ್ಕೆಜೋಳ, ನಂಜನಗೂಡು ಸೇರಿದಂತೆ ತಿ.ನರಸೀಪುರ ತಾಲ್ಲೂಕಿನ ಕೆಲ ಭಾಗದಲ್ಲಿ ಬಿತ್ತನೆಯಾಗಿದ್ದ ಸೂರ್ಯಕಾಂತಿ ಬೆಳೆಗೆ ಇದೀಗ ಸುರಿದ ಮಳೆ ಜೀವ ಕಳೆ ತುಂಬಿದೆ.

ಸಕಾಲಕ್ಕೆ ಭರಣಿ ಮಳೆ ಬಾರದಿದ್ದದ್ದು ಮುಂಗಾರು ಚಟುವಟಿಕೆಗೆ ಹಿನ್ನಡೆಯಾಗಿತ್ತು. ಇದೀಗ ಮಳೆಯಾಗಿರುವುದರಿಂದ ಬಹುತೇಕ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿಯನ್ನು ಹೆಚ್ಚಾಗಿ ಬಿತ್ತಲಿದ್ದಾರೆ ಎಂದು ಮಹಾಂತೇಶಪ್ಪ ಮಾಹಿತಿ ನೀಡಿದರು.

ಮಂಗಳವಾರವೂ ತೌತೆ ಪ್ರಭಾವ

ತೌತೆ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಮಂಗಳವಾರವೂ ಮುಂದುವರೆಯಲಿದೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ಮುನ್ಸೂಚನಾ ವಿಭಾಗ ತಿಳಿಸಿದೆ.

‘ಸಾಧಾರಣ, ಹೆಚ್ಚು ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಗಾಳಿಯ ವೇಗವೂ ಹೆಚ್ಚಿರಲಿದೆ. ಗುಡುಗು, ಮಿಂಚು, ಸಿಡಿಲು ಯಾವಾಗ ಬೇಕಾದರೂ ಅಬ್ಬರಿಸಬಹುದು. ಆದ್ದರಿಂದ ರೈತರು ಹವಾಮಾನ ಮುನ್ಸೂಚನೆ ಗಮನಿಸಿ ಕೃಷಿ ಚಟುವಟಿಕೆ ನಡೆಸುವುದು ಒಳ್ಳೆಯದು’ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.

ಮುಂದಿನ ಐದು ದಿನದ ಹವಾಮಾನ ಮುನ್ಸೂಚನೆ ಮಂಗಳವಾರ ಪ್ರಕಟಗೊಳ್ಳಲಿದೆ.

ಮೈಸೂರು ಜಿಲ್ಲೆಯ ಕೃಷಿ ಚಿತ್ರಣ

3,95,774:ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆಯ ಗುರಿ

54,205:ಹೆಕ್ಟೇರ್‌ನಲ್ಲಿ ಇದೂವರೆಗಿನ ಬಿತ್ತನೆ

7,635:ಹೆಕ್ಟೇರ್‌ನಲ್ಲಿ ಹೈಬ್ರಿಡ್‌ ಜೋಳ, ಮುಸುಕಿನ ಜೋಳ, ರಾಗಿ ಬಿತ್ತನೆ

18,950:ಹೆಕ್ಟೇರ್‌ನಲ್ಲಿ ಹೆಸರು, ಉದ್ದು, ಅಲಸಂದೆ ಬಿತ್ತನೆ

2621:ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ನೆಲಗಡಲೆ, ಎಳ್ಳು ಬಿತ್ತನೆ

12 ಸಾವಿರ: ಹೆಕ್ಟೇರ್‌ನಲ್ಲಿ ತಂಬಾಕು ಸಸಿ ನಾಟಿ

11 ಸಾವಿರ:ಹೆಕ್ಟೇರ್‌ನಲ್ಲಿ ಹತ್ತಿ

2 ಸಾವಿರ:ಹೆಕ್ಟೇರ್‌ನಲ್ಲಿ ಕಬ್ಬು ನಾಟಿ, ಕೂಳೆ

ಆಧಾರ: ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT