ಶುಕ್ರವಾರ, ಅಕ್ಟೋಬರ್ 23, 2020
21 °C
ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ

ನಂಜನಗೂಡಿನಲ್ಲಿರುವ ಪುರಾತನ ರೈಲ್ವೆ ಸೇತುವೆ ಸಂರಕ್ಷಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಂಜನಗೂಡಿನಲ್ಲಿರುವ ಪುರಾತನ ರೈಲ್ವೆ ಸೇತುವೆಯನ್ನು ಪಾರಂಪರಿಕ ತಾಣವಾಗಿ ಸಂರಕ್ಷಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗ ಯೋಜನೆ ರೂಪಿಸಿದೆ.

ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಅವರು ಇತ್ತೀಚೆಗೆ ಈ ಸೇತುವೆಯ ಪರಿಶೀಲನೆ ನಡೆಸಿದರು. ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಸಾಧಕಬಾಧಕಗಳ ಬಗ್ಗೆ ಅಧಿಕಾರಿಗಳು, ಎಂಜಿನಿಯರ್‌ಗಳ ಜತೆ ಚರ್ಚೆ ನಡೆಸಿದರು.

ಗತವೈಭವವನ್ನು ಸಾರುವ ಈ ಸೇತುವೆಯನ್ನು ಮುಂದಿನ ತಲೆಮಾರಿನ ಜನರಿಗಾಗಿ ಸಂರಕ್ಷಿಸಿಡಲು ವಿಸ್ತೃತ ಯೋಜನಾ ವರದಿಯೊಂದನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.

ಪಾರಂಪರಿಕ ಶೈಲಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಸೇತುವೆಯ ನವೀಕರಣ, ಮಾಹಿತಿ ಫಲಕ ಅಳ ವಡಿಕೆ, ರಾತ್ರಿ ವೇಳೆ ಕಂಗೊಳಿಸುವ ರೀತಿ ಯಲ್ಲಿ ವಿದ್ಯುತ್‌ ದೀಪಗಳ ಅಳವಡಿಕೆ ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಭಾರತೀಯ ರೈಲ್ವೆಯು ಪುರಾತನ ಕಟ್ಟಡ, ಸೇತುವೆ, ಇತರ ತಾಣಗಳನ್ನು ಸಂರಕ್ಷಿಸಲು ವಿಶೇಷ ಆಸಕ್ತಿ ವಹಿಸುತ್ತಿದೆ. ಅದೇ ರೀತಿ ಈ ಸೇತುವೆಯನ್ನು ಕೂಡಾ ಸಂರಕ್ಷಿಸಲು ಮುಂದಾಗಿದೆ ಎಂದು ಅಪರ್ಣಾ ಗರ್ಗ್‌ ತಿಳಿಸಿದರು.

ಈ ಕುರಿತ ಪ್ರಸ್ತಾವವನ್ನು ನೈರುತ್ಯ ರೈಲ್ವೆ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು. ಅನುಮತಿ ಲಭಿಸಿದ ಕೂಡಲೇ ನವೀಕರಣ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ಈ ಸೇತುವೆಯನ್ನು ಸುಮಾರು 250 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ 300 ಮೀ. ಉದ್ದವಿದ್ದು, 2007 ರಲ್ಲಿ ಹೊಸ ಸೇತುವೆ ನಿರ್ಮಾಣವಾಗುವವರೆಗೂ ಬಳಕೆಯಲ್ಲಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.