ಭಾನುವಾರ, ಆಗಸ್ಟ್ 18, 2019
23 °C

ಭೋರ್ಗರೆಯುತ್ತಿರುವ ಕಬಿನಿ; ಪ್ರವಾಹದ ಎಚ್ಚರಿಕೆ

Published:
Updated:

ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 23 ಸಾವಿರ ಕ್ಯುಸೆಕ್‌ಗೂ ಹೆಚ್ಚಿದ್ದು ಅಧಿಕಾರಿಗಳು ಪ್ರವಾಹದ ಎಚ್ಚರಿಕೆ ನೀಡಿದ್ದಾರೆ. 

ಕ್ಷಣಕ್ಷಣಕ್ಕೂ ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಾದರೂ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಈ ಕುರಿತು ಬುಧವಾರ ಮಧ್ಯರಾತ್ರಿ ತುರ್ತು ಸಂದೇಶ ಕಳುಹಿಸಿರುವ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ನದಿ ದಂಡೆಯ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ. 

ಗುರುವಾರ ಬೆಳಿಗ್ಗೆ ನದಿಗೆ ಭಾರಿ ಪ್ರಮಾಣದಲ್ಲಿ ನೀರನ್ನು ಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ನಂಜನಗೂಡಿನ ಸ್ನಾನಘಟ್ಟ, ತಿ.ನರಸೀಪುರ, ಮುಡುಕುತೊರೆ ಕ್ಷೇತ್ರಗಳಲ್ಲಿ ಪ್ರವಾಹ ಭೀತಿ ಮೂಡಿದೆ.

ಕಬಿನಿಯಿಂದ ಭಾರಿ ಪ್ರಮಾಣದ ನೀರು ನದಿಗೆ:  ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ನದಿಗೆ 60 ಸಾವಿರ ಕ್ಯುಸೆಕ್ ನಷ್ಟು ನೀರನ್ನು ಬಿಡಲಾಗುತ್ತಿದೆ‌. ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕೇರಳದ ವೈನಾಡು ಭಾಗದಲ್ಲಿ ಅತಿ ಭಾರಿ ಮಳೆ ಸುರಿಯುತ್ತಿರುವುದು ಆತಂಕ ಸೃಷ್ಟಿಸಿದೆ. ಇದರಿಂದ ಸುತ್ತೂರು ಸಂಪರ್ಕಿಸುವ ಸೇತುವೆ ಸೇರಿದಂತೆ ಹಲವು ಸೇತುವೆಗಳು, ಗ್ರಾಮಗಳು ಜಲಾವೃತವಾಗುವ ಸಾಧ್ಯತೆ ಇದೆ. ಈಗಾಗಲೇ ಬಿದರಹಳ್ಳಿ ಸೇತುವೆ ಮುಳುಗಡೆಯಾಗಿದೆ. ನದಿಪಾತ್ರದ ಗದ್ದೆಗಳು ನೀರಿನಲ್ಲಿ ಮುಳುಗಿವೆ.

Post Comments (+)