ಭಾನುವಾರ, ಸೆಪ್ಟೆಂಬರ್ 20, 2020
23 °C
‌ಸಾಹಿತಿ ಪ್ರೊ.ಮಳಲಿ ವಸಂತಕುಮಾರ್‌ ವಿಶ್ಲೇಷಣೆ

ಕೀರ್ತಿಯನ್ನು ಶನಿಯೆಂದಿದ್ದ ಕಾರ್ನಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಗಿರೀಶ ಕಾರ್ನಾಡರು ಎಂದೂ ಕೀರ್ತಿಯ ಹಿಂದೆ ಹೋದವರಲ್ಲ; ಅವರು ಕೀರ್ತಿಯನ್ನು ಶನಿಯೆಂದು ಕರೆದಿದ್ದರು ಎಂದು ಸಾಹಿತಿ ಪ್ರೊ.ಮಳಲಿ ವಸಂತಕುಮಾರ್ ವಿಶ್ಲೇಷಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಗಿರೀಶ ಕಾರ್ನಾಡ ನುಡಿ – ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ನಾಡರಿಗೆ ಮಾಲೆ ಮಾಲೆಯಾಗಿ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದವು ನಿಜ. ಆದರೆ, ಅವರೆಂದೂ ಪ್ರಶಸ್ತಿಗಳನ್ನು ಅರಸಿ ಹೋದವರಲ್ಲ. ಪ್ರಸಿದ್ಧಿಗಾಗಿ ತುಡಿದವರಲ್ಲ. ಕೀರ್ತಿಯೆಂದರೆ ಅವರು ದೂರವೇ ಇರುತ್ತಿದ್ದರು. ಕೀರ್ತಿ ಶನಿಯಿದ್ದ ಹಾಗೆ. ಅದು ನಮ್ಮನ್ನು ಹಾಳು ಮಾಡುತ್ತದೆ ಎಂದು ಅವರು ಬಲವಾಗಿ ನಂಬಿದ್ದರು. ಪ್ರಚಾರಕ್ಕಾಗಿ ಆಸೆ ಪಡದೆ ಪ್ರಾಮಾಣಿಕವಾಗಿ ತಮ್ಮ ನಂಬಿಕೆಗಳನ್ನು ಜಾರಿಗೊಳಿಸಿದ್ದರು ಎಂದು ಅವರು ವಿವರಿಸಿದರು.

ಹುಟ್ಟುತ್ತಲೇ ಕ್ರಾಂತಿಕಾರಿ ಕಾರ್ನಾಡರು. ಅಸಾಧಾರಣ ವಿಚಾರ ವಿಶ್ಲೇಷಣೆಯನ್ನು ಅವರು ಹೊಂದಿದ್ದರು. ಜನರ ಸಮಸ್ಯೆಗಳನ್ನು, ಸಮಾಜದ ನ್ಯೂನತೆಗಳನ್ನು ಗುರುತಿಸಿ ಅವಕ್ಕೆ ಬಲು ಗಟ್ಟಿಯಾದ ಉತ್ತರವನ್ನು ನೀಡುತ್ತಿದ್ದರು. ಅವರ ಫಲವಾಗಿಯೇ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆಯಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ‍ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ, ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಕಾರ್ನಾಡರು, ಸಾಮಾಜಿಕ ಪ್ರಜ್ಞೆಯನ್ನು ಹೊಂದಿದ್ದರು. ಬಡತನದ ಬಗ್ಗೆ, ಜಾತಿ ಪದ್ಧತಿಯ ಬಗ್ಗೆ ಕಳಕಳಿಯನ್ನು ಹೊಂದಿದ್ದರು. ಬುದ್ಧಿ – ಭಾವಗಳ ಅಪರೂಪದ ಸಂಗಮ ಅವರು. ಎಲ್ಲ ಕ್ಷೇತ್ರಗಳಲ್ಲೂ ಅವರ ಕೊಡುಗೆ ಅಪಾರವಾದುದು ಎಂದು ಅವರು ಹೇಳಿದರು.

ವಿಚಾರ ಕಿಡಿ: ರಂಗಕರ್ಮಿ ಎಚ್‌.ಜನಾರ್ದನ ಮಾತನಾಡಿ, ‘ಗಿರೀಶ ಕಾರ್ನಾಡರ ವಿರುದ್ಧ ಕೋಮುವಾದಿಗಳ ಗಲಾಟೆ ಮುಂಚೆಯಿಂದಲೂ ಇತ್ತು. ಅವರು ಟಿಪ್ಪುವಿನ ಬಗ್ಗೆ ನಾಟಕ ರಚಿಸಿದಾಗ ಕೋಮುವಾದಿಗಳು ಕಾರ್ನಾಡರನ್ನೂ ದೇಶದ್ರೋಹಿ ಎಂದು ಟೀಕಿಸಿದರು. ‘ಟಿಪ್ಪುವನ್ನು ಕುರಿತು ಕೃತಿ ರಚಿಸಿದರೆ ನಾನು ದೇಶದ್ರೋಹಿ ಆಗುತ್ತೇನೆ ಎಂದು ನೀವು ಕರೆದರೆ ನನ್ನದೇನೂ ಆಕ್ಷೇಪವಿಲ್ಲ’ ಎಂದು ಕಾರ್ನಾಡರು ಪ್ರತ್ಯುತ್ತರ ನೀಡಿದ್ದರು ಎಂದು ಸ್ಮರಿಸಿದರು.

‘ನಟ, ನಿರ್ಮಾಪಕ, ಸಂಘಟಕರಾಗಿ ಅವರು ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲದೇ ಅವರು ಜನಪರ ಹಾಗೂ ಮಹಿಳಾಪರ ಆಲೋಚಕ. ಇವರ ಅಭ್ಯುದಯದಲ್ಲಿ ಸಮಾಜದ ಪ್ರಗತಿಯಿದೆ ಎಂದು ನಂಬಿದ್ದರು. ಆದರೆ, ಅವರು ಎಂದೂ ಚಳವಳಿಗಳ ಮುಂದಿನ ಸಾಲಿನಲ್ಲಿ ನಿಲ್ಲುತ್ತಿರಲಿಲ್ಲ. ಎಲೆಮರೆಕಾಯಿಯಂತೆ ಮಾನವಪರವಾದ ಹೋರಾಟಗಳಲ್ಲಿ ಭಾಗಿಯಾಗಿದ್ದರು’ ಎಂದು ವಿಶ್ಲೇಷಿಸಿದರು.

ರಂಗಾಯಣದ ನಿರ್ದೇಶಕಿ ಭಾಗೀರಥಿಬಾಯಿ ಕದಂ ಮಾತನಾಡಿ, ‘ನಾವು ರಂಗಭೂಮಿಯ ಪಿತಾಮಹನನ್ನು ಕಳೆದುಕೊಂಡಿದ್ದೇವೆ. ಅವರ ಶಿಸ್ತು– ಸಂಯಮವನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಬಿ.ವಿ.ಕಾರಂತ ಹಾಗೂ ಕಾರ್ನಾಡರು ಒಟ್ಟಾಗಿ ನಿಂತು ಕಲಾವಿದರ ಬಳಗವನ್ನು ಗಟ್ಟಿಗೊಳಿಸಿದರು’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ‘ಕಾರ್ನಾಡರು ಎಂದಿಗೂ ಅವರ ಬರಹಗಳ ಮೂಲಕ ಜೀವಂತವಾಗಿದ್ದಾರೆ. ಅವರ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಅವರನ್ನು ಬಿಟ್ಟು ಸಾಹಿತ್ಯಲೋಕ ಬದುಕಲಾರದು’ ಎಂದು ಹೇಳಿದರು.

ರಂಗಕರ್ಮಿ ರಾಜಶೇಖರ ಕದಂಬ, ಸಾಹಿತಿ ಹಿರಿಮರಳಿ ಧರ್ಮರಾಜು, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಭಾಗವಹಿಸಿದ್ದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು