ಸೋಮವಾರ, ಜನವರಿ 24, 2022
25 °C

ಮೈಸೂರು: ಭಾರತೀಯ ಸೇನೆಯಲ್ಲಿ ಕನ್ನಡಿಗ ಕ್ಯಾಪ್ಟನ್ ಸತೀಶ್

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭಾರತೀಯ ರಕ್ಷಣಾ ಇಲಾಖೆಯ ಅಧಿಕಾರಿಯಾಗಿರುವ ಕ್ಯಾಪ್ಟನ್‌ ಸತೀಶ್‌ ಡಿ. ಕನ್ನಡ ಮಾಧ್ಯಮದಲ್ಲಿಯೇ ಓದಿದವರು. ಯುಪಿಎಸ್‌ಸಿ – ಕಂಬೈನ್ಡ್‌ ಡಿಫೆನ್ಸ್‌ ಸರ್ವಿಸ್‌ (ಸಿಡಿಎಸ್‌) ಪ್ರವೇಶ ಪರೀಕ್ಷೆಯನ್ನು ಪ್ರಥಮ ರ‍್ಯಾಂಕ್‌ನಲ್ಲಿ ಉತ್ತೀರ್ಣರಾದವರು!

ಸೇನೆಗೆ ಸೇರುವುದು ಸತೀಶ್‌ ಚಿಕ್ಕಂದಿನ ಕನಸು. ಕನ್ನಡ, ಇಂಗ್ಲಿಷ್‌ ಸಾಹಿತ್ಯ ಕೃತಿಗಳ ಮೇಲೂ ಒಲವಿತ್ತು. ಹೀಗಾಗಿಯೇ ಬಿ.ಎ, ಎಂ.ಎ ಹಾಗೂ ಎಂ.ಫಿಲ್‌ ಪದವಿಗಳನ್ನು ಇಂಗ್ಲಿಷ್‌ ಸಾಹಿತ್ಯದಲ್ಲಿ ಪಡೆದರು. ಕನ್ನಡ ವಿಮರ್ಶಾ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಹಂಬಲವಿತ್ತು. ಆದರೆ, 2008ರ ನ.26ರ ಮುಂಬೈ ದಾಳಿಯಲ್ಲಿ ಮೇಜರ್‌ ಉನ್ನಿಕೃಷ್ಣನ್‌ ಹುತಾತ್ಮರಾದ ಘಟನೆ ಅವರ ಬದುಕನ್ನೇ ಬದಲಿಸಿತು. 

ಸಹೋದರ ಹರೀಶ್‌ ಡಿ. ಸೇನಾ ಯೋಧರಾಗಿ ಸೇರಿದ್ದರು. ಸಿಡಿಎಸ್‌ ಪರೀಕ್ಷೆ ಪಾಸು ಮಾಡಲು ಸ್ಫೂರ್ತಿ ತುಂಬಿದರು. ತಯಾರಿ ಅಲ್ಲಿಂದಲೇ ಆರಂಭವಾಯಿತು.

ತುಮಕೂರಿನ ಕುಣಿಗಲ್ ತಾಲ್ಲೂಕಿನ ನಿಡುಸಾಲೆ ಗ್ರಾಮದವರಾದ ಸತೀಶ್‌, ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ಓದುವಾಗ ಎನ್‌ಸಿಸಿ ಸೇರಿದರು. ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್‌ ಎಂಎ. ಪದವಿ ಪ‍ಡೆದರು. ಸಿಡಿಎಸ್‌ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಇಂಗ್ಲಿಷ್‌ ಕಡ್ಡಾಯವಾದ್ದರಿಂದ, ಸಾಹಿತ್ಯ ಓದು ಅವರಿಗೆ ಪೂರಕವಾಯಿತು. 2014ರಲ್ಲಿ ಎನ್‌ಡಿಎ ಪ‍ರೀಕ್ಷೆಯನ್ನು ಪ್ರಥಮ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿ 2015ರಲ್ಲಿ ಡೆಹ್ರಾಡೂನ್‌ನ ‘ಭಾರತೀಯ ಸೇನಾ ಅಕಾಡೆಮಿ’ಯಲ್ಲಿ (ಐಎಂಎ) ತರಬೇತಿ ಪಡೆದರು.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭಯೋತ್ಪಾದನ ನಿಗ್ರಹ ದಳದಲ್ಲಿ ಲೆಫ್ಟಿನೆಂಟ್‌ ಅಧಿಕಾರಿ, ಅಮೃತಸರದ ಸೇನಾ ತರಬೇತಿ ಶಾಲೆಯಲ್ಲಿದ್ದಾಗ ಕ್ಯಾಪ್ಟನ್‌ ಆಗಿ ಬಡ್ತಿ ಪಡೆದರು. ಚಂಡೀಗಡ, ಬೋದ್‌ಗಯಾ ನಂತರ ಇದೀಗ ಬೆಂಗಳೂರಿನಲ್ಲಿ ವಿಶೇಷ ರಕ್ಷಣಾ ಅಧಿಕಾರಿಯಾಗಿದ್ದು, ಮೇಜರ್‌ ಆಗಿ ಇನ್ನೊಂದು ತಿಂಗಳಲ್ಲಿ ಬಡ್ತಿ ಹೊಂದಲಿದ್ದಾರೆ.

‌‘ಕನ್ನಡ ಮಾಧ್ಯಮದಲ್ಲಿ ಓದಿದವರೂ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು. ಜಗತ್ತಿನ ಯಾವುದೇ ಭಾಷೆ ಕಲಿಯಲು ಮಾತೃಭಾಷೆಯೇ ಮಾಧ್ಯಮ. ಕನ್ನಡದಿಂದಲೇ ಇಂಗ್ಲಿಷ್‌, ಹಿಂದಿ ಕಲಿತಿದ್ದೇನೆ’ ಎಂದು ಸತೀಶ್‌ ಹೇಳಿದರು.

‘ಸೇನಾ ಪರೀಕ್ಷೆಗೆ ಹಿಂದಿ ಹಾಗೂ ಇಂಗ್ಲಿಷ್‌ ಬೇಕು. ಆದರೆ, ಆ ಭಾಷೆಗಳಲ್ಲಿ ನುರಿತವರಾಗಬೇಕು ಎಂಬುದೇನಿಲ್ಲ. ಕನ್ನಡದ ಗ್ರಹಿಕೆಯನ್ನು ಅಭಿವ್ಯಕ್ತಿಸುವ ಕಲೆ ಬೇಕಷ್ಟೆ. ಪೋಷಕರ ಕಷ್ಟಗಳು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ರುದ್ರಪ್ಪ, ರಮೇಶ್‌ ನರಸಯ್ಯ, ಐಎಎಸ್‌ ಅಧಿಕಾರಿ ಕೆಂಪಹೊನ್ನಯ್ಯ, ಕನ್ನಡ ಪ್ರಾಧ್ಯಾಪಕರಾದ ಶಂಕರೇಗೌಡ ಅವರ ಸ್ಫೂರ್ತಿ ಮಾತುಗಳು ದಾರಿ ತೋರಿವೆ’ ಎಂದರು.

ಯುಪಿಎಸ್‌ಸಿ–ಎನ್‌ಡಿಎ, ಸಿಡಿಎಸ್‌ ಪರೀಕ್ಷೆಗೆ ತಯಾರಿ ನಡೆಸುವ ಬಗೆ ಕುರಿತು ಕನ್ನಡದಲ್ಲಿ ಪುಸ್ತಕ ಬರೆದಿದ್ದು, ಮುಂದಿನ ವರ್ಷದಲ್ಲಿ ಬಿಡುಗಡೆ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು