ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅವಾಂತರ: ಮೈಸೂರು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ

Last Updated 26 ಅಕ್ಟೋಬರ್ 2021, 8:23 IST
ಅಕ್ಷರ ಗಾತ್ರ

ಮೈಸೂರು: ಮಳೆಯಿಂದ ನಗರದಲ್ಲಿ ರಸ್ತೆಗಳು ಹೊಳೆಯಂತಾಗಿವೆ.. ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದಾರೆ... ಅಜೀಜ್ ಸೇಠ್ ರಸ್ತೆ ದುರಸ್ತಿಗೊಳಿಸುವುದು ಯಾವಾಗ…

ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮೇಯರ್ ಸುನಂದಾ ಫಾಲನೇತ್ರ ಅವರಿಗೆ ಸದಸ್ಯರಿಂದ ತೂರಿ ಬಂದ ಪ್ರಶ್ನೆಗಳಿವು.

ಪಾಲಿಕೆ ಸದಸ್ಯರಾದ ಅಯಾಜ್ ಪಾಷ ಮಾತನಾಡಿ, ‘ನಗರಕ್ಕೆ ಏಳು ಮುಖ್ಯ ರಸ್ತೆಗಳು ಸಂಪರ್ಕಿಸುತ್ತವೆ. 6 ರಸ್ತೆಗಳು ಸುಸ್ಥಿತಿಯಲ್ಲಿದ್ದರೆ, ಅಜೀಜ್ ಸೇಠ್ ರಸ್ತೆ ಮಾತ್ರ ಮಳೆ ಬಂದರೆ ಹೊಳೆಯಂತಾಗುತ್ತದೆ. ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿವೆ. ನಿನ್ನೆ ನಡೆದ ಅಪಘಾತದಲ್ಲಿ ಮಗುವೊಂದರ ಕೈ ಮುರಿದು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೂಡಲೇ ಅಧಿಕಾರಿಗಳು ಗಮನಿಸಬೇಕು. ರಸ್ತೆಯನ್ನು ದುರಸ್ತಿಗೊಳಿಸಬೇಕು’ ಎಂದರು.

ಇದಕ್ಕೆ ದನಿಗೂಡಿಸಿದ ಸದಸ್ಯ ಸಮೀವುಲ್ಲಾ 'ನಗರದ ಅರ್ಧಭಾಗದ ಮಳೆ ನೀರು ಸುಭಾಷ್ ನಗರದ ರಾಜಕಾಲುವೆಗೆ ಸೇರುತ್ತದೆ. ಇದರಿಂದ ಮನೆಗಳಿಗೆ ನೀರು ನುಗ್ಗುತ್ತಿದೆ. ಜನರು ನಿದ್ದೆ ಮಾಡಿ ಎಂಟು ದಿನವಾಯ್ತು. ಶಾಶ್ವತ ಪರಿಹಾರ ಕ್ರಮ ಜರುಗಿಸಬೇಕು' ಎಂದು ಆಗ್ರಹಿಸಿದ ಅವರು, ಪ್ರಶ್ನೆ ಗೆ ಉತ್ತರ ನೀಡುವವರೆಗೆ ನಾನೂ ಸಭೆಯಲ್ಲಿ ಕೂರುವುದಿಲ್ಲ ಎಂದರು.

10 ನಿಮಿಷ ಸಭೆ ಮುಂದೂಡಿಕೆ: ‘ಮೇಯರ್ ಅವರು ಕೋಪಗೊಳ್ಳಬಾರದು. ತಾಳ್ಮೆಯಿಂದ ವರ್ತಿಸಬೇಕು. ಸಹ ಸದಸ್ಯರ ಪ್ರಶ್ನೆಗೆ ಉತ್ತರ ಕೊಡಬೇಕು’ ಎಂದು ಜೆಡಿಎಸ್ ಸದಸ್ಯ ಎಸ್.ಬಿ.ಎಂ.ಮಂಜು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ‘ವೈಯಕ್ತಿಕ ದಾಳಿ ಮಾಡಿದರೆ ಹೊರಗೆ ಹೋಗುತ್ತೇನೆ’ ಎಂದರು. ಇದರಿಂದ ಕೋಪಗೊಂಡ ಜೆಡಿಎಸ್ ಸದಸ್ಯರಾದ ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತ್ ಸಭೆಯಿಂದ ಹೊರನಡೆಯಲು ಮುಂದಾದರು. ಇವರನ್ನು ಆಡಳಿತ ಪಕ್ಷ ಬಿಜೆಪಿ ಸದಸ್ಯರು ಸಮಾಧಾನಿಸಲು ಯತ್ನಿಸಿದರು. ಸಭೆಯಲ್ಲಿ ಗದ್ದಲ ಉಂಟಾದ್ದರಿಂದ ಮೇಯರ್ 10 ನಿಮಿಷ ಸಭೆಯನ್ನು ಮುಂದೂಡಿದರು.

ಶಿಷ್ಟಾಚಾರ ಉಲ್ಲಂಘನೆಗೆ ಕ್ರಮವಹಿಸಲು ಪತ್ರ: ದಸರೆಯ ಸಂದರ್ಭದಲ್ಲಿ ಮೇಯರ್ ಅವರನ್ನು ಅಧಿಕಾರಿಗಳು ಸರಿಯಾಗಿ ನಡೆಸಿಕೊಂಡಿಲ್ಲ. ಅರಮನೆ ವೇದಿಕೆ ಕಾರ್ಯಕ್ರಮದಲ್ಲಿ ಆಸನ ಕಾಯ್ದಿರಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದರು. ಈ ಕುರಿತು ಪಾಲಿಕೆಯ ಸರ್ವ ಸದಸ್ಯರು ಧ್ವನಿ ಎತ್ತಿದರು.

ಶಿಷ್ಟಾಚಾರ ಉಲ್ಲಂಘನೆ ಆಗಿರುವ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಮೇಯರ್ ಅವರು ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಅವರಿಗೆ ಸೂಚಿಸಿದರು.

ಉಪಮೇಯರ್ ಅನ್ವರ್ ಬೇಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT