ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನನಿಗೂ, ಅಭಿಮನ್ಯುವಿಗೂ ಕಾವೇರಿ ಸಾಥ್‌

ಕುಮ್ಕಿ ಆನೆಯಾಗಿ ಜಂಬೂಸವಾರಿ ಯಶಸ್ಸಿನಲ್ಲಿ ಮಹತ್ವದ ಪಾತ್ರ
Last Updated 28 ಅಕ್ಟೋಬರ್ 2020, 5:05 IST
ಅಕ್ಷರ ಗಾತ್ರ

ಮೈಸೂರು: ದಸರಾ ಜಂಬೂಸವಾರಿಯಲ್ಲಿ ಹಿಂದೆ ಅರ್ಜುನ, ಈ ಬಾರಿ ಅಭಿಮನ್ಯು ಆನೆ ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗುವಲ್ಲಿ ‘ಕಾವೇರಿ’ ಆನೆಯ ಪಾತ್ರ ಮಹತ್ವದ್ದಾಗಿದೆ.

ವಿಜಯದಶಮಿ ಮೆರವಣಿಗೆಯಲ್ಲಿ ಏಳೆಂಟು ವರ್ಷಗಳಿಂದ ಕುಮ್ಕಿ ಆನೆಯಾಗಿ ಕಾರ್ಯನಿರ್ವಹಿಸುತ್ತಿರುವ 42 ವರ್ಷದ ಈ ಹೆಣ್ಣಾನೆ, ದಸರೆಯ ವಿಶೇಷ ಆಕರ್ಷಣೆ ಕೂಡ. ಮೆರವಣಿಗೆ ಸರಾಗವಾಗಿ ಸಾಗುವಲ್ಲಿ ಈ ಆನೆಯ ಕೊಡುಗೆಯೂ ಇದೆ.

ಈ ಹೆಣ್ಣಾನೆ ಪಕ್ಕದಲ್ಲಿದ್ದರೆ ಅಂಬಾರಿ ಹೊರುವ ಆನೆಗಳಿಗೆ ಭರವಸೆ, ಜೊತೆಗೆ ಧೈರ್ಯ ಹೆಚ್ಚುತ್ತದೆ ಎಂದು ಹೇಳುತ್ತಾರೆ ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು.

‘ಕಾವೇರಿ ಆನೆಯು ಯಾವುದಕ್ಕೂ ಗಾಬರಿ ಆಗುವುದಿಲ್ಲ. ಸಿಡಿಮದ್ದಿನ ಸದ್ದಿಗೂ ಬೆದರುವುದಿಲ್ಲ. ಎಷ್ಟೇ ಜನರು ಸೇರಿದ್ದರೂ ಶಾಂತವಾಗಿ, ಸಹನೆಯಿಂದ ಹೆಜ್ಜೆ ಇಡುತ್ತದೆ. ಇದರಿಂದ ಪಕ್ಕದ ಆನೆಗಳು ನಿಯಂತ್ರಣಕ್ಕೆ ಬರುತ್ತವೆ. ಗಲಾಟೆ ಮಾಡದೆಶಾಂತಿಯುತ ವಾಗಿ ಸಾಗುತ್ತವೆ. ಹೀಗಾಗಿ, ಈ ಆನೆಯನ್ನು ಹಲವಾರು ವರ್ಷಗಳಿಂದ ಕುಮ್ಕಿ ಆನೆಯಾಗಿ ಬಳಸಲಾ ಗುತ್ತಿದೆ. ಅದರಲ್ಲೂ ಈ ಆನೆ ಕಂಡರೆ ಅರ್ಜುನನಿಗೆ ಅಚ್ಚುಮೆಚ್ಚು’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2009ರಲ್ಲಿ ಸೋಮ ವಾರಪೇಟೆ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು. ಸುಮಾರು 3,200 ಕೆ.ಜಿ ತೂಕವಿದೆ. 2012ರಿಂದಲೂ ಜಂಬೂ ಸವಾರಿಯಲ್ಲಿ ಸತತವಾಗಿ ಪಾಲ್ಗೊಳ್ಳುತ್ತಿದೆ. ಮೊದಲ ವರ್ಷ ಸಾಲಾನೆಯಾಗಿ ಪಾಲ್ಗೊಂಡಿತ್ತು. ಆನಂತರ ಅರ್ಜುನನಿಗೆ ಸಾಥ್‌ ನೀಡಿತು. ದುಬಾರೆ ಶಿಬಿರದ ಆ ಆನೆಯ ಮಾವುತ ಜೆ.ಕೆ.ದೋಬಿ, ಕಾವಾಡಿ ಜೆ.ಎ.ರಂಜನ್‌.

‘ಅಂಬಾರಿ ಹೊತ್ತ ಆನೆಗೆ ತಾನು ಒಂಟಿ ಎಂಬ ಭಾವನೆ ಬರಬಾರದೆಂದು ಕೂಡ ಇಕ್ಕೆಲಗಳಲ್ಲಿ ಹೆಣ್ಣಾನೆ ನಿಲ್ಲಿಸಲಾಗುತ್ತದೆ. ಜೊತೆಗೆ ಹೆಣ್ಣಾನೆ ಪಕ್ಕದಲ್ಲಿದ್ದರೆ ಗಂಡಾನೆಯ ನಿಯಂತ್ರಣ ಕೂಡ ಸುಲಭವಾಗುತ್ತದೆ’ ಎಂದು ಡಾ.ನಾಗರಾಜು ನುಡಿಯುತ್ತಾರೆ.

ಕುಮ್ಕಿ ಆನೆ ಎಂದರೇನು?

ಜಂಬೂಸವಾರಿಯಲ್ಲಿ ಭಾಗವಹಿಸುವ ಹೆಣ್ಣಾನೆಗಳಿಗೆ ಕುಮ್ಕಿ ಎನ್ನುತ್ತಾರೆ. ಅಂಬಾರಿ ಹೊತ್ತ ಆನೆಯ ಇಕ್ಕೆಲಗಳಲ್ಲಿ ಈ ಆನೆಗಳು ಹೆಜ್ಜೆ ಹಾಕುತ್ತವೆ.

ಈ ಬಾರಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯುವಿನ ಅಕ್ಕಪಕ್ಕದಲ್ಲಿ ಕಾವೇರಿ ಹಾಗೂ ವಿಜಯಾ ಆನೆ ಸಾಗಿದವು. ಈ ಹಿಂದಿನ ದಸರಾ ಮಹೋತ್ಸವಗಳಲ್ಲಿಸರಳಾ, ಕೋಕಿಲಾ, ವರಲಕ್ಷ್ಮಿ, ಮೇರಿ, ದುರ್ಗಾ ಪರಮೇಶ್ವರಿ, ಚೈತ್ರಾ ಕುಮ್ಕಿ ಆನೆಗಳಾಗಿ ಪಾಲ್ಗೊಂಡಿದ್ದವು. ಕಾವೇರಿ ಹಾಗೂ ವಿಜಯಾ ಆನೆ ಕಳೆದ ಬಾರಿ ಅರ್ಜುನ ಆನೆಗೂ ಕುಮ್ಕಿ ಆಗಿ ಕಾರ್ಯ ನಿರ್ವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT