ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಟಿ.ದೇವೇಗೌಡ ವಿರುದ್ಧ ಭುಗಿಲೆದ್ದ ಆಕ್ರೋಶ; ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯ

Last Updated 28 ಫೆಬ್ರುವರಿ 2021, 4:48 IST
ಅಕ್ಷರ ಗಾತ್ರ

ಮೈಸೂರು: ಮೇಯರ್ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದ ಶಾಸಕ ಜಿ.ಟಿ.ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಂದೇಶ್‌ ನಾಗರಾಜ್ ವಿರುದ್ಧ ಜೆಡಿಎಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇವರನ್ನು ಪಕ್ಷದಿಂದ ಉಚ್ಛಾಟಿಸದೇ ಹೋದರೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆಯನ್ನು ಪಕ್ಷದ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಸೇರಿದಂತೆ ಹಲವು ಮುಖಂಡರು ಒಡ್ಡಿದ್ದಾರೆ.

ಒಂದು ಕಾಲದಲ್ಲಿ ಜಿ.ಟಿ.ದೇವೇಗೌಡ ಅವರ ಆಪ್ತರು ಎಂದೇ ಗುರುತಿಸಿಕೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ಹಾಗೂ ಬೆಳವಾಡಿ ಶಿವಮೂರ್ತಿ ಅವರೂ ಈ ಒತ್ತಡ ಹಾಕಿದ್ದಾರೆ.

ಈ ಕುರಿತು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು ಜಿ.ಟಿ.ದೇವೇಗೌಡ ವಿರುದ್ಧ ಕಿಡಿಕಾರಿದರು.

ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಮಾತನಾಡಿ, ‘ಬಿಜೆಪಿ ಪರ ಒಲವು ವ್ಯಕ್ತಪಡಿಸುವ ಮೂಲಕ ಜಿ.ಟಿ.ದೇವೇಗೌಡ ಊಟ ಮಾಡಿದ ಮನೆಗೆ ದ್ರೋಹ ಎಸಗಿದ್ದಾರೆ. ಇವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಗೆದ್ದು ಬರುವ ಮೂಲಕ ಸಾಮರ್ಥ್ಯ ಸಾಬೀತುಪಡಿಸಲಿ’ ಎಂದು ಸವಾಲೆಸೆದರು.

‘ಈ ಬಾರಿ ಮೇಯರ್ ಚುನಾವಣೆಯಲ್ಲಿ ಶಾಸಕ ಸಾ.ರಾ.ಮಹೇಶ್‌ ಅವರನ್ನೂ ಪಕ್ಕಕ್ಕಿಟ್ಟು ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ರಂಗಪ್ರವೇಶ ಮಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳಲಾಗಿತ್ತು. ಜೆಡಿಎಸ್‌ ಎಲ್ಲಿದೆ ಎಂದು ಕೇಳುವ ಕಾಂಗ್ರೆಸ್ಸಿಗರಿಗೆ ಈಗ ಕುಮಾರಸ್ವಾಮಿ ಜೆಡಿಎಸ್‌ ಸಾಮರ್ಥ್ಯ ತೋರಿಸಿದ್ದಾರೆ. ಕುಟುಂಬ ರಾಜಕಾರಣ ಮತ್ತು ಹಣವನ್ನಷ್ಟೇ ನಂಬಿರುವ ಜಿ.ಟಿ.ದೇವೇಗೌಡ ಅವರನ್ನು ಕಾಂಗ್ರೆಸ್ಸಾಗಲಿ, ಬಿಜೆಪಿಯಾಗಲಿ ಕರೆಯುವುದಿಲ್ಲ’ ಎಂದು ಹರಿಹಾಯ್ದರು.

ತಂದೆಯಂತೆ ಭಾವಿಸಿದ್ದೇ– ಮಾದೇಗೌಡ
‘ಜಿ.ಟಿ.ದೇವೇಗೌಡ ಅವರನ್ನು ತಂದೆಯಂತೆ ಭಾವಿಸಿದ್ದೆ. ಆದರೆ, ಅವರು ಮಗನ ಸಮಾನನಾದ ನನಗೆ ದ್ರೋಹ ಮಾಡಿದರು’‌ ಎಂದು ಮಾದೇಗೌಡ ಬೇಸರ ವ್ಯಕ್ತಪಡಿಸಿದರು.

‘ಮತ ಹಾಕಲು ಬರುತ್ತೇನೆ ಎಂದು ಭರವಸೆ ನೀಡಿದ್ದ ಅವರು ಕೊನೆ ಗಳಿಗೆಯಲ್ಲಿ ಕೈಕೊಟ್ಟರು’ ಎಂದು ದೂರಿದರು.

ಮರ್ಯಾದೆ ಇದ್ದರೆ ರಾಜೀನಾಮೆ ನೀಡಿ –ಬೆಳವಾಡಿ ಶಿವಮೂರ್ತಿ
ಜಿ.ಟಿ.ದೇವೇಗೌಡ ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬೆಳವಾಡಿ ಶಿವಮೂರ್ತಿ ಒತ್ತಾಯಿಸಿದರು.

ಮೇಯರ್ ಚುನಾವಣೆಯಲ್ಲಿ ಮತ ಹಾಕದ ಮೇಲೆ ಅವರು ಪಕ್ಷದಲ್ಲಿದ್ದಾರೆ ಎಂದು ನಾವು ಭಾವಿಸಿಲ್ಲ. ಚುನಾವಣೆಯಲ್ಲಿ ಅವರ ಗೆಲುವಿಗಾಗಿ ನಾನು ಹಣ ಖರ್ಚು ಮಾಡಿದ್ದೇನೆ ಎಂದು ಹರಿಹಾಯ್ದರು.

ಮಾಜಿ ಮೇಯರ್‌ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಮಾಜಿ ಉಪಮೇಯರ್ ಶೈಲೇಂದ್ರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT