ಸೋಮವಾರ, ಜನವರಿ 20, 2020
26 °C
ಎಲ್ಲೆಡೆ ಹಬ್ಬದ ಸಂಭ್ರಮ, ಉಚಿತ ಪ್ರವೇಶ, ಮಕ್ಕಳ ಕಲರವ

ಕಳೆಗಟ್ಟಿದ ಕಾರಂಜಿ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಹಸುರತ್ತಲ್! ಹಸುರಿತ್ತಲ್ ! ಹಸುರೆತ್ತಲ್ ಕಡಲಿನಲಿ, ಹಸುರ್ಗಟ್ಟಿತೊ ಕವಿಯಾತ್ಮಂ ಹಸುರ್ನೆತ್ತರ್ ಒಡಲಿನಲಿ!’  ಕವಿ ಕುವೆಂಪು ಅವರ ಸಾಲುಗಳು ಸೋಮವಾರ ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ಕಾರಂಜಿ ಕೆರೆಯಲ್ಲಿ ನಡೆದ ‘ಹಬ್ಬ’ದಲ್ಲಿ ನೆನಪಾಯಿತು.

ಹಸಿರನ್ನೇ ಹೊದ್ದುಕೊಂಡ ಕೆರೆಯಂಗಳದಲ್ಲಿ ಹಕ್ಕಿಗಳ ಕಲರವದ ಜತೆಗೆ ಚಿಣ್ಣರ ಕಲರವವೂ ಮಿಳಿತಗೊಂಡಿತ್ತು. ಚುರುಗುಟ್ಟುವ ಬಿಸಿಲಿಗೆ ಹಸಿರ ಚಪ್ಪರದ ಕೆಳಗೆ ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳು ನಡೆದವು. ಬಾಗಿಲಿನಲ್ಲೇ ಬೃಹತ್ ರಂಗವಲ್ಲಿ ಕಣ್ಮನ ಸೆಳೆಯುತಿತ್ತು.

ಈ ಎಲ್ಲ ದೃಶ್ಯಗಳು ಇಲ್ಲಿ ಸೋಮವಾರ ನಡೆದ ಕಾರಂಜಿಕೆರೆ ಹಬ್ಬದಲ್ಲಿ ಕಂಡು ಬಂತು.

ರಸಪ್ರಶ್ನೆ ಕಾರ್ಯಕ್ರಮ, ಚಿತ್ರಕಲಾ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳ 70ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆರೆಯಂಗಳದ ಅಲ್ಲಲ್ಲಿ ಪರಿಸರ ಜಾಗೃತಿಗೆ ಸಂಬಂಧಿಸಿದಂತೆ ಬೀದಿ ನಾಟಕಗಳು ನಡೆದವು.

ಪ್ರಾದೇಶಿಕ ನೈಸರ್ಗಿಕ ಇತಿಹಾಸ ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ ನಿರ್ದೇಶಕ ಇಂದ್ರೇಶ್‌ ಅವರು ಕವನ ವಾಚನ ಮಾಡುವ ಮೂಲಕ ಗಮನ ಸೆಳೆದರು.

‘ಕಾರಂಜಿ ಕೆರೆ ಹಬ್ಬ ಅತಿಶಯದ ಹಬ್ಬ’ ಎಂಬ ಅವರ ಕವನ ಗಮನ ಸೆಳೆಯಿತು. ಕಂಡಲ್ಲಿ ಕಸ ತೆಗೆದು ಕೆರೆಯನ್ನು ಸ್ವಚ್ಛವಾಗಿಡಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ‘ಕಾರಂಜಿ ಕೆರೆ ಉತ್ತಮ ಉದಾಹರಣೆಯಾಗಿದೆ. ಈ ರೀತಿ ಬೇರೆ ಕೆರೆಗಳನ್ನು ಅಭಿವೃದ್ಧಿಪ‍ಡಿಸಬೇಕು’ ಎಂದು ಕರೆ ನೀಡಿದರು.

‘ಬೆಂಗಳೂರಿಗೆ 120 ಕಿ.ಮೀ.ನಿಂದ ನೀರನ್ನು ಪಂಪ್‌ ಮಾಡುವ ಮೂಲಕ ನಾವು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಬದಲಿಗೆ, ಅಲ್ಲಿದ್ದ 600ರಿಂದ 800 ಕೆರೆಗಳನ್ನು ಉಳಿಸಿಕೊಂಡಿದ್ದರೆ, ಅಲ್ಲಿನ ಅಂತರ್ಜಲವೇ ನಮಗೆ ಸಾಕಾಗುತ್ತಿತ್ತು’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)