ಶುಕ್ರವಾರ, ಜೂನ್ 25, 2021
29 °C
ಬೋಗಾದಿ ಗ್ರಾಮ ಪಂಚಾಯಿತಿ ಮುತ್ತಿಗೆ ಹಾಕಿದ ಗ್ರಾಮಸ್ಥರು

ಕೆರೆ ಏರಿ ಒಡೆದವರ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೋಗಾದಿಯ ನಿಂಗರಾಜಯ್ಯನಕಟ್ಟೆ ಏರಿಯನ್ನು ಒಡೆದು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬೋಗಾದಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು

ಮೈಸೂರು: ಇಲ್ಲಿನ ಬೋಗಾದಿಯ ನಿಂಗರಾಜಯ್ಯನಕಟ್ಟೆ ಏರಿಯನ್ನು ಒಡೆದು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಬೋಗಾದಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೆರೆ ಏರಿ ಒಡೆದು ಒಳಚರಂಡಿ ಪೈಪ್‌ಲೈನ್‌ ಅನ್ನು ಸಮೀಪದ ಬಡಾವಣೆಗೆ ಹಾಕಲಾಗಿದೆ. ಇದು  ರಿಯಲ್ ಎಸ್ಟೇಟ್ ಉದ್ಯಮಿದಾರರ ಕೆಲಸ. ಇದರ ಹಿಂದೆ ಕೆರೆಯನ್ನೇ ಕಬಳಿಸುವ ಹುನ್ನಾರ ಅಡಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಕುರಿತು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇವರಿಗೂ ಏರಿ ಒಡೆದಿರುವುದು ಗೊತ್ತಾಗಿದೆ. ಹೀಗಿದ್ದರೂ, ತಹಶೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಭಾರಿ ಮಳೆ ಬಂದು ಕೆರೆ ಭರ್ತಿಯಾದರೆ ನೀರು ಬೋಗಾದಿ ಗ್ರಾಮಕ್ಕೆ ನುಗ್ಗುವ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಆಗಸ್ಟ್‌ 14ರಂದು ಗ್ರಾಮಸ್ಥರು ಬೋಗಾದಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡು, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಅರುಣ್‌ಕುಮಾರ್‌ ಗೌಡ, ಎಂ.ನಾಗರಾಜು, ಕೆಂಚೇಗೌಡ, ಸ್ವಾಮಿ, ಶಂಕರ್, ಪುಟ್ಟೇಗೌಡ, ವೆಂಕಟೇಶ್ ಇದ್ದರು.

ಮುಂದುವರಿದ ಅತಿಥಿ ಉಪನ್ಯಾಸಕರ ಪ್ರತಿಭಟನೆ

ಮೈಸೂರು: ಸೇವಾ ಭದ್ರತೆಗೆ ಒತ್ತಾಯಿಸಿ ಪ್ರತಿ ಮಂಗಳವಾರ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈ ಮಂಗಳವಾರ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರಿಗೆ ಸಾಮೂಹಿಕ ನಿವೃತ್ತಿ ಘೋಷಿಸಿರುವುದು ಸ್ವಲ್ಪವೂ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಹರಿಯಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲಾಗಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸುವ ಮೂಲಕ ಅತಿಥಿ ಉಪನ್ಯಾಸಕರ ಹಿತಕಾಯಬೇಕು ಎಂದು ಆಗ್ರಹಿಸಿದರು.

ಲಾಕ್‌ಡೌನ್‌ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಿ ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಹದೇವಯ್ಯ, ಉಪಾಧ್ಯಕ್ಷ ಡಾ.ಸುಮಿತ್ರಾ, ಡಾ.ಎನ್.ಮಹೇಶ್, ನಾಗಾರ್ಜುನ್, ಪ್ರಧಾನ ಕಾರ್ಯದರ್ಶಿ ಹನುಮಂತೇಶ್, ಡಾ.ಕೆ.ಪ್ರಕಾಶ್, ಡಾ.ಮಹೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು