ಮೈಸೂರು: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನಲ್ಲಿ ಕೇಂದ್ರ ಉದ್ಯೋಗ ಖಾತರಿ ಯೋಜನೆಯಡಿ ಈ ವರ್ಷ ಕೆರೆಗಳ ಜತೆಗೆ ಕಟ್ಟೆಗಳು ಹಾಗೂ ಹಳ್ಳಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಈ ಭಾಗದ ಬಹಳಷ್ಟು ಕಟ್ಟೆಗಳಲ್ಲೂ ಈಗ ಜೀವಂತಿಕೆ ಮೂಡಿದೆ.
ಕೆರೆಗಳ ಪುನಶ್ಚೇತನಕ್ಕಿಂತ ಕಟ್ಟೆ ಹಾಗೂ ಹಳ್ಳಗಳ ಪುನಶ್ಚೇತನ ತುಸು ಕಷ್ಟ. ಸಣ್ಣ ಕಟ್ಟೆ, ಹಳ್ಳಗಳಿಗೆ ನೀರು ಸೇರುವ ಜಲಮಾರ್ಗಗಳು ಬಹುತೇಕ ಮುಚ್ಚಿ ಹೋಗಿರುವುದರಿಂದ ಅವುಗಳನ್ನು ಗುರುತಿಸುವುದೇ ದೊಡ್ಡ ಸವಾಲಿನ ಕೆಲಸ. ಗುರುತಿಸಿದ ನಂತರ ಅವುಗಳ ಒತ್ತುವರಿಯನ್ನು ತೆರವುಗೊಳಿಸಿ ನೀರು ಹರಿಯುವಂತೆ ಮಾಡುವುದು ಮತ್ತೂ ಕಷ್ಟದ ಕೆಲಸ. ಈ ಸವಾಲಿನ ಕೆಲಸಕ್ಕೆ ಕೈ ಹಾಕಿದ ಜಿಲ್ಲಾ ಪಂಚಾಯಿತಿ ಯಶಸ್ಸು ಸಾಧಿಸಿದೆ.
ನಿರ್ವಹಣೆಯ ಕೊರತೆಯಿಂದ ಮೂಲಸ್ವರೂಪವನ್ನೇ ಕಳೆದುಕೊಂಡಿದ್ದ 34 ಗ್ರಾಮ ಪಂಚಾಯಿತಿಗಳ 77 ಕೆರೆ, ಕಟ್ಟೆಗಳನ್ನು ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ಆಯ್ಕೆ ಮಾಡಿಕೊಳ್ಳಲಾಯಿತು. ₹ 4.68 ಕೋಟಿಯಷ್ಟು ಹಣವನ್ನು ತೆಗೆದಿರಿಸಲಾಯಿತು. ಈವರೆಗೆ ₹ 16.02 ಲಕ್ಷವನ್ನು ವ್ಯಯಿಸಲಾಗಿದೆ. ಅದರ ಪರಿಣಾಮ ಇಂದು ಬಹುತೇಕ ಕೆರೆ, ಕಟ್ಟೆಗಳು ಪುನಶ್ಚೇತನಗೊಂಡು ನೀರಿನಿಂದ ತುಂಬಿ ತುಳುಕುತ್ತಿವೆ.
ಕೆರೆ, ಕಟ್ಟೆಯ ತುಂಬೆಲ್ಲ ಹೂಳು ತುಂಬಿಕೊಂಡು, ಏರಿಯ ಮೇಲೆಲ್ಲ ಗಿಡಗಂಟಿಗಳು ಬೆಳೆದು, ಬಟ್ಟೆ ತೊಳೆಯುವುದಕ್ಕೆ, ಜಾನುವಾರುಗಳಿಗೆ ನೀರು ಕುಡಿಸುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಮೊದಲಿತ್ತು. ಕೆರೆಯಲ್ಲಿ ನೀರೂ ತೀರಾ ಕಡಿಮೆ ಶೇಖರಣೆಯಾಗುತ್ತಿತ್ತು. ಮಳೆ ಬಂದು ಹೋದ ಕೆಲವೇ ದಿನಗಳಲ್ಲಿ ನೀರು ಹಿಂಗಿ ಹೋಗುತ್ತಿತ್ತು.
ಅಂತಹ ಕೆರೆಗಳಲ್ಲಿ ಹೂಳು ತೆಗೆಯಲಾಯಿತು. ಹೊಸದಾಗಿ ಕೆಲವೆಡೆ ಏರಿ ನಿರ್ಮಾಣ ಮಾಡಿದರೆ ಮತ್ತೆ ಕೆಲವು ಏರಿಗಳನ್ನು ಭದ್ರಪಡಿಸಲಾಯಿತು. ಸೋಪಾನಕಟ್ಟೆ, ರಿವಿಟ್‍ಮೆಂಟ್, ಕ್ಯಾಟಲ್ ರ‍್ಯಾಂಪ್, ಕೋಡಿ ನಿರ್ಮಾಣ, ಪೈಪ್ ಮತ್ತು ಡಕ್ ನಿರ್ಮಾಣ, ಏರಿಯ ಸುತ್ತಾ ಜೀವ ವೈವಿಧ್ಯದ ಪ್ರೋತ್ಸಾಹಕ ಸಸ್ಯಗಳನ್ನು ನೆಟ್ಟಿದ್ದು ವಿಶೇಷ.
ಈ ಕಾಮಗಾರಿಗಳಿಂದ 56,422 ಮಾನವ ದಿನಗಳಷ್ಟು ಕೆಲಸ ಗ್ರಾಮೀಣರಿಗೆ ಸಿಕ್ಕಿದೆ. ₹ 16.02 ಲಕ್ಷ ಕೂಲಿಯನ್ನು ವಿತರಿಸಲಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಕೂಲಿಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗಿದೆ.
ಮಳೆಗೆ ಕೆರೆಗಳು ಭರಪೂರ ಭರ್ತಿಯಾಗಿರುವುದರಿಂದ ಕೆರೆಗಳ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
’ಜಾನುವಾರುಗಳಿಗೆ ನೀರು ಕುಡಿಸಲು ಸಹ ಅನುಕೂಲವಾಗುವಂತೆ ಸೋಪಾನಕಟ್ಟೆಗಳನ್ನು ನಿರ್ಮಿಸಲಾಗಿದೆ. ಏರಿಯನ್ನು ಭದ್ರಪಡಿಸಿರುವುದರಿಂದ ಮತ್ತೆ ಒತ್ತುವರಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಕೆ.ಆರ್.ನಗರದ ರೈತ ನಿಂಗಪ್ಪ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.