ಶುಕ್ರವಾರ, ಜುಲೈ 30, 2021
24 °C
ಕಳವು ಮಾಲು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಲಾರಿ ದರೋಡೆ: ಆರು ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಲಾರಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿದ ನಗರದ ನರಸಿಂಹರಾಜ ಠಾಣೆಯ ಪೊಲೀಸರು, ಕಳವು ಮಾಲನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಶಾಂತಿನಗರದ ಮುದಾಸೀರ್ ಪಾಷ (33), ಮಹಮ್ಮದ್ ಹುಸೇನ್ (27), ಮಹಮ್ಮದ್ ಜವಾದ್ (31), ರಾಜೀವ್ ನಗರದ ಸಲ್ಮಾನ್ ಖಾನ್ (25), ಮಹಮ್ಮದ್ ಇರ್ಫಾನ್ ಪುಲ್ಚ (27), ತಮೀಮ್‌ವುಲ್ಲಾ ಷರೀಫ್ ನವಾಬ್ (31) ಬಂಧಿತರು. ಕಳವು ಮಾಲು ಸ್ವೀಕರಿಸಿದ್ದ ಮಂಡಿ ಮೊಹಲ್ಲಾದ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ₹ 10 ಲಕ್ಷ ಮೌಲ್ಯದ ಲಾರಿ, ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನ ಹಾಗೂ 5 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಬನ್ನಿಮಂಟಪ ಬಳಿಯ ಎಸ್‌.ಎಸ್‌.ನಗರದ ಸಾಯಿರಂಗ ವಿದ್ಯಾಸಂಸ್ಥೆ ಬಳಿ ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿ, ತಮ್ಮ ಸ್ಕೂಟರ್‌ ಹಿಂತಿರುಗಿಸಿಕೊಂಡು ಹೋಗುತ್ತಿದ್ದ ಮುದಾಸೀರ್ ಪಾಷ, ಸಲ್ಮಾನ್‌ ಖಾನ್‌ ಎಂಬುವರನ್ನು ಬೆನ್ನಟ್ಟಿದಾಗ, ಸ್ಕೂಟರ್‌ನ ಮುಂಬದಿ ಲಾರಿಯ ಬಿಡಿ ಭಾಗ ಕಂಡು ಬಂದಿವೆ.‌

ಅನುಮಾನದಿಂದ ಈ ಇಬ್ಬರನ್ನೂ ವಶಕ್ಕೆ ಪಡೆದ ನರಸಿಂಹರಾಜ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿದಾಗ, ಮೂರು ದಿನದ ಹಿಂದಷ್ಟೇ ದಕ್ಷಿಣ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಬರಲಿರುವ ರಿಂಗ್ ರಸ್ತೆಯ ಲಲಿತಾದ್ರಿ ನಗರದ ಬಳಿ ನಿಂತಿದ್ದ ತಮಿಳುನಾಡು ನೋಂದಣಿಯ 12 ಚಕ್ರದ ಲಾರಿ ಚಾಲಕನಿಗೆ ಡ್ರ್ಯಾಗನ್ ಚಾಕು ತೋರಿಸಿ ಹೆದರಿಸಿ, ಲಾರಿಯನ್ನು ಸ್ನೇಹಿತರೊಟ್ಟಿಗೆ ದರೋಡೆ ಮಾಡಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿರುವ ಗುಜರಿಯಲ್ಲಿ ದರೋಡೆ ಮಾಡಿದ ಲಾರಿಯ ಬಿಡಿಭಾಗ ಬಿಚ್ಚಿದ್ದು, ಮಾರಾಟ ಮಾಡಲಿಕ್ಕಾಗಿಯೇ ಸ್ಕೂಟರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗಿ ಆರೋಪಿಗಳಿಬ್ಬರು ತಿಳಿಸಿದ್ದರಿಂದ, ಉಳಿದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಂದ ಕಳವು ಮಾಲು ಸ್ವೀಕರಿಸಿದ್ದ ಸಲ್ಮಾನ್ ಖಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಶೋಕಿಗಾಗಿ ದರೋಡೆ ಮಾಡಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ನರಸಿಂಹರಾಜ ಪೊಲೀಸ್‌ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು