ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆಗಾಗಿ ಕಾಂಗ್ರೆಸ್ ಕಟ್ಟೋಣ: ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ

‘ಕ್ವಿಟ್‌ ಇಂಡಿಯಾ ಚಳವಳಿ’ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಹೇಳಿಕೆ
Last Updated 9 ಆಗಸ್ಟ್ 2020, 14:38 IST
ಅಕ್ಷರ ಗಾತ್ರ

ಮೈಸೂರು: ‘ಯುವ ಪೀಳಿಗೆಗಾಗಿ ಕಾಂಗ್ರೆಸ್‌ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಹೊಸ ಆಲೋಚನೆ ನಡೆಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಹೇಳಿದರು.

ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್‌ ಘಟಕದಿಂದ ಭಾನುವಾರ ನಡೆದ ಕ್ವಿಟ್ ಇಂಡಿಯಾ ಚಳವಳಿ ದಿನ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹತ್ತು ವರ್ಷಕ್ಕೊಮ್ಮೆ ದೇಶದ ರಾಜಕೀಯ ಬದಲಾಗುತ್ತಿದೆ. ಅದರಂತೆ ನಾವು ಬದಲಾಗಬೇಕು. ಪಕ್ಷಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ. ಹಿಂದೂಗಳಿಗೆ, ಹಿಂದೂತ್ವಕ್ಕೂ ಆದ್ಯತೆ ನೀಡಬೇಕಿದೆ’ ಎಂದರು.

‘ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಜೊತೆಗೆ ಹಲವು ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ಮಾಡಿದೆ. ಮತಾಂತರ ತಡೆಯಲು ಈ ಹಿಂದಿನಿಂದಲೂ ಸಾಕಷ್ಟು ಕೆಲಸ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ಗೆ ಇದೀಗ ಬಿಜೆಪಿ ದೇಶಭಕ್ತಿಯ ಪಾಠ ಹೇಳುತ್ತಿದೆ’ ಎಂದು ಕುಟುಕಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ‘ಕ್ವಿಟ್ ಇಂಡಿಯಾ ಚಳವಳಿ ಅಸಹಕಾರ ಚಳವಳಿಯೇ ಆಗಿತ್ತು. ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದೇ ಈ ಚಳವಳಿಯ ಗುರಿಯಾಗಿತ್ತು. ಇದರ ಮುಂದಾಳತ್ವವನ್ನು ಗಾಂಧೀಜಿ ವಹಿಸಿದ್ದರು. ‘ಮಾಡು ಇಲ್ಲವೇ ಮಡಿ’ ಘೋಷಣೆಯಡಿ ದೇಶದಾದ್ಯಂತ ಹೋರಾಟ ತೀವ್ರವಾಗಿತ್ತು’ ಎಂಬುದನ್ನು ನೆನಪಿಸಿಕೊಂಡರು.

‘ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟದಿಂದ ಇಲ್ಲಿಯವರೆಗೂ ದೇಶದ ಪರ ಅಸಂಖ್ಯಾತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ. ಇದನ್ನು ಸಹಿಸದ ವಿರೋಧಿಗಳು ಕಾಂಗ್ರೆಸ್ ಏನು ಮಾಡಿದೆ ಎನ್ನುತ್ತಾರೆ. ದೇಶದ ಸ್ವಾತಂತ್ರ್ಯ ಸಂಘರ್ಷದ ಇತಿಹಾಸ ಓದಿದವರಿಗೆ ಮಾತ್ರ ಅದು ಅರ್ಥವಾಗಲಿದೆ’ ಎಂದರು.

ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಜಿ.ಸೋಮಶೇಖರ್, ಮುಡಾ ಮಾಜಿ ಸದಸ್ಯ ಭಾಸ್ಕರ್ ಎಲ್.ಗೌಡ, ಮುಖಂಡರಾದ ಪಿ.ರಾಜು, ಶೌಖತ್ ಪಾಷ, ದೀಪಕ್ ಪುಟ್ಟಸ್ವಾಮಿ, ಐಟಿ ಸೆಲ್ ಅಧ್ಯಕ್ಷ ನಿರಾಲ್ ಶಾ, ತ್ಯಾಗರಾಜು, ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಬ್ಯಾಂಕ್ ರವಿ ಉಪಸ್ಥಿತರಿದ್ದರು.

ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣೆ

ಸ್ವಾತಂತ್ರ್ಯ ಹೋರಾಟಗಾರರರು ಸಹ ಕ್ವಿಟ್ ಇಂಡಿಯಾ ಚಳವಳಿ ಆರಂಭಗೊಂಡ ದಿನವನ್ನು ಸ್ಮರಿಸಿದರು.

ನಗರದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಲಾಯಿತು.

ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ಮಾತನಾಡಿ, ‘ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡ ಮೇಲೆ ಬಲ ಹೆಚ್ಚಿತು. ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ, ಉಪ್ಪಿನ ಚಳವಳಿ ಸೇರಿದಂತೆ ನಾನಾ ಹೋರಾಟ ನಡೆದವು. ಬ್ರಿಟಿಷರು ಇದಕ್ಕೆ ಬಗ್ಗಲಿಲ್ಲ. ಆಗ ಗಾಂಧಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದರು. ಇದು ಬ್ರಿಟಿಷರ ಶಕ್ತಿಯನ್ನು ಅಲುಗಾಡಿಸಿತು’ ಎಂದರು.

ಸಂಘದ ಉಪಾಧ್ಯಕ್ಷ ವೈ.ಸಿ.ರೇವಣ್ಣ, ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ಸಂಘದ ಪದಾಧಿಕಾರಿಗಳಾದ ಪುಟ್ಟಣ್ಣ, ಸೋಮಶೇಖರ್, ಶೇಷಾದ್ರಿ, ರವಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT