ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವೈಭವದ ಸ್ಮೃತಿಯಲ್ಲೇ ತೇಲುತ್ತಿದೆ ‘ಗಂಗೋತ್ರಿ’!

Last Updated 26 ಮೇ 2022, 6:02 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿಬೆಟ್ಟ ಹೊರತುಪಡಿಸಿದರೆ ಹಸಿರನ್ನು ಹೊದ್ದು ಮೈಸೂರಿಗೆ ಉಸಿರು ನೀಡುತ್ತಿರುವ ತಾಣ ಮಾನಸ ಗಂಗೋತ್ರಿ. 60ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಆಗಿ ರೂಪುಗೊಂಡಾಗಿನಿಂದಲೂ ಹಸಿರುಕ್ಕಿಸುತ್ತಿದ್ದ ಪರಿಸರವು ಸತತ ಬದಲಾವಣೆ ಕಂಡಿದೆ.

ಯಾವುದೇ ವಿಶ್ವವಿದ್ಯಾಲಯ, ಸಂಸ್ಥೆಗಳನ್ನು ಮೈಸೂರಿನಲ್ಲಿ ಸ್ಥಾಪಿಸುವ ಪ್ರಸ್ತಾವ ಬಂದರೆ ಆಡಳಿತ ನಡೆಸುವವರ ಕಣ್ಣು ಬೀಳುವುದು ಗಂಗೋತ್ರಿಯ ವಿಶಾಲ ಭೂಮಿಯ ಮೇಲೆ. ಹೀಗಾಗಿಯೇ ಮುಕ್ತ ವಿಶ್ವವಿದ್ಯಾಲಯ, ಭಾರತೀಯ ಭಾಷಾ ಸಂಸ್ಥಾನ, ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ, ಕಲಾಮಂದಿರ, ರಂಗಾಯಣ, ಇದೀಗ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಸ್ಥಾಪನೆಯಾಗಿ ಗಂಗೋತ್ರಿ ಹಲವು ಹೋಳುಗಳಾಗಿದೆ. ಆದರೂ, ಒಂದೇ ಕ್ಯಾಂಪಸ್‌ನಲ್ಲಿ ದೇಶದ ಹೆಮ್ಮೆಯ ಕೇಂದ್ರಗಳಿರುವ ಹಾಗೂ ಕುಕ್ಕರಹಳ್ಳಿ ಕೆರೆಯಂಥ ಜೀವವೈವಿಧ್ಯದ ತಾಣ ಇನ್ನೆಲ್ಲೂ ಕಾಣಸಿಗದು.

ದಶಕದಿಂದೀಚೆಗೆ ವಿಜ್ಞಾನಭವನ, ಮೌಲ್ಯಭವನ, ಬಿಎಂಶ್ರೀ ಸಭಾಂಗಣ ಸೇರಿದಂತೆ ಹಲವು ಹೊಸ ಕಟ್ಟಡಗಳು ಮೇಲೆದ್ದಿವೆ. ಅತಿಥಿಗೃಹ ವಿಸ್ತರಣೆಯಾಗಿದೆ. ಗ್ರಂಥಾಲಯ, ಮಾನವಿಕ ವಿಭಾಗಗಳು, ಬಯಲು ರಂಗಮಂದಿರ ಸೇರಿದಂತೆ ಹಲವು ಕಟ್ಟಡಗಳು ನವೀಕೃತಗೊಂಡಿವೆ. ಗಾಂಧಿಭವನ ಆವರಣದಲ್ಲಿ ಸಾಬರ್‌ಮತಿ ಆಶ್ರಮದ ಮಾದರಿ ಕಟ್ಟಡ, ಗಾಂಧಿ, ಅಂಬೇಡ್ಕರ್‌ ಪ್ರತಿಮೆಗಳು ಗಂಗೋತ್ರಿಯನ್ನು ಕಳೆಗಟ್ಟಿಸಿವೆ.

ದಶಕದ ಹಿಂದೆ ಯಾರೂ ಬೇಕಾದರೂ ಕ್ಯಾಂಪಸ್‌ಗೆ ಪ್ರವೇಶಿಸಬಹುದಿತ್ತು. ಆದರೆ, ಇದೀಗ ಕಾಂಪೌಂಡ್‌ ನಿರ್ಮಾಣವಾಗಿದ್ದು, ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಕ್ಯಾಂಪಸ್‌ನ ಜೀವವೈವಿಧ್ಯಕ್ಕೆ ರಕ್ಷಣೆ ಸಿಕ್ಕಿದೆ. ಪ್ರವೇಶದ್ವಾರ ನಿರ್ಮಾಣಗೊಂಡಿದ್ದು, ಕುವೆಂಪು ಪ್ರತಿಮೆ ಗಮನಸೆಳೆಯುತ್ತಿದೆ.

ರಸ್ತೆ, ವಾಕಿಂಗ್‌ ಪಾಥ್‌ಗಳ ನಿರ್ಮಾಣ, ಪಾರಂಪರಿಕ ವಿದ್ಯುತ್‌ ದೀಪಗಳು ಅಳವಡಿಕೆ, ಗಡಿಯಾರ ಗೋಪುರ ಗಂಗೋತ್ರಿಯ ಸೌಂದರ್ಯ ದೊಂದಿಗೆ ವಿಶ್ವವಿದ್ಯಾಲಯದ ಅಂದವನ್ನು ಹೆಚ್ಚಿಸಿದೆ. ಗಂಗೋತ್ರಿ ಗ್ಲೇಡ್ಸ್‌ ಕ್ರಿಕೆಟ್‌ ಮೈದಾನದಲ್ಲಿ ದೇಸಿ ರಣಜಿ ಕ್ರಿಕೆಟ್‌ ಟೂರ್ನಿಗಳು ನಡೆದಿರುವುದು ಹೆಮ್ಮೆ. ಹತ್ತಾರು ಸಭಾಂಗಣಗಳು ಹಲವು ಕಾರ್ಯಕ್ರಮಗಳಿಗೆ ಸಾಕ್ಷಿಯಾದರೆ, ಗಂಗೋತ್ರಿ ಬಯಲು ರಂಗಮಂದಿರ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಆಯೋಜನೆಗೊಂಡು ದಾಖಲೆ ಬರೆದಿತ್ತು.

ಗಂಗೋತ್ರಿ ನೆಲೆಗೊಂಡ ಬಗೆ: ಮೈಸೂರು ವಿಶ್ವವಿದ್ಯಾಲಯವು ಕ್ರಾಫರ್ಡ್‌ ಭವನ, ಮಹಾರಾಜ- ಯುವರಾಜ ಕಾಲೇಜಿಗೆ ಸೀಮಿತವಾಗಿತ್ತು. 1959ರಲ್ಲಿ ಆಗಿನ ಕುಲಪತಿ ಕುವೆಂಪು ₹ 10 ಲಕ್ಷಕ್ಕೆ ಜಯಲಕ್ಷ್ಮಿವಿಲಾಸ ಅರಮನೆ ಜೊತೆಗೆ ಸುತ್ತಲಿನ 300 ಎಕರೆ ವಿಸ್ತೀರ್ಣದ ಭೂಮಿಯನ್ನು ರಾಜವಂಶಸ್ಥರಿಂದ ಖರೀದಿಸಿದರು. ಸ್ನಾತಕೋತ್ತರ ವಿಭಾಗ
ಗಳನ್ನು ಸ್ಥಳಾಂತರಿಸಿ, ಆವರಣವನ್ನು ಮಾನಸ ಗಂಗೋತ್ರಿ ಎಂದು ಕರೆದರು. ಈ ಭೂಮಿ ಖರೀದಿಗೆ ದುಂದುವೆಚ್ಚವೆಂದು ಆಗಿನ ಸಿಂಡಿಕೇಟ್‌ ಸದಸ್ಯರು ವಿರೋಧಿಸಿದ್ದರು.

ವಿಶ್ವ ಮನ್ನಣೆ: ಗಂಗೋತ್ರಿಯ ಮಾನವಿಕ ಹಾಗೂ ವಿಜ್ಞಾನ ವಿಭಾಗಗಳು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿವೆ. 70ರ ದಶಕದಿಂದಲೂ ವೈಭವದ ಸ್ಮೃತಿಯಲ್ಲಿ ವಿಶ್ವವಿದ್ಯಾಲಯ ನಿಂತಿದೆ. ಕಳೆದ ಎರಡು ದಶಕಗಳಿಂದ ವಿಜ್ಞಾನ ವಿಭಾಗದ ಸಂಶೋಧನಾ ಪ್ರಕಟಣೆಗಳು ವಿಶ್ವವಿದ್ಯಾಲಯಕ್ಕೆ ವಿಶ್ವ ಮನ್ನಣೆಯನ್ನು ದೊರಕಿಸಿಕೊಟ್ಟಿದೆ.

ಮಾದರಿ ವಿಶ್ವವಿದ್ಯಾಲಯ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಮೈಸೂರು ವಿಶ್ವವಿದ್ಯಾಲಯ ಮಾದರಿ. ಪ್ರಕಟಣೆಗಳಿಗಾಗಿ ಪ್ರಸಾರಂಗ ಸ್ಥಾಪನೆಯಾದ್ದದ್ದು ಗಂಗೋತ್ರಿಯಲ್ಲಿಯೇ. ಇತರ ಮೀಸಲಾತಿಯೊಟ್ಟಿಗೆ ತೃತೀಯ ಲಿಂಗಿಗಳಿಗೆ, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ, ಆದಿವಾಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಮೀಸಲಾತಿ ವ್ಯವಸ್ಥೆಯನ್ನೂ ಕಲ್ಪಿಸಿದ ಪ್ರಗತಿಪರ ವಿಶ್ವವಿದ್ಯಾಲಯ ಇದಾಗಿದೆ.

ಸಿಬಿಸಿಎಸ್‌ ವ್ಯವಸ್ಥೆಯನ್ನು ಮೊದಲ ಬಾರಿ ಜಾರಿಗೊಂಡದ್ದು ಇಲ್ಲಿಯೇ. ಇದು ಮೈಸೂರು ಮಾದರಿ ಎಂದೇ ದೇಶದಲ್ಲಿ ಜನಪ್ರಿಯಗೊಂಡಿತು. ಇದೀಗ ರಾಷ್ಟ್ರೀಯ ಶಿಕ್ಷಣ ನೀತಿ–2020 ಅನ್ನು ಜಾರಿಗೊಳಿಸುತ್ತಿರುವ ದೇಶದ ಮೊದಲ ವಿಶ್ವವಿದ್ಯಾಲಯವಾಗಿದೆ.

ಸೊರಗಿದ ಅಧ್ಯಯನ ಕೇಂದ್ರಗಳು: ಗಂಗೋತ್ರಿಯಲ್ಲಿ 70ರ ದಶಕದಲ್ಲಿದ್ದ ಮೇರು ವಿದ್ವಾಂಸರು ಈಗಿಲ್ಲ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿದ್ದ ಶ್ರೇಷ್ಠ ಲೇಖಕರು, ವಿಮರ್ಶಕರು ಈಗ ಸಿಗುವುದು ಬೆರಳೆಣಿಕೆಯಷ್ಟು. ಮಾನವಿಕ ವಿಭಾಗಗಳಲ್ಲೂ ಬೋಧಕರ ಕೊರತೆಯಿದೆ. ದಶಕದಿಂದ ಇದುವರೆಗೂ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕ ನಡೆದಿಲ್ಲ. ಹೀಗಾಗಿ ಅಧ್ಯಯನ ಕೇಂದ್ರಗಳು ಸೊರಗುತ್ತಿವೆ. ಇಎಂಆರ್‌ಸಿ ಸೇರಿದಂತೆ ಹಲವು ಕೇಂದ್ರಗಳು ಅಸ್ತಿತ್ವವನ್ನೇ ಕಳೆದುಕೊಂಡಿವೆ.

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಶತಮಾನೋತ್ಸವದ ಹೊಸ್ತಿಲಲ್ಲಿದ್ದಾಗ ಅಲಹಬಾದ್‌ ವಿಶ್ವವಿದ್ಯಾಲಯದಂತೆ ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಮೈಸೂರು ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಇದರಿಂದ ಅನುದಾನ, ಬೌದ್ಧಿಕ ಉನ್ನತೀಕರಣದ ಅವಕಾಶ ವೊಂದು ಕೈತಪ್ಪಿತು. ಬೋಧಕರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿರುವುದರಿಂದ ಗುಣಮಟ್ಟವನ್ನು ಮಹಾರಾಜ ಕಾಲೇಜು ಸೇರಿದಂತೆ ವಿಶ್ವವಿದ್ಯಾಲಯದ ಕಾಲೇಜುಗಳು, ಸ್ನಾತಕೋತ್ತರ ವಿಭಾಗಗಳು ಕಳೆದುಕೊಂಡಿವೆ. ಅತಿಥಿ ಉಪನ್ಯಾಸಕರನ್ನೇ ವಿಶ್ವವಿದ್ಯಾಲಯ ನೆಚ್ಚಿಕೊಳ್ಳುವಂತಾಗಿದೆ.

‘ಅವಕಾಶವಿದ್ದರೂ ಬೇರೆಡೆ ಹೋಗಲಿಲ್ಲ’
‘ಗಂಗೋತ್ರಿಯ ವಾತಾವರಣದಲ್ಲಿ ಓದಿದ ವಿದ್ಯಾರ್ಥಿ ನಾಡಿಗೆ ಬೌದ್ಧಿಕ ಆಸ್ತಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ದೇಶ– ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಅವಕಾಶ ಬಂದರೂ ನಾನು ಹೋಗಲಿಲ್ಲ’ ಎಂದು ವಿಶ್ವವಿದ್ಯಾಲಯದ ಕಲಾ ನಿಕಾಯದ ಮುಖ್ಯಸ್ಥ ಪ್ರೊ.ಮುಜಾಫರ್ ಅಸಾದಿ ಹೇಳಿದರು.

‘ವಿದ್ಯಾರ್ಥಿ ಸಂಘಟನೆಗಳೂ ಪ್ರಬುದ್ಧವಾಗಿವೆ. ಬಡತನ, ಗ್ರಾಮೀಣ ಹಿನ್ನೆಲೆಯಲ್ಲಿ ಬಂದವರು ಹೋರಾಟ ನಡೆಸಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿರೋಧತೆಯೂ ಗಂಗೋತ್ರಿಯ ಅಸ್ಮಿತೆಯಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾರು ಬೇಕಾದರೂ ವಿಶ್ವವಿದ್ಯಾಲಯಕ್ಕೆ ಬಂದು ಪ್ರಾಧ್ಯಾಪಕರೊಂದಿಗೆ ಚರ್ಚಿಸುವ ಮುಕ್ತ ಅವಕಾಶ ಇಲ್ಲಿದೆ. ಸಿ.ಡಿ.ನರಸಿಂಹಯ್ಯ, ಕೆ.ವಿ.ಪುಟ್ಟಪ್ಪ, ಯು.ಆರ್‌.ಅನಂತಮೂರ್ತಿ ಸೇರಿದಂತೆ ದಿಗ್ಗಜರ ಪಾಠಗಳನ್ನು ಕೇಳಲು ಬೇರೆ ವಿಶ್ವವಿದ್ಯಾಲಯದಿಂದಲೂ ಬರುತ್ತಿದ್ದರು. ಚರ್ಚಿಸುತ್ತಿದ್ದರು. ಈಗಲೂ ಇಂದಿನ ಪ್ರಾಧ್ಯಾಪಕರು ಆ ಪರಂಪರೆ ಮುಂದುವರಿಸಿದ್ದಾರೆ’ ಎಂದರು.

ಗಂಗೋತ್ರಿಯ ಹೃದಯ ಗ್ರಂಥಾಲಯ!
ಗಂಗೋತ್ರಿಯ ಹೃದಯಭಾಗದಲ್ಲಿರುವ ಗ್ರಂಥಾಲಯ ದಲ್ಲಿ 6 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ವಿವಿಧ ಅಧ್ಯಯನ ಕೇಂದ್ರಗಳದ್ದು ಸೇರಿದರೆ 12 ಲಕ್ಷ ಪುಸ್ತಕಗಳಿವೆ. ಗ್ರಂಥಾಲಯದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಸಂಪನ್ಮೂಲ ಸೇವೆಗಳು ಲಭ್ಯವಿವೆ. ಅಂಧ ವಿದ್ಯಾರ್ಥಿಗಳ ವಿಭಾಗ ಸೇರಿದಂತೆ 10 ವಿಭಾಗ ಇವೆ.

‘ವರ್ಷಕ್ಕೆ 4 ಸಾವಿರ ವಿದ್ಯಾರ್ಥಿಗಳು, 900 ಸಂಶೋಧನಾ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯುತ್ತಾರೆ. ಇದಲ್ಲದೆ ಇತರ ಕಾಲೇಜುಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ನಾಗರಿಕರು ಪರಾಮರ್ಶನ ನಡೆಸಲು ನಿತ್ಯ 800 ಮಂದಿ ಗ್ರಂಥಾಲಯದ ಸೇವೆ ಪಡೆಯುತ್ತಿದ್ದಾರೆ. ವಿಶ್ವದ ಯಾವುದೇ ಭಾಗದಿಂದಲೂ ಗ್ರಂಥಾಲಯದ ಪುಸ್ತಕಗಳನ್ನು ಓದಬಹುದು. ಇದುವರೆಗೂ 32 ಸಾವಿರ ಇ–ಪುಸ್ತಕಗಳಿವೆ’ ಎಂದು ಗ್ರಂಥಪಾಲಕರಾದ ಡಾ.ಪಿ.ಸರಸ್ವತಿ ಹೇಳಿದರು.

ಮಿನಿ ವಿಶ್ವವಿದ್ಯಾಲಯ!
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಮಿನಿ ವಿಶ್ವವಿದ್ಯಾಲಯ ಎಂಬ ಖ್ಯಾತಿಯಿದೆ. 1966ರಲ್ಲಿ ಆರಂಭವಾದ ಸಂಸ್ಥೆಯು ಸಂಶೋಧನೆ, ಪ್ರಕಟಣೆ, ಅಧ್ಯಯನ ಕೇಂದ್ರವಾಗಿ ಇತರ ವಿಶ್ವವಿದ್ಯಾಲಯಕ್ಕೆ ಮಾದರಿಯಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಷ್ಟೇ ಕೊಡುಗೆಯನ್ನು ಗಂಗೋತ್ರಿಯ ಈ ಸಂಸ್ಥೆ ನೀಡಿದೆ.

‘ಸಂಸ್ಥೆಯು ಕನ್ನಡ ವಿಷಯ ವಿಶ್ವಕೋಶವನ್ನು ಪ್ರಕಟಿಸಿತು. ಬಿ.ಎಲ್‌.ರೈಸ್‌ ಅವರ 12 ಸಂಪುಟಗಳ ಎಪಿಗ್ರಾಫಿಯಾ ಆಫ್‌ ಕರ್ನಾಟಕವನ್ನು ಪರಿಷ್ಕರಿಸಿ, ಹೊಸ ಅಂಶಗಳನ್ನು ಸೇರಿಸಿ ಒಟ್ಟು 26 ಸಂಪುಟಗಳಿಗೆ ಸಂಸ್ಥೆ ವಿಸ್ತರಿಸಿದೆ. ಎಂಟು ಸಾವಿರ ಕನ್ನಡದ ಪ್ರಾಚೀನ ಹಸ್ತಪ್ರತಿಗಳು ಇವೆ’ ಎಂದು ನಿರ್ದೇಶಕ ಡಾ.ಎಂ.ಜಿ.ಮಂಜುನಾಥ್ ಹೇಳಿದರು.

‘ಜಯಲಕ್ಷ್ಮಿವಿಲಾಸ ಅರಮನೆ ಮ್ಯೂಸಿಯಂ ಅನ್ನು ಸಂಸ್ಥೆಯೇ ನಿರ್ವಹಿಸುತ್ತಿದೆ’ ಎಂದರು.

‘ಸಾವಿರಾರು ಗಿಡ ನೆಡಲಾಗಿದೆ’
‘ಕಳೆದ ಎರಡು ದಶಕಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರಿಂದ ಕಟ್ಟಡ ಕೊರತೆ ಉಂಟಾಯಿತು. ಪ್ರೊ.ತಳವಾರ್‌ ಅವಧಿಯಲ್ಲಿ ವಿಜ್ಞಾನ ಭವನ, ಪ್ರೊ.ಕೆ.ಎಸ್‌.ರಂಗಪ್ಪ ಅವಧಿಯಲ್ಲಿ ಗಂಗೋತ್ರಿಗೆ ಹೊಸ ಸೌಂದರ್ಯ ಸಿಕ್ಕಿತ್ತು. ಕುವೆಂಪು, ಅಂಬೇಡ್ಕರ್‌, ಗಾಂಧಿ ಪ್ರತಿಮೆಗಳು ನಿರ್ಮಾಣವಾದವು. ಜೊತೆಯಲ್ಲೇ ಸಾವಿರಾರು ಗಿಡಗಳನ್ನು ನೆಡಲಾಗಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಹೇಳಿದರು.

‘ಗಂಗೋತ್ರಿಯಲ್ಲಿ ಎಂಜಿನಿಯರಿಂಗ್‌ ಕಾಲೇಜು, ಉದ್ಯೋಗಾಧರಿತ ಕೌಶಲ ಕಾರ್ಯಕ್ರಮಗಳ ಜಾರಿಗೆ ಕೆರಿಯರ್ ಹಬ್ ಆರಂಭಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ತಂತ್ರಜ್ಞಾನ ಕೋರ್ಸ್‌ಗಳು ಸೇರ್ಪಡೆಯಾಗಲಿವೆ’ ಎಂದು ಮಾಹಿತಿ ನೀಡಿದರು.

‘ಸರ್ಕಾರಗಳು ಹೆಚ್ಚಿನ ಅನುದಾನ ಕೊಡದಿರುವುದರಿಂದ ಹಣ ಕ್ರೂಢೀಕರಿಸಬೇಕಿದೆ. ಸರ್ಕಾರವು ಬೋಧಕ ಸಿಬ್ಬಂದಿ ನೀಡಬೇಕು ಇಲ್ಲದಿದ್ದರೆ, ಕುಲಪತಿಗಳಿಗೆ ಸ್ವಾತಂತ್ರ್ಯ ನೀಡಬೇಕು’ ಎಂದರು.

*

ವಿದ್ಯಾರ್ಥಿಗಳೇನಂತಾರೆ?

ಚಿಕ್ಕಂದಿನ ಕನಸು
ಗಂಗೋತ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯು ವುದು ಚಿಕ್ಕಂದಿನ ಕನಸು. ಪಿ.ಜಿ ಸೀಟ್‌ ಸಿಗಲಿಲ್ಲ. ಮಾಹಿತಿ ವಿಜ್ಞಾನ– ತಂತ್ರಜ್ಞಾನ ಕೇಂದ್ರದಲ್ಲಿ ಡಿಪ್ಲೊಮಾ ಕೋರ್ಸ್‌ ಮಾಡುತ್ತಿದ್ದೇನೆ. ಉತ್ತಮ ಹಾಸ್ಟೆಲ್‌ ಸೌಲಭ್ಯವಿದೆ
-ಎಸ್‌.ಬಿ.ಮಹೇಶ್‌ ಕುಮಾರ್‌,ಸರಗೂರು

*
ಸ್ಪರ್ಧಾತ್ಮಕ ಪರೀಕ್ಷೆ ತಯಾರಿ
ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಗಂಗೋತ್ರಿ ಬಗ್ಗೆ ಸೆಳೆತವಿತ್ತು. ಹೊಸ ಸ್ನಾತಕೋತ್ತರ ಪದವಿಯು ಸಂವಿಧಾನ, ಅಂಬೇಡ್ಕರ್‌ ಚಿಂತನೆಗಳನ್ನು ಅರಿಯಲು ಸಹಕಾರಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೂ ಕ್ಯಾಂಪಸ್‌ ವಾತಾವರಣ ಪೂರಕವಾಗಿದೆ
-ಚಂದನ್‌,ಎಂ.ಎ , ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ

*
ಓದುತ್ತಿರುವುದೇ ನನ್ನ ಅದೃಷ್ಟ
ವಿಶ್ವವಿದ್ಯಾಲಯದ ಬೋಧಕ ವರ್ಗ ವಿಶ್ವದಲ್ಲಿಯೇ ಹೆಸರು ಪಡೆದಿದೆ. ಸಂಶೋಧನೆಗೆ ವಿವಿಧ ಅನುದಾನಗಳು ಲಭ್ಯವಿದೆ. ಉತ್ತಮ ಮಾರ್ಗದರ್ಶನವಿದ್ದು, ಇಲ್ಲಿ ಓದುತ್ತಿರುವುದೇ ನನ್ನ ಅದೃಷ್ಟ
-ಎಂ.ನಂದಿತಾ,ದ್ವಿತೀಯ ಎಂ.ಎಸ್ಸಿ, ಸೂಕ್ಷ್ಮ ಜೀವವಿಜ್ಞಾನ ಅಧ್ಯಯನ ಕೇಂದ್ರ

*
ಉತ್ತಮ ಸೌಲಭ್ಯಗಳಿವೆ
ಭೌತವಿಜ್ಞಾನ ವಿಭಾಗದಲ್ಲಿ ಉತ್ತಮ ಪ್ರಯೋಗಾ ಲಯ, ಮೂಲಸೌಲಭ್ಯಗಳಿವೆ. ಐಐಟಿ, ಐಐಎಸ್‌ಸಿಯಲ್ಲಿ ಸಿಗುವ ಅಧ್ಯಯನ ವಾತಾವರಣ ಇಲ್ಲಿದೆ
- ನಿಶ್ಚಿತ್‌,ದ್ವಿತೀಯ ಎಂ.ಎಸ್ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT