ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಔಷಧ ಉತ್ಪಾದನಾ ಘಟಕಕ್ಕೆ ಚಾಲನೆ

ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆಯಲ್ಲಿ ಆರಂಭ
Last Updated 20 ನವೆಂಬರ್ 2020, 1:57 IST
ಅಕ್ಷರ ಗಾತ್ರ

ಮೈಸೂರು: ನಗರದ ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಆರಂಭವಾಗಿರುವ ‘ಆಯುರ್ವೇದ ಔಷಧಗಳ ಉತ್ಪಾದನಾ ಘಟಕ ಹಾಗೂ ಫಾರ್ಮಸಿ’ಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗುರುವಾರ ಉದ್ಘಾಟಿಸಿದರು.

ಪಾರಂಪರಿಕ ವಿಧಾನದಲ್ಲಿ ಆಯು ರ್ವೇದ ಔಷಧಗಳನ್ನು ತಯಾರಿಸುವ ಘಟಕ ಇದಾಗಿದ್ದು, ಸುಮಾರು 20 ವಿಧದ ಲೇಹ್ಯ, ಚೂರ್ಣ, ಮಾತ್ರೆಗಳನ್ನು ತಯಾರಿಸಲಾಗುತ್ತದೆ.

ಇಲ್ಲಿ ತಯಾರಾಗುವ ಔಷಧಗಳನ್ನು ಮಾರಾಟ ಮಾಡಲು ಫಾರ್ಮಸಿಯನ್ನು ಕೂಡ ತೆರೆಯಲಾಗಿದೆ. ಆಯುರ್ವೇದ ಆಸ್ಪತ್ರೆಗೆ ಬರುವ ರೋಗಿಗಳು ಹೊರಗಿ ನಿಂದ ಔಷಧಿ ತರಬೇಕೆಂದಿಲ್ಲ. ಬಹು ತೇಕ ಔಷಧಿಗಳು ಇಲ್ಲಿ ಲಭ್ಯವಾಗಲಿದೆ.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೈಸೂರಿನಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಮೊದಲು ಇದ್ದದ್ದು ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಮಾತ್ರ. ಆಯುರ್ವೇದ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು 28 ವರ್ಷಗಳ ಹಿಂದೆ ಈ ಆಸ್ಪತ್ರೆ ಆರಂಭವಾಯಿತು. ಕಾಲೇಜು ಹಾಗೂ ಆಸ್ಪತ್ರೆಯನ್ನು ಆ ಬಳಿಕ ಇಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ಹೇಳಿದರು.

‘ರೋಗಿಗಳಿಗೆ ಬೇಕಾದ ಔಷಧ ಇಲ್ಲಿಯೇ ತಯಾರಿಸಬೇಕು ಎಂಬ ಯೋಚನೆ ಬಹಳ ಸಮಯದಿಂದ ಇತ್ತು. ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಔಷಧ ತಯಾರಿಸಲಾಗುತ್ತಿತ್ತು. ಈಗ ಇನ್ನಷ್ಟು ಔಷಧ ತಯಾರಿಸಲು ಅನುಮತಿ ಲಭಿಸಿರುವುದರಿಂದ ಘಟಕ ಆರಂಭಿಸಲಾಗಿದೆ’ ಎಂದರು.

‘ಗುಣಮಟ್ಟದಿಂದ ಕೂಡಿರುವ ಈ ಔಷಧಿ, ಜನರಿಗೆ ಕೈ ಗೆಟಕುವ ದರದಲ್ಲಿ ಒದಗಿಸುವ ಉದ್ದೇಶ ಹೊಂದಿದ್ದೇವೆ. ಈ ಘಟಕದಲ್ಲಿ ತಯಾರಿಸಲಾಗುವ ಔಷಧಿಗಳನ್ನು ಸದ್ಯಕ್ಕೆ ಇಲ್ಲಿಗೆ ಬರುವ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಚಿಂತನೆಯೂ ಇದೆ’ ಎಂದರು.

ಈ ಘಟಕದಲ್ಲಿ ಲಾಕ್ಷಾ ಗುಗ್ಗುಲು, ತ್ರಿಫಲ ಗುಗ್ಗುಲು, ತ್ರಯೋದಶಾಂಗ ಗುಗ್ಗುಲು, ತ್ರಿಕಟು ಚೂರ್ಣ, ಬಲಾಶ್ವಗಂಧ ತೈಲ, ಅಶ್ವಗಂಧ ತೈಲ ಒಳಗೊಂಡಂತೆ ಹಲವು ವಿಧದ ಚೂರ್ಣಗಳು ಮತ್ತು ತೈಲ ತಯಾರಿಸಲಾಗುತ್ತದೆ.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT