ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರು ಯಾರ ಗುಲಾಮರೂ ಅಲ್ಲ: ಜೆಡಿಎಸ್‌ ಮುಖಂಡ ಅಬ್ದುಲ್‌ ಅಜೀಜ್‌

ಪಾಲಿಕೆಯಲ್ಲಿ ಹಫ್ತಾ ವಸೂಲಿ ನಿಲ್ಲಿಸಿ: ಆರೀಫ್‌ ವಿರುದ್ಧ ಅಬ್ದುಲ್‌ ಅಜೀಜ್‌ ಕಿಡಿ
Last Updated 19 ಅಕ್ಟೋಬರ್ 2021, 11:29 IST
ಅಕ್ಷರ ಗಾತ್ರ

ಮೈಸೂರು: ‘ಮುಸ್ಲಿಮರು ಯಾರೊಬ್ಬರ ಗುಲಾಮರಲ್ಲ. ವಿದ್ಯಾವಂತರಿದ್ದಾರೆ. ಯಾರನ್ನು ಬೆಂಬಲಿಸಬೇಕು ಎಂಬುದನ್ನು ನಿರ್ಧರಿಸುವಷ್ಟು ಶಕ್ತರಿದ್ದಾರೆ’ ಎಂದು ಜೆಡಿಎಸ್‌ ಮುಖಂಡ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಮಂಗಳವಾರ ಇಲ್ಲಿ ಗುಡುಗಿದರು.

ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಆರೀಫ್ ಹುಸೇನ್‌ ವಾಗ್ದಾಳಿ ನಡೆಸಿದ್ದಕ್ಕೆ, ಜೆಡಿಎಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿ ದಾಳಿ ನಡೆಸಿದ ಅಜೀಜ್‌, ‘ಆರೀಫ್‌ ಹುಸೇನ್‌ ಮೇಯರ್‌ ಆಗಿದ್ದೇ ಜೆಡಿಎಸ್‌ ಭಿಕ್ಷೆಯಿಂದ ಎಂಬುದನ್ನು ಮರೆತಿದ್ದಾರೆ’ ಎಂದು ಕುಟುಕಿದರು.

‘ಮರದ ವ್ಯಾಪಾರಿಯಾಗಿದ್ದ ಅವಿದ್ಯಾವಂತನನ್ನು ಗುರುತಿಸಿ ಬೆಳೆಸಿದ್ದು ಜೆಡಿಎಸ್‌. ಕುಮಾರಸ್ವಾಮಿ ಆರ್‌ಎಸ್‌ಎಸ್‌ ವಿರುದ್ಧ ಕಟು ಟೀಕೆ ಮಾಡುತ್ತಿರುವುದರಿಂದ ಹೆದರಿರುವ ಕಾಂಗ್ರೆಸ್‌ ಮುಖಂಡರು, ಮುಸ್ಲಿಮರ ಮತಕ್ಕಾಗಿ ಇಂತಹ ಏನೊಂದು ಗೊತ್ತಿಲ್ಲದ ಅವಿದ್ಯಾವಂತರನ್ನು ಮುಂದಿಟ್ಟುಕೊಂಡು ಎಚ್‌ಡಿಕೆಯ ತೇಜೋವಧೆ ಮಾಡಿಸುತ್ತಿದ್ದಾರೆ’ ಎಂದು ಅವರು ಗುಡುಗಿದರು.

‘ಪಾಲಿಕೆ ಅಂಗಳದಲ್ಲಿ ಗುತ್ತಿಗೆದಾರರಿಂದ ತಿಂಗಳಿಗೆ ₹ 5 ಲಕ್ಷ ಹಫ್ತಾ ವಸೂಲಿ ಮಾಡುವ ಆರೀಫ್‌ ಹುಸೇನ್‌ನಂತಹವರು ಕುಮಾರಸ್ವಾಮಿ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಮಗೂ ಅವರ ನಾಯಕರ ಬಗ್ಗೆ ಮಾತನಾಡಲು ಸಾಕಷ್ಟು ವಿಷಯಗಳಿವೆ. ಆದರೆ ಜೆಡಿಎಸ್‌ನಲ್ಲಿ ಅಂತಹ ಸಂಸ್ಕೃತಿಯಿಲ್ಲ’ ಎಂದು ಅಬ್ದುಲ್‌ ಅಜೀಜ್‌ ಕಿಡಿಕಾರಿದರು.

‘ಮುಸ್ಲಿಮರನ್ನು ಕೈಗೊಂಬೆ ಮಾಡಿಕೊಳ್ಳೋದು ಇನ್ಮುಂದೆ ಸಾಧ್ಯವಿಲ್ಲ. ಜೆಡಿಎಸ್‌ನಿಂದ ಮೇಯರ್‌ ಆಗಿದ್ದ ಮುಸ್ಲಿಂ ಮಹಿಳೆ ತಸ್ನೀಂಗೆ ಅಧಿಕಾರ ಚಲಾಯಿಸಲು ಅವಕಾಶ ಕೊಡದೆ ಚಿತ್ರಹಿಂಸೆ ಕೊಟ್ಟವರು ಕಾಂಗ್ರೆಸ್ಸಿಗರು. ಇದು ಮೈಸೂರಿನ ಮುಸ್ಲಿಮರಿಗೆ ಗೊತ್ತಾಗಿದೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಲಿಯಾಜ್‌ ಅಹಮದ್‌ ಬಾಬು ಮಾತನಾಡಿ ‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದ ನಜೀರ್‌ ಅಹಮದ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯನ್ನಾಗಿ ವರ್ತೂರು ಪ್ರಕಾಶ್‌ ಕಣಕ್ಕಿಳಿಸಿ ಗೆಲ್ಲಿಸಿದ್ದು ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ’ ಎಂದು ತಿಳಿಸಿದರು.

‘ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಬಲವರ್ಧನೆಗೊಳ್ಳಲು ಕಾಂಗ್ರೆಸ್‌ ಮುಖ್ಯ ಕಾರಣವಾಗಿದೆ’ ಎಂದು ಅವರು ಗುಡುಗಿದರು.

ಪಾಲಿಕೆ ಸದಸ್ಯ ಶಫಿ ಅಹಮದ್‌ ಮಾತನಾಡಿ ‘ಸಿದ್ದರಾಮಯ್ಯ ಮುಸ್ಲಿಮರ ನಾಯಕರಲ್ಲ. ಕಾಂಗ್ರೆಸ್‌ ಮುಸ್ಲಿಮರ ನಾಯಕ. ಸಾಬ್ರಿಗೆ ಈಗ ಯಾರೂ ಲೀಡರ್‌ ಅಲ್ಲ. ಅವರಿಗೆ ಅವರೇ ನಾಯಕರಾಗುತ್ತಿದ್ದಾರೆ. ಆರೀಫ್‌ ಹುಸೇನ್‌ ಇದೇ ರೀತಿ ಇನ್ನೊಮ್ಮೆ ಮಾತನಾಡಿದರೆ; ಅವರ ಮನೆಯಿಂದ ಖಬರ್‌ಸ್ತಾನ್‌ವರೆಗೂ ಹೆಣದ ಮೆರವಣಿಗೆ ಮಾಡಬೇಕಾಗುತ್ತೆ’ ಎಂದು ಎಚ್ಚರಿಸಿದರು.

ಮಾಜಿ ಮೇಯರ್‌ ಎಂ.ಜಿ.ರವಿಕುಮಾರ್‌, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT