ಬುಧವಾರ, ಜೂನ್ 29, 2022
23 °C

ಒಬ್ಬರ ಅಹಂನಿಂದ ವ್ಯವಸ್ಥೆ ಹದಗೆಡಬಾರದು: ಸಿಂಧೂರಿ ವಿರುದ್ಧ ಶಿಲ್ಪಾ ಮತ್ತೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಒಬ್ಬರ ಅಹಂಕಾರದಿಂದ ಇಡೀ ವ್ಯವಸ್ಥೆ ಹದಗೆಡಬಾರದು ಎಂಬ ವಿಚಾರ ಹೇಳಲು ನಾನು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ. ತಪ್ಪು ಮಾಡಿದ್ದರೆ  ಕ್ಷಮಿಸಿ ಬಿಡಿ. ಸೇವಾ ಮನೋಭಾವದಿಂದ ಕೆಲಸ ಮಾಡಿದ್ದೇನೆ’ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌ ಶುಕ್ರವಾರ ಇಲ್ಲಿ  ಭಾವುಕರಾಗಿ ಹೇಳಿದರು.

‘ಕೆಲಸ ನಡೆಯುತ್ತಿದ್ದರೂ ನಡೆಯುತ್ತಿಲ್ಲ ಎಂಬುದನ್ನು ಬಿಂಬಿಸಿ, ದಿನ ನೋಟಿಸ್‌ ನೀಡುತ್ತಿದ್ದಾರೆ. ಎಲ್ಲರಲ್ಲಿ ಭಯದ ವಾತಾವರಣ ನಿರ್ಮಿಸಿ, ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಇಷ್ಟೊಂದು ಅಹಂಕಾರ ಇರಬಾರದು. ತಾನು ಮಾಡಿದ್ದೇ ಸರಿ, ಎಲ್ಲವೂ ತನ್ನಿಂದಲೇ ಆಗಬೇಕು ಎಂಬ ವರ್ತನೆ, ಸಮರ್ಥನೆ ಸರಿಯಲ್ಲ. ಪ್ರಶಂಸೆ, ಟೀಕೆಗಳನ್ನು ಸರಿಸಮನಾಗಿ ಸ್ವೀಕರಿಸಬೇಕು’ ಎಂದರು.

‘ಪಾಲಿಕೆ ಆಯುಕ್ತಳಾಗಿ ಹಲವು ಜವಾಬ್ದಾರಿ ಇದ್ದರೂ ನಾನು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ನಿವರ್ಹಿಸುವ ಜವಾಬ್ದಾರಿ ತೆಗೆದುಕೊಂಡೆ. ಮೈಸೂರು ನಗರದಲ್ಲಿ ಆಸ್ಪತ್ರೆಗಳು ಹೆಚ್ಚಿದ್ದು, ಔಷಧ ಖರೀದಿಸಿಲ್ಲ. ಹೀಗಾಗಿ, ಸಿಎಸ್‌ಆರ್‌ ನಿಧಿ ಬಳಸಿಕೊಂಡು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಲ್ಲಿ ಹಲವು ಲೋಪಗಳಿವೆ. ಅದನ್ನೇ ತಪ್ಪು ಎಂದು ಹೇಳಿದಾಗ ಬೇಸರ ಉಂಟಾಯಿತು’ ಎಂದು ನುಡಿದರು.

ಇದನ್ನೂ ಓದಿ... ಐಎಎಸ್‌ ಅಧಿಕಾರಿ ಶಿಲ್ಪಾ ನಾಗ್‌ ರಾಜೀನಾಮೆ: ಸಾಂತ್ವನ ಹೇಳಿದ್ದೇ ಮುಳುವಾಯಿತೇ?

‘ಬೆಂಗಳೂರಿನ ಇನ್ಫೊಸಿಸ್‌ ಅಧಿಕಾರಿಗಳ ಜೊತೆ ಮಾತನಾಡಿ, ‘ಪ್ರಾಜೆಕ್ಟ್‌ ಸ್ಟೆಪ್‌ 1’ ಹಾಗೂ ‘ಇನ್ಫೊಸಿಸ್‌ ಆಪ್ತಮಿತ್ರ’ ಪರಿಕಲ್ಪನೆಯನ್ನು ಮೈಸೂರಿಗೆ ತರಲು ಮುಂದಾದೆ. ಕೋವಿಡ್‌ ಪರೀಕ್ಷೆ ನಡೆಸಿದ ಒಂದೇ ದಿನದಲ್ಲಿ ಫಲಿತಾಂಶ ಬರಬೇಕು, ಆರು ಗಂಟೆಗಳಲ್ಲಿ ಸೋಂಕಿತರಿಗೆ ಕರೆ ಮಾಡಬೇಕು. ಇದರಿಂದ ಪ್ರಕರಣ ಕಡಿಮೆ ಮಾಡಬಹುದು ಎಂಬ ಆಲೋಚನೆ ನನ್ನದಾಗಿತ್ತು. ಆದರೆ, ಅದರ ಅಗತ್ಯವಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಹೇಳಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‌‘ಪಾಲಿಕೆ ವತಿಯಿಂದ ವಾರ್ಡ್‌ ಮಟ್ಟದ ಕಾರ್ಯಪಡೆಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಆದರೆ, ಚೆನ್ನಾಗಿ ನಡೆಯುತ್ತಿಲ್ಲ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ನಗರದ ಕೆಲ ಪ್ರದೇಶಗಳಲ್ಲಿ ಪ್ರಕರಣ ಕಡಿಮೆ ಇದ್ದರೂ ರೆಡ್‌ ಜೋನ್‌ ಎಂದು ತೋರಿಸಿ ಗಾಬರಿ ಮೂಡಿಸಲಾಗುತ್ತಿದೆ. ಇದು ಒಪ್ಪುವಂಥಲ್ಲ. ಈ ರೀತಿ ಮಾಡಿದರೆ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂಬ ಬೇಸರದಿಂದ ರಾಜೀನಾಮೆ ನಿಲುವು ತೆಗೆದುಕೊಂಡೆ’ ಎಂದರು.

ಇದನ್ನೂ ಓದಿ... ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ರಾಜೀನಾಮೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು