ಶುಕ್ರವಾರ, ಏಪ್ರಿಲ್ 3, 2020
19 °C
ಭಾರತೀಯ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಚಿಂತನೆ

‘ಸ್ವಚ್ಛ ಆಹಾರ ಜಾಲ’ಕ್ಕೆ ಮೈಸೂರು ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಭಾರತೀಯ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ವು ದೇಶದಾದ್ಯಂತ ವಿವಿಧ ನಗರಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ‘ಸ್ವಚ್ಛ ಆಹಾರ ಜಾಲ’ಕ್ಕೆ ಮೈಸೂರನ್ನು ಆಯ್ಕೆ ಮಾಡಲು ಚಿಂತನೆ ನಡೆದಿದೆ.

ಅಸಂಘಟಿತಾಗಿರುವ ರಸ್ತೆಬದಿ ಆಹಾರ ಮಾರಾಟಗಾರರನ್ನು ಸಂಘಟಿತರನ್ನಾಗಿಸಿ ಅವರಿಗೆ ರಕ್ಷಣೆ ನೀಡುವುದರ ಜತೆಗೆ, ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದು ‘ಸ್ವಚ್ಛ ಆಹಾರ ಜಾಲ’ದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಅಹಮದಾಬಾದಿನಲ್ಲಿ ಈಗಾಗಲೇ ರಸ್ತೆಬದಿ ವ್ಯಾಪಾರಿಗಳನ್ನು ಸಂಘಟಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರಿನಲ್ಲೂ ರಸ್ತೆಬದಿ ಆಹಾರ ವ್ಯಾಪಾರಿಗಳನ್ನು ಬಲಪಡಿಸುವ ಉದ್ದೇಶವಿದೆ.

ಮೈಸೂರಿನಲ್ಲಿ ಭಾರತೀಯ ಆಹಾರ ವಿಜ್ಞಾನಿಗಳು ಮತ್ತು ತಂತ್ರಜ್ಞರ ಸಂಘವು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಮತ್ತು ರಕ್ಷಣಾ ಆಹಾರ ತಂತ್ರಜ್ಞಾನ ಪ್ರಯೋಗಾಲಯ (ಡಿಎಫ್‌ಆರ್‌ಎಲ್) ಸಹಯೋಗದಲ್ಲಿ ಬುಧವಾರ ಆರಂಭವಾದ ನಾಲ್ಕು ದಿನಗಳ 8ನೇ ಅಂತರರಾಷ್ಟ್ರೀಯ ಆಹಾರ ಸಮಾವೇಶದಲ್ಲಿ ಪ್ರಾಧಿಕಾರದ ಸಿಇಒ ಪವನ್‌ ಕುಮಾರ್‌ ಅಗರವಾಲ್ ‘ಪ್ರಜಾವಾಣಿ’ಯೊಂದಿಗೆ ಪ್ರತಿಕ್ರಿಯಿಸಿದರು.

‘ದೇಶದ ಪ್ರಮುಖ ನಗರಿಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಕರ್ನಾಟಕದಲ್ಲಿ ಇದಕ್ಕಾಗಿ ಮೈಸೂರನ್ನು ಆಯ್ಕೆ ಮಾಡುವುದು ನಮ್ಮ ಉದ್ದೇಶ. ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಯೋಜನೆ ಜಾರಿಯಾದರೆ ಅನೇಕರಿಗೆ ಅನುಕೂಲವಾಗುತ್ತದೆ. ಅಸಂಘಟಿತ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡುವುದು, ಸರ್ಕಾರದ ವಿವಿಧ ಯೋಜನೆಗಳ ಅಡಿಗೆ ತರುವುದು ಇದರಿಂದ ಸಾಧ್ಯವಾಗುತ್ತದೆ. ಜತೆಗೆ, ಗುಣಮಟ್ಟದ ಆಹಾರವನ್ನು ನಾಗರಿಕರಿಗೆ ಪೂರೈಸಿದಂತೆಯೂ ಆಗುವುದು’ ಎಂದು ಮಾಹಿತಿ ನೀಡಿದರು.

‘ಸ್ವಚ್ಛ ಆಹಾರವನ್ನು ಪೂರೈಸಬೇಕು ಹಾಗೂ ಸೇವಿಸಬೇಕು ಎಂಬ ಜಾಗೃತಿ ಎಲ್ಲರಲ್ಲಿ ಮೂಡಬೇಕು. ಇದಕ್ಕಾಗಿ ಪ್ರಾಧಿಕಾರವು ‘ಈಟ್‌ ರೈಟ್‌’  (ಸರಿಯಾದುದನ್ನು ಸೇವಿಸಿ) ಅಭಿಯಾನ ಹಮ್ಮಿಕೊಳ್ಳುತ್ತಿದೆ. ನವದೆಹಲಿಯಲ್ಲಿ ಈ ಕುರಿತು ಶೀಘ್ರವೇ ಬೃಹತ್‌ ಮೇಳ ನಡೆಯಲಿದ್ದು, ರಸ್ತೆಬದಿ ವ್ಯಾಪಾರಿಗಳ ಶ್ರೇಯಸ್ಸಿಗಾಗಿ ಚರ್ಚಿಸಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು