ಕಲಾ ವಿದ್ಯಾರ್ಥಿಗಳಿಂದಾಗಿ ಕುಸಿದ ಫಲಿತಾಂಶ!

ಬುಧವಾರ, ಏಪ್ರಿಲ್ 24, 2019
27 °C
ಗ್ರಾಮಾಂತರ ಪ್ರದೇಶಗಳಿಗೆ ಸಿಗುತ್ತಿಲ್ಲ ಆದ್ಯತೆ; ನಗರ ಪ್ರದೇಶದ್ದೂ ಸಾಧಾರಣ ಫಲಿತಾಂಶ

ಕಲಾ ವಿದ್ಯಾರ್ಥಿಗಳಿಂದಾಗಿ ಕುಸಿದ ಫಲಿತಾಂಶ!

Published:
Updated:

ಮೈಸೂರು: ಎಷ್ಟೇ ಶೈಕ್ಷಣಿಕ ಉತ್ತೇಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಪಿಯು ಫಲಿತಾಂಶದಲ್ಲಿ ಮೈಸೂರು ಸುಧಾರಣೆಯನ್ನೇ ಕಾಣುತ್ತಿಲ್ಲ. ಹಾಗಾಗಿ, ಇದುವರೆಗೂ ಮೈಸೂರಿಗೆ ರಾಜ್ಯ ಸ್ಥಾನದಲ್ಲಿ ಟಾಪ್‌ 10 ಒಳಗೆ ಬರಲು ಸಾಧ್ಯವಾಗದೇ ಡೋಲಾಯಮಾನ ಸ್ಥಿತಿಯಲ್ಲೇ ಇರುವಂತಾಗಿದೆ.

ಆದರೆ, ಮೈಸೂರಿನ ಫಲಿತಾಂಶ ಟಾಪ್‌ 10 ಒಳಗೆ ಬರಬೇಕೆನ್ನುವ ಉದ್ದೇಶದಿಂದ ಪಿಯು ಇಲಾಖೆಯು ಮೈಸೂರನಲ್ಲಿ ಸಾಕಷ್ಟು ಕಸರತ್ತುಗಳನ್ನು ಮಾಡಿದೆ. ವರ್ಷಪೂರ್ತಿ ಅನೇಕ ಸಿದ್ಧತಾ ಕಾರ್ಯಕ್ರಮಗಳನ್ನು ನಡೆಸಿದೆ. ವಿದ್ಯಾರ್ಥಿಗಳಿಗಷ್ಟೇ ತರಬೇತಿ ನೀಡಿದರೆ ಸಾಲದೆಂದು ಶಿಕ್ಷಕರನ್ನೂ ತರಬೇತಿಗೆ ಒಡ್ಡಿದೆ. ಆದರೆ, ಫಲಿತಾಂಶ ಮಾತ್ರ ಇಳಿಕೆ ಕ್ರಮದಲ್ಲೇ ಮುಂದುವರೆದಿದ್ದು ರಾಜ್ಯಮಟ್ಟದಲ್ಲಿ ಮುಜುಗರಕ್ಕೆ ಈಡಾಗುವಂತೆ ಆಗಿದೆ.

ಶೈಕ್ಷಣಿಕ ‘ಹಬ್‌’ ಆದರೇನು ಪ್ರಯೋಜನ?: ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಸ್ವಾತಂತ್ರ್ಯ ಪೂರ್ವದಿಂದಲೂ ಮುಂಚೂಣಿ ಸ್ಥಾನವನ್ನೇ ಪಡೆದುಕೊಂಡಿದೆ. ಮಹಾರಾಜರಿಂದ ಪೋಷಿತವಾದ ಶಾಲಾ– ಕಾಲೇಜುಗಳೇ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಸ್ವಾತಂತ್ರ್ಯಾನಂತರವೂ ಅತ್ಯುತ್ತಮ ಶಾಲಾ – ಕಾಲೇಜುಗಳು ನಗರದಲ್ಲಿ ತಲೆ ಎತ್ತಿವೆ. ಆದರೂ, ಫಲಿತಾಂಶಗಳಲ್ಲಿ ಮಾತ್ರ ಮೈಸೂರು ಹಿಮ್ಮುಖ ಪಯಣ ಮಾಡಿದೆ.

ಕಳೆದ 5 ವರ್ಷಗಳಲ್ಲಿ ನಗರದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ದುಪಟ್ಟಾಗಿದೆ. ಸಿಬಿಎಸ್‌ಇಗೆ ಸೇರಿದ 50ಕ್ಕೂ ಹೆಚ್ಚು ಪ್ರತಿಷ್ಠಿತ ಶಾಲೆಗಳಿವೆ. ರಾಜ್ಯ ಪಠ್ಯಕ್ರಮಕ್ಕೆ ಸೇರಿದ ಇಷ್ಟೇ ಸಂಖ್ಯೆಯ ಖಾಸಗಿ ಶಾಲೆಗಳೂ ಇವೆ. ಅಂತೆಯೇ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳಲ್ಲೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಒಟ್ಟಾರೆಯಾಗಿ ಶಾಲಾಮಟ್ಟದಲ್ಲಿ ಉತ್ತಮ ತಳಪಾಯವಿದ್ದರೂ, ಪಿಯು ಫಲಿತಾಂಶಕ್ಕೆ ಬರುವಷ್ಟರಲ್ಲಿ ಫಲಿತಾಂಶ ಕಳಪೆಯಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಡಿಪಿಯು ಡಾ.ದಯಾನಂದ, ‘ಮೈಸೂರಿನಲ್ಲಿ ಶೈಕ್ಷಣಿಕ ವಾತಾವರಣ ಮನೆ ಮನೆಯಿಂದಲೇ ಸಾಧಾರಣ ಮಟ್ಟದ್ದಾಗಿದೆ. ದಕ್ಷಿಣ ಕನ್ನಡ, ಉಡುಪಿಯಂತಹ ಜಿಲ್ಲೆಗಳಲ್ಲಿ ಹಲವು ತಲೆಮಾರುಗಳಿಂದಲೂ ಉತ್ತಮ ಶಿಕ್ಷಣ ಸಿಕ್ಕಿರುವ ಕಾರಣ ಪೋಷಕರು ಮಕ್ಕಳಿಗೆ ಕಲಿಕೆಗೆ ಹೆಗಲು ಕೊಡುತ್ತಾರೆ. ಅಂತೆಯೇ, ಅಲ್ಲಿನ ಕಾಲೇಜುಗಳಲ್ಲೂ ಶ್ರೇಷ್ಠ ಶಿಕ್ಷಣ ಪದ್ಧತಿ ಇದೆ. ಮೈಸೂರಿನಲ್ಲಿ ಇದರ ಕೊರತೆ ಇರುವ ಕಾರಣದಿಂದಲೇ ಫಲಿತಾಂಶ ಹೆಚ್ಚಳದಲ್ಲಿ ಸಾಧನೆ ಮಾಡಲಾಗುತ್ತಿಲ್ಲ’ ಎಂದು ವಿಶ್ಲೇಷಿಸಿದರು.

‘ನಾವು ಈ ವರ್ಷ ರಜೆ ದಿನಗಳಲ್ಲೂ ತರಗತಿಗಳನ್ನು ತೆಗೆದುಕೊಂಡಿದ್ದೆವು. ಸರ್ಕಾರಿ ಪಿಯು ಕಾಲೇಜುಗಳಲ್ಲಿ ‘ವಿಶ್ವಾಸ ಕಿರಣ’ ಎಂಬ ಇಂಗ್ಲಿಷ್ ಕಲಿಕೆ ಕೋ‌ರ್ಸ್‌ಗಳನ್ನು ಎಸ್ಸಿ, ಎಸ್ಟಿ ಬಳಿಕ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ನಡೆಸಿದ್ದೆವು. ಅಲ್ಲದೇ, ಕಲಿಕೆಗೆ ವಿಜ್ಞಾನದ ಸ್ಪರ್ಶವನ್ನು ನೀಡಿ ತಾಂತ್ರಿಕ ಪ್ರೇರಿತ ಕಲಿಕಾ ವಿಧಾನ (ಟಿಎಎಲ್‌ಪಿ) ಅಳವಡಿಸಿಕೊಂಡು, ನುರಿತ ಶಿಕ್ಷಕರಿಂದ ಪಾಠದ ವಿಡಿಯೊ ಸಿ.ಡಿ.ಗಳನ್ನು ಮಕ್ಕಳಿಗೆ ನೀಡಿದ್ದೆವು. ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರೆ ಸಾಲದೆಂದು ಶಿಕ್ಷಕರಿಗೂ ತರಬೇತಿ ಕೊಡಿಸಿದ್ದೆವು. ಇಷ್ಟೆಲ್ಲಾ ಆದರೂ, ಕಳೆದ ಸಾಲಿಗಿಂತ ಕೇವಲ 2 ಸ್ಥಾನ (ಈ ವರ್ಷ 15ನೇ ಸ್ಥಾನ) ಮಾತ್ರ ಏರಿಕೆಯಾಗಿರುವುದು ಬೇಸರ ಮೂಡಿಸಿದೆ’ ಎಂದರು.

ಕುಸಿದ ಗ್ರಾಮಾಂತರ ವಿದ್ಯಾರ್ಥಿಗಳು:

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಈ ಬಾರಿ ಫಲಿತಾಂಶದಲ್ಲಿ ಹಿಂದೆ ಸರಿದಿದ್ದಾರೆ. ಒಟ್ಟಾರೆ 4,110 ವಿದ್ಯಾರ್ಥಿಗಳ ಪೈಕಿ 2521 (ಶೇ 61.34) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ, ನಗರ ಪ್ರದೇಶದ ವಿದ್ಯಾರ್ಥಿಗಳು ಕೊಂಚ ವಾಸಿ. ಶೇ 69.76 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದಕ್ಕೆ ಕಾರಣ ಈ ವರ್ಷ ಜೀವವಿಜ್ಞಾನ ಪ್ರಶ್ನೆಪತ್ರಿಕೆ ಅತಿ ಕಠಿಣವಾಗಿದ್ದುದು. ಸಾಮಾನ್ಯವಾಗಿ ಗಣಿತ ಹಾಗೂ ಇಂಗ್ಲಿಷ್‌ ಕಬ್ಬಿಣದ ಕಡಲೆ ಎಂದು ಭಾವಿಸಲಾಗುತ್ತದೆ. ಹಾಗಾಗಿ, ತರಬೇತಿ ಈ ವಿಷಯಗಳಿಗೇ ಹೆಚ್ಚು ಕೇಂದ್ರೀಕೃತವಾಗಿತ್ತು. ಆದರೆ, ಈ ವರ್ಷ ಜೀವವಿಜ್ಞಾನ ಪ್ರಶ್ನೆಪತ್ರಿಕೆ ಕ್ಲಿಷ್ಟಕರವಾದದ್ದು ಫಲಿತಾಂಶಕ್ಕೆ ಅತೀವ ಹೊಡೆತ ನೀಡಿದೆ.

ಕಲಾ ವಿದ್ಯಾರ್ಥಿಗಳೇ ಕಾರಣ!:

ಫಲಿತಾಂಶ ಕುಸಿಯಲು ಕಲಾ ವಿದ್ಯಾರ್ಥಿಗಳೇ ಕಾರಣ ಎನ್ನುವುದು ಆರೋಪ. ಮೈಸೂರಿನಲ್ಲಿ ಒಟ್ಟು 7,511 ವಿದ್ಯಾರ್ಥಿಗಳ ಪೈಕಿ 4,251 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಹಾಗಾಗಿ, ಕೇವಲ ಶೇ 56.86 ಫಲಿತಾಂಶ ಸಿಕ್ಕಿದೆ. ಆದರೆ, ವಾಣಿಜ್ಯ ಶೇ 74.77 ಹಾಗೂ ವಿಜ್ಞಾನ ಶೇ 70.58 ಫಲಿತಾಂಶ ಸಿಕ್ಕಿದೆ. ಕಲಾ ವಿಭಾಗದ ಕಳಪೆ ಪ್ರದರ್ಶನದಿಂದಾಗಿ ಒಟ್ಟಾರೆ ಫಲಿತಾಂಶ ಶೇ 68.55 ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !