ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಗುರು ಶಂಕರಾಚಾರ್ಯರ ಮೂರ್ತಿ ಕೆತ್ತಿದ ಮೈಸೂರು ಶಿಲ್ಪಿಗಳು

ಉತ್ತರಾಖಂಡ ಕೇದಾರನಾಥದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಬೃಹತ್‌ ಮೂರ್ತಿ ಸ್ಥಾಪನೆಗೆ ಸಿದ್ಧತೆ
Last Updated 13 ಜೂನ್ 2021, 3:26 IST
ಅಕ್ಷರ ಗಾತ್ರ

ಮೈಸೂರು: ಉತ್ತರಾಖಂಡದ ಶ್ರೀಕ್ಷೇತ್ರ ಕೇದಾರನಾಥ ದೇವಾಲಯದ ಸಮೀಪ ಆದಿಗುರು ಶಂಕರಾಚಾರ್ಯರು ಐಕ್ಯವಾದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುವ 12.5 ಅಡಿ ಎತ್ತರದ ಶಂಕರಾಚಾರ್ಯರ ಮೂರ್ತಿಯನ್ನು ಮೈಸೂರಿನ ಶಿಲ್ಪಿಗಳು ಕೆತ್ತುತ್ತಿದ್ದು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಮೈಸೂರಿನ ಕಶ್ಯಪ ಶಿಲ್ಪಕಲಾ ನಿಕೇತನದ ಶಿಲ್ಪಿ ಅರುಣ್‌ ಯೋಗಿರಾಜ್ ಮತ್ತು 9 ಜನ ಸಹ ಶಿಲ್ಪಕಲಾಕಾರರು ಕೆತ್ತಿದ್ದು, ಇದಕ್ಕೆ ಅರುಣ್ ಅವರ ತಂದೆ ಬಿ.ಎಸ್. ಯೋಗಿರಾಜ್‌ ಮಾರ್ಗದರ್ಶನ ನೀಡಿದ್ದಾರೆ.

ಕೇದಾರನಾಥ ದೇವಸ್ಥಾನದ ಹಿಂಭಾಗದಲ್ಲಿರುವ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ‘ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮ್ಯೂಜಿಯಂ (ವಸ್ತು ಸಂಗ್ರಹಾಲಯ)’ನ ಜಾಗದಲ್ಲಿ ಪ್ರತಿಷ್ಠಾಪಿಸಲಿರುವ ಕೃಷ್ಣಶಿಲೆಯ ಬೃಹತ್ ಮೂರ್ತಿಯ ಕೆತ್ತನೆ ಕಾರ್ಯ ಕಳೆದ 9 ತಿಂಗಳಿಂದ ಮೈಸೂರಿನಲ್ಲಿ ನಡೆಯುತ್ತಿದ್ದು ದಿನಕ್ಕೆ ಸುಮಾರು 12 ಗಂಟೆ ಕಾಲ ಕೆತ್ತುತ್ತಿದ್ದಾರೆ.

ಕೇದಾರನಾಥನಲ್ಲಿ ಪ್ರತಿಷ್ಠಾಪನೆಯಾಗಲಿರುವಶಂಕರಾಚಾರ್ಯರ 12.5 ಅಡಿ ಎತ್ತರದಮೂರ್ತಿ
ಕೇದಾರನಾಥನಲ್ಲಿ ಪ್ರತಿಷ್ಠಾಪನೆಯಾಗಲಿರುವಶಂಕರಾಚಾರ್ಯರ 12.5 ಅಡಿ ಎತ್ತರದಮೂರ್ತಿ

ಮೂರ್ತಿಯ ತೂಕ 30 ಟನ್: ಸುಮಾರು 120 ಟನ್‌ ಕಲ್ಲನ್ನು ಕೆತ್ತುತ್ತಾ ಬಂದಿರುವ ಕಲಾವಿದರು ಕೆಲಸ ಸಂಪೂರ್ಣ ಪೂರ್ಣಗೊಂಡಾಗ 30 ಟನ್‌ ತೂಗಲಿದೆ. ಶಂಕರಾಚಾರ್ಯರು ಜ್ಞಾನಸ್ಥರಾಗಿ ಕುಳಿತ ಭಂಗಿಯಲ್ಲಿ ಇರುವ ಮೂರ್ತಿ 10.5 ಅಡಿ ಮತ್ತು ಪೀಠ 2 ಅಡಿ ಸೇರಿ ಒಟ್ಟು 12.5 ಅಡಿ ಎತ್ತರವಾಗಲಿದೆ. 8.5 ಅಡಿ ಅಗಲ ಇದೆ.

ಪಿ.ಎಂ. ಕನಸಿನ ಯೋಜನೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ‘ಶ್ರೀ ಶಂಕರಾಚಾರ್ಯರ ಅಧ್ಯಯನ ಪೀಠ ಮತ್ತು ಮೂಜಿಯಂ’. 2017ರಲ್ಲಿ ಆದಿಗುರುಗಳ ಸುಂದರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ದೇಶದ ನಾನಾ ರಾಜ್ಯಗಳ 18 ಶಿಲಾಶಿಲ್ಪಕಾರರ ಮಾಹಿತಿ ಪಡೆಯಲಾಗಿತ್ತು. ಅದಕ್ಕೆ ಕರ್ನಾಟಕದಿಂದ ಮೈಸೂರಿನ ಅರುಣ್‌ ಯೋಗಿರಾಜ್ ಅವರ ಹೆಸರಿತ್ತು. ಎಲ್ಲರ ಕೆಲಸದ ಮಾಹಿತಿಯನ್ನು ಖುದ್ದಾಗಿ ನೋಡಿದ ಪ್ರಧಾನಿಗಳು ಇವರನ್ನು ಆಯ್ಕೆ ಮಾಡಿದರು. ಸೆಪ್ಟೆಂಬರ್‌ನಲ್ಲಿ ಒಪ್ಪಿಗೆ ನೀಡಿದರು. ನಂತರ ಶಂಕರಾಚಾರ್ಯರ ಎರಡೂವರೆ ಅಡಿ ಮಾದರಿ ಮೂರ್ತಿಯನ್ನು ಅರುಣ್‌ ಮಾಡಿಕೊಟ್ಟರು. ಇದೇ ರೀತಿ ಇರಬೇಕು ಎಂದು ಹೇಳಿದ್ದಾರೆ.

‘ಬಳ್ಳಾರಿಯ ಜಿಂದಾಲ್‌ ಸ್ಟೀಲ್ (ಜೆಎಸ್‌ಡಬ್ಲ್ಯೂ) ಅವರು ಈ ಯೋಜನೆಯ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದು, ಜೆಎಸ್‌ಡಬ್ಲ್ಯೂ ಸ್ಟೀಲ್‌ ಅಧ್ಯಕ್ಷರಾದ ಸಂದೀಪ್‌ ಗೋಖಲೆ ಅವರು ಪ್ರಧಾನಮಂತ್ರಿಗಳ ಕಚೇರಿಯಿಂದ ಒಪ್ಪಿಗೆ ನೀಡಿದ್ದಾರೆ ನಿಮ್ಮ ಕಾರ್ಯ ಆರಂಭಿಸಬಹುದು ಎಂದು ಹೇಳಿದ ನಂತರ, ಮೂರ್ತಿ ಕೆತ್ತನೆ ವಿಧ್ಯುಕ್ತವಾಗಿ ಶುರುವಾಯಿತು’ ಎಂದು ಶಿಲ್ಪಿ ಅರುಣ್‌ ಯೋಗಿರಾಜ್ ಹೇಳಿದರು.

ಶಿಲ್ಪಿ ಅರುಣ್‌ ಯೋಗಿರಾಜ್
ಶಿಲ್ಪಿ ಅರುಣ್‌ ಯೋಗಿರಾಜ್

ಕೃಷ್ಣಶಿಲೆಯ ವಿಶೇಷ: ಬೃಹತ್‌ ಮೂರ್ತಿಗಳನ್ನು ಕೆತ್ತಲು ತುಂಬಾ ಮೃದುವಾದ ಬಳಪದ ಕಲ್ಲನ್ನು ಬಳಸುವುದಿಲ್ಲ. ಕೃಷ್ಣಶಿಲೆಯನ್ನೇ ಬಳಸಲಾಗುವುದು. ಏಕೆಂದರೆ ಬಿಸಿಲು, ಗಾಳಿ, ಮಳೆ, ಚಳಿ, ಬೆಂಕಿ ಹೀಗೆ ಎಲ್ಲ ವಾತಾವರಣದಲ್ಲೂ ಈ ಶಿಲೆಗೆ ಏನಾಗುವುದಿಲ್ಲ. ಮೂರ್ತಿ ಹಳೆಯದಾದಂತೆ ಇದು ಗಟ್ಟಿಯಾಗುತ್ತದೆ ಅಷ್ಟೇ ಅಲ್ಲ, ನಾದವೂ ಚನ್ನಾಗಿ ಬರುತ್ತದೆ ಎಂದು ಮಾರ್ಗದರ್ಶಕರಾದ ಬಿ.ಎಸ್‌.ಯೋಗಿರಾಜ್‌ ಶಿಲ್ಪಿ ಅವರು ಹೇಳಿದರು.

ಐದು ತಲೆಮಾರು: ಐದು ತಲೆಮಾರಿನಿಂದ ಶಿಲ್ಪಕಲೆಯನ್ನು ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮ ಕಲಾವಿದರ ಮನೆತನ ಇವರದು. ಇವರ ಮುತ್ತಾತ ಚೌಡಯ್ಯ ಶಿಲ್ಪಿ, ಮೈಸೂರು ಆಸ್ಥಾನ ಶಿಲ್ಪಿ ಬಸಪ್ಪ ಶಿಲ್ಪಿ, ಬಿ.ಬಸವಣ್ಣ ಶಿಲ್ಪಿ (ರಾಷ್ಟ್ರಪ್ರಶಸ್ತಿ ಪುರಸ್ಕೃತರು), ಬಿ.ಎಸ್. ಯೋಗಿರಾಜ್ ಈಗ ಅರುಣ್‌ ಯೋಗಿರಾಜ್ ಅವರು ಭಾರತ ಸರ್ಕಾರದಿಂದ ದಕ್ಷಿಣ ಭಾರತ ಯುವ ಪ್ರತಿಭೆ ಪುರಸ್ಕೃತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT