ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಗುಜರಿ ಸೇರಿದ ‘ಬದುಕು’

Last Updated 7 ಸೆಪ್ಟೆಂಬರ್ 2020, 7:22 IST
ಅಕ್ಷರ ಗಾತ್ರ
ADVERTISEMENT
""

ಮೈಸೂರು: ಕಣ್ಣಿಗೆ ಕಾಣದ ಒಂದು ವೈರಾಣುಹಲವರ ದುಡಿಮೆ ಕಿತ್ತುಕೊಂಡಿದ್ದು ಮಾತ್ರವಲ್ಲ; ಇಡೀ ‘ಬದುಕು’ನ್ನು ಗುಜರಿ ಪಾಲಾಗಿಸುವ ಹಂತ ತಲುಪಿಸಿದೆ.

ಇದನ್ನೇ ಕೆಲವರು ಪಾಠ ಕಲಿಸಿದೆ ಎನ್ನುತ್ತಾರೆ. ಬದುಕನ್ನು ಅರ್ಥ ಮಾಡಿಸಿದೆ ಎಂದು ವ್ಯಾಖ್ಯಾನಿಸುತ್ತಾರೆ. ಆದರೆ, ಕಳೆದುಕೊಂಡವರಿಗಷ್ಟೇ ಗೊತ್ತು ಆ ನೋವು, ಆ ಆಘಾತ.

ದಿನದ ಊಟಕ್ಕಿಷ್ಟು, ಹೆಂಡತಿ, ಮಕ್ಕಳ ಬಟ್ಟೆಗಿಷ್ಟು, ಅವರ ಓದಿಗಿಷ್ಟು ಎಂದು ಲೆಕ್ಕ ಹಾಕುತ್ತಲೇ ಮೈಸೂರುನಗರದ ಬೀದಿಗಳಲ್ಲಿ ಟಾಂಗಾ ಗಾಡಿ ಓಡಿಸುತ್ತಿದ್ದವರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಅವರ ಟಾಂಗಾ ಗಾಡಿಗಳು ಗುಜರಿ ಸೇರುತ್ತಿವೆ. ಇಡೀ ದಿನ ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕಾದರೂ ಜನರು ಅರ್ಥಾತ್‌ ಗ್ರಾಹಕರು ಬರದಿದ್ದರೆ ಇವರೇನು ಮಾಡುತ್ತಾರೆ?

ಕೋವಿಡ್‌ ಸಮಯದ ಲಾಕ್‌ಡೌನ್ ವೇಳೆಏನು ಮಾಡಿದರೆ ಎಂದು ಕೇಳಿದರೆ, ಅವರ ಉತ್ತರ ಕಣ್ಣೀರು! ಕಣ್ಣೀರು! ಕಣ್ಣೀರು!

ಕೊರೊನಾ ವೈರಾಣುವಿನ ಅಟ್ಬಹಾಸಕ್ಕೆ ಮುನ್ನವೇ ಟಾಂಗಾ ವಾಲಾಗಳ ಬದುಕು ಅಯೋಮಯವಾಗಿತ್ತು.ಆಟೊಗಳ ಸಂಖ್ಯೆ ಹೆಚ್ಚಳ, ಕಾರು, ಬಸ್ಸಿನ ಅವಲಂಬನೆ, ಪ್ರವಾಸಿಗರ ಅನಾಸಕ್ತಿ ಹಾಗೂ ಪ್ರೋತ್ಸಾಹದ ಕೊರತೆಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಸಾಂಪ್ರದಾಯಿಕ ಟಾಂಗಾ ಗಾಡಿ ಅವನತಿ ಹಾದಿ ಹಿಡಿದಿದ್ದವು.

ಪ್ರವಾಸಿಗರಿಂದ ಬೇಡಿಕೆ ಕಡಿಮೆ ಆಗುತ್ತಿದ್ದು, ನಿತ್ಯದ ಖರ್ಚು ಹೆಚ್ಚಳವಾಗುತ್ತಿರುವ ಕಾರಣ ತಮ್ಮ ಗಾಡಿಗಳನ್ನು ಗುಜರಿಗೆ ಹಾಕಿ ಕೂಲಿ ಮೊರೆ ಹೋಗುತ್ತಿದ್ದಾರೆ.ಅಲ್ಲಾದರೂ ಒಂದಿಷ್ಟು ಹಣ ಸಿಗಬಹುದೆಂಬ ಭರವಸೆ.ಪ್ರವಾಸಿಗರನ್ನೇ ನಂಬಿ ಬದುಕುತ್ತಿರುವ ಕೆಲವರು ಟಾಂಗಾ ಸವಾರಿ ವೃತ್ತಿಯಿಂದ ಹಿಂದೆ ಸರಿಯುತ್ತಿದ್ದಾರೆ.ಕೋವಿಡ್‌–19 ಅಬ್ಬರದಬಳಿಕ ಜನರು ಈ ಗಾಡಿಗಳನ್ನು ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟಕ್ಕೂ ಈಗ‍ಪ್ರವಾಸಿಗರೆಲ್ಲಿದ್ದಾರೆ?

‘ಒಂದು ಟಾಂಗಾ ಗಾಡಿ ಖರೀದಿಸಲು ₹ 60ಸಾವಿರ ಬೇಕು. ಹಿಂದೆಲ್ಲಾ ದಿನಕ್ಕೆ₹ 300ರಿಂದ 400 ಬಾಡಿಗೆ ಸಿಗುತಿತ್ತು. ಅದರಲ್ಲಿ ಕುದುರೆಗೆ ಆಹಾರಕ್ಕೆಂದು ₹ 100, ನಮ್ಮ ಊಟಕ್ಕೆಂದು ₹ 100 ಖರ್ಚಾಗುತ್ತದೆ. ಒಮ್ಮೊಮ್ಮೆ ಬೋಣಿಗೆಯೂ ಸಿಗದ ದಿನಗಳಿವೆ. ಗಾಡಿ ರಿಪೇರಿಗೆ ಬಂದರೆ, ಕುದುರೆ ಖಾಯಿಲೆ ಬಿದ್ದರೆ ಕಥೆ ಮುಗಿಯಿತು. ಈಗ ದಿನಕ್ಕೆ ₹ 100 ಕೂಡ ಸಿಗುತ್ತಿಲ್ಲ’ ಎಂದುಮಂಡಿಮೊಹಲ್ಲಾದ ಸಾದಿಕ್‌ಹೇಳುತ್ತಾರೆ.

‘ಗಾಡಿಯನ್ನು ಗುಜರಿಗೆ ಹಾಕಿದ್ದೇನೆ. ₹ 25 ಸಾವಿರ ಕೊಟ್ಟು ಖರೀದಿಸಿದ್ದ ಕುದುರೆಯನ್ನು ₹ 12 ಸಾವಿರಕ್ಕೆ ಮಾರಿ ಗುಜರಿಯಲ್ಲಿ ಕಬ್ಬಿಣ ಮುರಿಯುವ ಕೆಲಸಕ್ಕೆ ಸೇರಿದ್ದೇನೆ’ಎನ್ನುತ್ತಾರೆ.

ಕೆಲ ವರ್ಷಗಳ ಹಿಂದೆ ಅರಮನೆ ಬೀದಿಗಳಲ್ಲಿ 100ಕ್ಕೂ ಅಧಿಕ ಟಾಂಗಾಗಳು ಸಂಚರಿಸುತ್ತಿದ್ದವು. ಈಗ ಆ ಸಂಖ್ಯೆ 50ಕ್ಕೆ ಕುಸಿದಿದೆ. ಕೋವಿಡ್‌ ಹೊಡೆತ ತಾಳಲಾರದೆ ಮತ್ತಷ್ಟು ಮಂದಿ ’ಟಾಂಗಾ’ಬಿಟ್ಟು ಹೊರಬರಲು ಸಿದ್ಧವಾಗುತ್ತಿದ್ದಾರೆ.ವರ್ಷಗಳ ಹಿಂದೆ ಮಹಾನಗರ ಪಾಲಿಕೆಯಿಂದ ಸಾಲಕ್ಕೆ ಸಾರೋಟಗಳನ್ನು ವಿತರಿಸಿದ ಮೇಲೆ ಟಾಂಗಾ ಗಾಡಿಗಳ ವೃತ್ತಿದಾರರಿಗೆ ಮತ್ತಷ್ಟು ಹೊಡೆತ ಬಿದ್ದಿದೆ. ಪ್ರವಾಸಿಗರು ನಗರ ಸುತ್ತಲು ಟಾಂಗಾ ಗಾಡಿಗಿಂತ ಸಾರೋಟಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

‘ಸಾರೋಟ ಗಾಡಿ ಪಡೆದವರು ಪ್ರತಿ ತಿಂಗಳು ₹ 6,000 ಸಾಲ ತೀರಿಸಬೇಕು. ಕೆಲವೊಮ್ಮೆ ಅಷ್ಟು ಆದಾಯ ಕೂಡ ಬಂದಿರಲಿಲ್ಲ. ಆಗ ತುಂಬಾ ತೊಂದರೆಯಾಗುತ್ತದೆ. ಸಾಲ ಕಟ್ಟದಿದ್ದರೆ ಬ್ಯಾಂಕ್‌ನವರು ಮನೆ ಬಾಗಿಲಿಗೆ ಬರುತ್ತಾರೆ’ ಎಂದು ಉದಯಗಿರಿಯ ಫಾರೂಕ್‌ ನುಡಿಯುತ್ತಾರೆ.

‘ಅಷ್ಟೇ ಅಲ್ಲ; ಅರಮನೆ ಮುಂದೆ ಟಾಂಗಾ ಗಾಡಿ ನಿಲ್ಲಿಸಲು ಪೊಲೀಸರು ಅವಕಾಶ ನೀಡಲ್ಲ. ಹೆಚ್ಚು ಹೊತ್ತು ನಿಲ್ಲಿಸಿದರೆ ದುಡ್ಡು ಕೇಳುತ್ತಾರೆ. ಹೀಗಾದರೆ, ನಮ್ಮ ಪಾಡೇನು’ ಎಂದು ಪ್ರಶ್ನಿಸುತ್ತಾರೆ.

ಮುತ್ತಾತನ ಕಾಲದಿಂದಲೂ ಟಾಂಗಾ ವೃತ್ತಿಯಲ್ಲೇ ಇವರ ಬದುಕು ಸಾಗುತ್ತಿದೆ. ಹಿಂದಿನವರೆಲ್ಲಾ ಇದರಿಂದ ಬರುವ ಆದಾಯದಲ್ಲೇಮನೆ ಕಟ್ಟಿ ಮಕ್ಕಳನ್ನು ಸಾಕಿದ್ದಾರೆ. ಅವರ ಮಕ್ಕಳೂಇದೇ ವೃತ್ತಿಯನ್ನು ಮುಂದುವರಿಸಿದ್ದು, ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. ಏಕೆಂದರೆ,ಈಗ ಪರಿಸ್ಥಿತಿ ಬದಲಾಗಿದೆ.

ಬಸ್ಸು, ಕಾರುಗಳ ಮಧ್ಯೆರಸ್ತೆಯಲ್ಲಿ ಟಾಂಗಾ ಓಡಿಸುವಾಗ ಕುದುರೆ ಕಾಲಿಗೆ ಏಟಾದರೆ ಬಂದ ಹಣವೆಲ್ಲಾ ಚಿಕಿತ್ಸೆಗೆ ಹೋಗುತ್ತದೆ. ಟಾಂಗಾಗಳಿಗೆಂದು ಪ್ರತ್ಯೇಕ ಪಥವೂ ಇಲ್ಲ.

‘ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದರಷ್ಟೇ ನಮಗೆ ಆದಾಯ. ಆದರೆ, ಈಗ ಪ್ರವಾಸಿಗರ ಸಂಖ್ಯೆಯೂ ಕುಸಿಯುತ್ತಿದೆ. ಅಂಬಾವಿಲಾಸ ಅರಮನೆ ಹಾಗೂ ಮೃಗಾಲಯ ಮುಂಭಾಗ ಬಿಟ್ಟರೆ ಬೇರೆಲ್ಲೂ ಪ್ರವಾಸಿಗರ ಟಾಂಗಾ ಹತ್ತಲ್ಲ. ನಿಲ್ದಾಣವೂ ಇಲ್ಲ’ ಎಂದಿದ್ದು ಸಂತೋಷ್‌ ನಾಯಕ್‌.

ಇನ್ನು ದಸರಾ ಬಂತೆಂದರೆ ಇವರ ಪಾಲಿಗೆ ಉತ್ಸವ, ದೊಡ್ಡ ಹಬ್ಬ. ಏಕೆಂದರೆ ಆ ಸಮಯದಲ್ಲಿ ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಿರುತ್ತಾರೆ. ಹೆಚ್ಚು ಬಾಡಿಗೆ ದೊರೆಯುತ್ತದೆ.ಆದರೆ, ಈಗ ಅದಕ್ಕೂ ಕೊಕ್ಕೆ ಬಿದ್ದಿದೆ. ಈ ಬಾರಿ ಸರಳ ದಸರೆ ಜೊತೆಗೆ ಜನರಿಗೆ ಕೊರೊನಾ ಭಯ.

ಸಂಸ್ಕೃತಿಯ ಸಂಕೇತ: ಟಾಂಗಾ ಗಾಡಿಗಳುಮೈಸೂರು ಸಂಸ್ಕೃತಿಯ ಭಾಗ. ಹಿಂದೆ ಮೈಸೂರು ಸಂಸ್ಥಾನದ ರಾಜರು ಇವರಿಗೆ ವಿಶೇಷ ಗೌರವ, ಪ್ರೋತ್ಸಾಹ ನೀಡುತ್ತಿದ್ದರು.ನಗರಕ್ಕೆ ಆಟೊಗಳು ಬರುವುದಕ್ಕೆ ಹತ್ತಾರು ವರ್ಷಗಳ ಮೊದಲೇ ಟಾಂಗಾ ಗಾಡಿಗಳಿದ್ದವು. ರಾಜರು ವಾಯುವಿಹಾರಕ್ಕೆಂದು ಟಾಂಗಾಗಳಲ್ಲೇ ತೆರಳುತ್ತಿದ್ದರು.

ಅದೆಲ್ಲಾ ಇತಿಹಾಸ ಬಿಡಿ. ನೆನಪಿಸಿಕೊಂಡರೆ ಪ್ರಯೋಜನವೇನಿಲ್ಲ. ಈಗ ಬೀದಿ ಪಾಲಾಗಿರುವ ಇವರ ಬದುಕಿನ ಬಗ್ಗೆಯಷ್ಟೇ ಮರುಕಪಡಬೇಕಿದೆ.ಕೋವಿಡ್‌ ಲಾಕ್‌ಡೌನ್ ಸಮಯದಲ್ಲಿನ ನಷ್ಟ ತುಂಬಿಸಲು ಆಟೊದವರಿಗೆ, ಕ್ಷೌರಿಕರಿಗೆ, ದೋಭಿಯವರಿಗೆ ಸರ್ಕಾರ ಒಂದಿಷ್ಟು ಹಣವಾದರೂ ನೀಡುತ್ತಿದೆ. ಆದರೆ, ಈ ಟಾಂಗಾ ವಾಲಾಗಳ ಕಣ್ಣೀರು ಒರೆಸುವವರು ಯಾರು? ಅವರ ಪಾಡು ಕೇಳುವವರು ಯಾರು?

ಇನ್ನೇನು ಮಾಡುತ್ತಾರೆ ಟಾಂಗಾವನ್ನು ಗುಜರಿಗೆ ಹಾಕಿ ಕಬ್ಬಿಣ ಮುರಿಯುವಅಂಗಡಿ ಸೇರುತ್ತಾರೆ. ಬದುಕು ಜರ್ಜರಿತಗೊಂಡಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT