ಬುಧವಾರ, ಆಗಸ್ಟ್ 5, 2020
26 °C
ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ಕಾರ್ಯಕ್ರಮ

ಮೈಸೂರು: ಕೊರೊನಾ ತಡೆಗಟ್ಟಲು ಮನೆ ಮದ್ದು ಬಳಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೋವಿಡ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಡೆಗಟ್ಟಲಿಕ್ಕಾಗಿ ಮನೆ ಮದ್ದುಗಳನ್ನು ಬಳಸಬೇಕು’ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಂ ಹೇಳಿದರು.

ಶಾರದಾದೇವಿ ನಗರದಲ್ಲಿರುವ ತಮ್ಮ ನಿವಾಸದ ಬಳಿ ಬುಧವಾರ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟದ ವತಿಯಿಂದ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ಮನೆಯಲ್ಲೇ ಮದ್ದು ಜಾಗೃತ ಅಭಿಯಾನಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

‘ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸುವಂತೆ ಸ್ವತಃ ನಾವುಗಳೇ ಸಾಧ್ಯವಾದಷ್ಟು ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ’ ಎಂದರು.

‘ಶೀತ, ತಲೆನೋವು, ಜ್ವರ, ಕೆಮ್ಮಿಗೆ ಹಿಂದಿನಿಂದಲೂ ಮನೆ ಮದ್ದು ಮಾಡಿಕೊಂಡು ಬರಲಾಗುತ್ತಿದೆ. ಇದು ಪೂರ್ವಿಕರು ತಮ್ಮ ಅನುಭವದಿಂದ ಕಲಿಸಿಕೊಟ್ಟಿರುವ ಪಾಠ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಶೀತ, ತಲೆನೋವು, ಕೆಮ್ಮು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಾವು ಮುಂದಾಗಬೇಕಿದೆ’ ಎಂದು ಸಲಹೆ ನೀಡಿದರು.

ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಮಾತನಾಡಿ, ‘ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಾವುಗಳು ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ’ ಎಂದರು.

ಡಾ.ಸೋಮಶೇಖರ್‌ಗೌಡ ನೇತೃತ್ವದಲ್ಲಿ ಹಸುವಿನ ಸಗಣಿ, ಗಂಜಲ, ಬೇವಿನ ಸೊಪ್ಪು ರಸ, ಅರಿಶಿಣದ ಪುಡಿ ಸೇರಿದಂತೆ ಇತರೆ ಮನೆಯ ವಸ್ತುಗಳನ್ನು ಸೇರಿಸಿ ಆ ಮಿಶ್ರಣವನ್ನು ಮನೆ ಆವರಣದಲ್ಲಿ ಸಿಂಪಡಿಸಲಾಯಿತು.

ಪಾಲಿಕೆಯ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಪಾಲಿಕೆ ಸದಸ್ಯ ರಮೇಶ್, ಕನ್ನಡ ಸಾಹಿತ್ಯ ಪರಿಷತ್‌ನ ಎಂ.ಚಂದ್ರಶೇಖರ್, ಹರೀಶ್ ಮೊಗಣ್ಣ, ಶರತ್‌ಕುಮಾರ್ ಮತ್ತಿತರರಿದ್ದರು.

ಕಾರ್ಯಕ್ರಮ ರದ್ದು

ಪ್ರೊ.ಕೆ.ಎಸ್.ಭಗವಾನ್ ನಿವಾಸದ ಎದುರು ಜಾಗೃತ ಅಭಿಯಾನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಒಪ್ಪಿಗೆ ಪಡೆಯದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ, ಕಾರ್ಯಕ್ರಮವನ್ನು ಕೆ.ಎಸ್.ಶಿವರಾಂ ನಿವಾಸದ ಬಳಿ ನಡೆಸಲಾಯಿತು. ಭಗವಾನ್ ಕಾರ್ಯಕ್ರಮಕ್ಕೆ ಗೈರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು