ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಿರಾಫೆ ಸಂತತಿ ಅಭಿವೃದ್ಧಿ; ಅಮ್ಮ ‘ಖುಷಿ’, ಮಗಳು ‘ಲಕ್ಷ್ಮಿ’ಯದ್ದೇ ಪಾಲು!

ಮೈಸೂರು ಮೃಗಾಲಯ
Last Updated 29 ಜುಲೈ 2021, 4:52 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜೇಂದ್ರ ಮೃಗಾಲಯ ಜಿರಾಫೆ ಸಂತಾನೋತ್ಪತ್ತಿಯ ಪ್ರಮುಖ ತಾಣವಾಗಿ ಹೊರಹೊಮ್ಮಿದ್ದು, ಐದು ಹೆಣ್ಣು ಸೇರಿದಂತೆ ಇದುವರೆಗೆ 22 ಮರಿಗಳು ಜನಿಸಿವೆ.

ಇದರಲ್ಲಿ ಅಮ್ಮ ‘ಖುಷಿ’ ಹಾಗೂ ಮಗಳು ‘ಲಕ್ಷ್ಮಿ’ ಜಿರಾಫೆಯದ್ದೇ ಹೆಚ್ಚು ಪಾಲು. ಈ ಎರಡೂ ಜಿರಾಫೆಗಳು ಕ್ರಮವಾಗಿ ಆರು ಹಾಗೂ ನಾಲ್ಕು ಮರಿಗಳಿಗೆ ಜನ್ಮ ನೀಡಿವೆ. ಜುಲೈ 12ರಂದು ‘ಲಕ್ಷ್ಮಿ’ ಹಾಗೂ ‘ಭರತ್‌’ ಜೋಡಿಗೆ ಗಂಡು ಜಿರಾಫೆ ಜನಿಸಿದ್ದು, ತಾಯಿ–ಮರಿ ಆರೋಗ್ಯವಾಗಿವೆ. ಸದ್ಯ ಈ ಮೃಗಾಲಯದಲ್ಲಿ ನಾಲ್ಕು ಹೆಣ್ಣು ಹಾಗೂ ಮೂರು ಗಂಡು ಜಿರಾಫೆಗಳಿವೆ.

ಇದಕ್ಕೆ ಕಾರಣ ‘ಖುಷಿ’. ಈ ಜಿರಾಫೆಯನ್ನು ಲಖನೌದಿಂದ ಮೈಸೂರಿಗೆ ತಂದಾಗ ಅದಕ್ಕೆ ಎರಡು ವರ್ಷ. ಇದರಿಂದ ಮೃಗಾಲಯದಲ್ಲಿ ಜಿರಾಫೆ ಸಂತತಿ ಬೆಳೆದಿದ್ದು, ಈಗ ಇದಕ್ಕೆ 16 ವರ್ಷ. 2009ರಲ್ಲಿ ಲಕ್ಷ್ಮಿ, 2012ರಲ್ಲಿ ಭೀಮ್‌, 2013ರಲ್ಲಿ ಬಬಿ, 2015ರಲ್ಲಿ ಭರತ್‌, 2018ರಲ್ಲಿ ತ್ರಿಶಿಕಾ ಹಾಗೂ 2020ರಲ್ಲಿ ಮತ್ತೊಂದು ಮರಿಗೆ ಜನ್ಮ ನೀಡಿತ್ತು.

‘ಜಿರಾಫೆ ಸಂತಾನೋತ್ಪತ್ತಿಗೆ ಮೃಗಾಲಯದಲ್ಲಿ ಉತ್ತಮ ವಾತಾವರಣವಿದೆ. ಸಿಬ್ಬಂದಿ ವರ್ಗ ಕಾಳಜಿ ವಹಿಸುತ್ತಿದ್ದು, ಮೂರು ವರ್ಷಗಳಲ್ಲಿ ಏಳು ಮರಿಗಳು ಜನಿಸಿವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದರೊಂದಿಗೆ ವಿವಿಧ ಮೃಗಾಲಯಗಳಿಗೆ ಜಿರಾಫೆ ಹಸ್ತಾಂತರಿಸುವ ಕೇಂದ್ರವಾಗಿ ಮೈಸೂರು ಮೃಗಾಲಯ ಕೆಲಸ ಮಾಡುತ್ತಿದೆ. ಪ‍್ರಾಣಿಗಳ ವಿನಿಮಯ ಯೋಜನೆಯಡಿ ಜಿರಾಫೆ ಕಳುಹಿಸಿಕೊಡುವಂತೆ ವಿವಿಧ ರಾಜ್ಯಗಳಿಂದ ಬೇಡಿಕೆ ಬರುತ್ತಿದೆ.

ಕಳೆದ ವರ್ಷ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ‘ಯದುನಂದನ’ ಎಂಬ ಗಂಡು ಜಿರಾಫೆಯನ್ನು ಕಳುಹಿಸಿಕೊಡಲಾಗಿತ್ತು. ‘ಗೌರಿ’ ಹೆಸರಿನ ಹೆಣ್ಣು ಜಿರಾಫೆಯನ್ನು 2018ರಲ್ಲಿ ಹಸ್ತಾಂತರಿಸಲಾಗಿತ್ತು. ಗುವಾಹಟಿ, ಪಾಟ್ನಾ ಹಾಗೂ ಲಖನೌಮೃಗಾಲಯವಲ್ಲದೇ ಸಿಂಗಪುರಕ್ಕೂ ಕಳುಹಿಸಿಕೊಡಲಾಗಿದೆ.

‘ಉತ್ತರ ಕರ್ನಾಟಕದಲ್ಲಿನ ಮೃಗಾಲಯಕ್ಕೂ ಕಳುಹಿಸಿಕೊಡುವ ಚಿಂತನೆ ಇದೆ. ಈ ಮೂಲಕ ಆ ಭಾಗದ ಪ್ರಾಣಿ ಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬಹುದು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT