ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಗೆಳೆಯರು ಕಟ್ಟಿದ ‘ಬಡವ ರಾಸ್ಕಲ್‌’

ಡಿಆರ್‌ಸಿಯಲ್ಲಿ ಪ್ರೀಮಿಯರ್‌ ಶೋ; ರಾಜ್ಯದಾದ್ಯಂತ ಶುಕ್ರವಾರ ಬಿಡುಗಡೆ
Last Updated 23 ಡಿಸೆಂಬರ್ 2021, 13:17 IST
ಅಕ್ಷರ ಗಾತ್ರ

ಮೈಸೂರು: ಅಲ್ಲಿದ್ದವರೆಲ್ಲಾ ಮೈಸೂರಿನ ಗೆಳೆಯರು. ಸಿನಿಮಾ ಕನಸ್ಸು ಕಟ್ಟಿಕೊಂಡು ಬೆಂಗಳೂರಿಗೆ ತೆರಳಿ ಚಿತ್ರರಂಗದಲ್ಲಿ ತೊಡಗಿಸಿಕೊಂಡವರು. ಈಗ ಆ ಗೆಳೆಯರೆಲ್ಲಾ ಸೇರಿ ‘ಬಡವ ರಾಸ್ಕಲ್‌’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಅದರಲ್ಲೂ ಚಿತ್ರದ ಪ್ರೀಮಿಯರ್‌ ಶೋವನ್ನು ಗುರುವಾರ ಮೈಸೂರಿನಲ್ಲೇ ಆಯೋಜಿಸಿದ್ದರು.

ಆ ಗೆಳೆಯರೇ ನಟ ಡಾಲಿ ಧನಂಜಯ್, ನಿರ್ದೇಶಕ ಶಂಕರ್ ಗುರು, ನಟ ನಾಗಭೂಷಣ್‌, ನಟಿ ಅಮೃತಾ ಅಯ್ಯಂಗಾರ್. ಅವರಿಗೆ ಬೆನ್ನೆಲುಬಾಗಿ ನಿಂತವರು ನಟಿ ತಾರಾ ಅನೂರಾಧ, ನಟ ರಂಗಾಯಣ ರಘು.

ಡಾಲಿ ಧನಂಜಯ್‌ ನಿರ್ಮಾಣದ ಚೊಚ್ಚಲ ಚಿತ್ರ ‘ಬಡವ ರಾಸ್ಕಲ್.’ ಈ ಚಿತ್ರ ಇದೇ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

ಮೈಸೂರಿನ ಒಡನಾಟವನ್ನು ಮೆಲುಕು ಹಾಕಿದ ಡಾಲಿ, ಛಾಯಾಗ್ರಾಹಕ ನೇತ್ರರಾಜು ಹಾಗೂ ರಂಗಕರ್ಮಿ ಮುದ್ದುಕೃಷ್ಣ ಅವರ ಅಗಲಿಕೆಯನ್ನು ನೆನೆದು ಭಾವುಕರಾದರು. ಬಳಿಕ ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಕನಸ್ಸು ಕಟ್ಟಿಕೊಂಡು ರಾಜಧಾನಿಗೆ ಹೋಗಿ ಚಿತ್ರರಂಗದಲ್ಲಿ ನೆಲೆಯೂರಲು ಬಹಳಷ್ಟು ಶ್ರಮಪಟ್ಟಿದ್ದೇವೆ. ಗೆಳೆಯರೆಲ್ಲರೂ ಸೇರಿ ಸಿನಿಮಾ ಮಾಡುವಂತಹ ಸ್ಕ್ರಿಪ್ಟ್‌ ಅನ್ನು ಶಂಕರ್‌ ಗುರು ಸಿದ್ಧಪಡಿಸಿದ್ದರು. ಮಧ್ಯಮ ವರ್ಗದ ಕೌಟುಂಬಿಕ ಕಥನವನ್ನು ಈ ಚಿತ್ರವು ಒಳಗೊಂಡಿದ್ದು, ಎಲ್ಲರೂ ಕುಳಿತು ನೋಡಿ ಮನರಂಜನೆ ಪಡೆಯಬಹುದು’ ಎಂದರು.

‌‘ರಾಸ್ಕಲ್‌ ಎಂದರೆ ತುಂಟ, ತರಳೆ ಎಂಬ ಅರ್ಥವಿದೆ. ಮಧ್ಯಮ ವರ್ಗದ ತುಂಟನ ಪಾತ್ರವನ್ನು ನಾನು ನಿಭಾಯಿಸಿದ್ದೇನೆ. ಮೊದಲ ಬಾರಿಗೆ ನಿರ್ಮಾಪಕನಾಗಿರುವುದು ರಿಸ್ಕ್‌ ಅನಿಸುತ್ತಿಲ್ಲ. ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ’ ಎಂದು ಹೇಳಿದರು.

‘ಯುವರತ್ನ ಚಿತ್ರದಲ್ಲಿ ನಾನು ಅಭಿನಯಿಸದಿದ್ದರೆ ಪುನೀತ್‌ ರಾಜ್‌ಕುಮಾರ್‌ ಅವರಂತಹ ದೊಡ್ಡ ವ್ಯಕ್ತಿತ್ವದೊಂದಿಗೆ ಕಾಲ ಕಳೆಯುವುದನ್ನು ಕಳೆದುಕೊಳ್ಳುತ್ತಿದ್ದೆ. ಹೀಗಾಗಿ, ಯಾರೇ ಹಿರಿಯ ನಟರು ಕರೆದರೂ ಅವರೊಂದಿಗೆ ನಟಿಸಲು ಸಿದ್ಧನಿದ್ದೇನೆ’ ಎಂದರು.

‘ಕನ್ನಡ ಚಿತ್ರಗಳನ್ನೇ ಬಿಡುಗಡೆ ಮಾಡಲು ಪ್ರಯಾಸ ಪಡಬೇಕು. ಇನ್ನು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಹಣ ಬೇಕು. ಅಷ್ಟು ಶಕ್ತಿ ನನಗಿಲ್ಲ. ಮೊದಲು ಈ ಮಣ್ಣಿನಲ್ಲಿ ಬೇರು ಗಟ್ಟಿ ಮಾಡಿಕೊಳ್ಳುತ್ತಿದ್ದೇನೆ. ರಂಬೆ, ಕೊಂಬೆ ರೀತಿಯಲ್ಲಿ ಪರಭಾಷಾ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಅಲ್ಲಿನ ಜನರಿಗೂ ನನ್ನ ಪರಿಚಯವಾದ ಬಳಿಕ ಮಾರುಕಟ್ಟೆ ವಿಸ್ತರಣೆ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಚಿತ್ರದ ನಾಯಕ ನಟಿ ಅಮೃತಾ ಅಯ್ಯಂಗಾರ್‌ ಮಾತನಾಡಿ, ‘ಪ್ರೀಮಿಯರ್‌ ಶೋಗೆ ನಿರೀಕ್ಷೆ ಮೀರಿ ಜನ ಬಂದಿದ್ದರಿಂದ ಖುಷಿಯಾಗಿದೆ. ಎಲ್ಲರೂ ಚಿತ್ರವನ್ನು ವೀಕ್ಷಿಸಬೇಕು’ ಎಂದು ಮನವಿ ಮಾಡಿದರು.

ನಟಿ ತಾರಾ ಮಾತನಾಡಿ, ‘ಇದು ಅಪ್ಪಟ ಕೌಟುಂಬಿಕ ಚಿತ್ರ. ವಾಸುಕಿ ವೈಭವ್‌ ಅವರು ನೀಡಿರುವ ಸಂಗೀತ, ಹಾಡುಗಳು ಮನೆ ಮಾತಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿನಿಮಾದ ನಿರ್ದೇಶಕ ಶಂಕರ್‌ ಗುರು ಮಾತನಾಡಿ, ‘ಇದು ನನ್ನ ಚೊಚ್ಚಲ ಚಿತ್ರ. ಇಲ್ಲಿನ ಡಿ.ಆರ್‌.ಸಿಯಲ್ಲಿ 4 ಸ್ಕ್ರೀನ್‌ಗಳಲ್ಲೂ ಚಿತ್ರ ಹೌಸ್‌ಫುಲ್‌ ಆಗಿದೆ’ ಎಂದರು.

ನಟ ರಂಗಾಯಣ ರಘು, ‘ನಿರ್ದೇಶಕರು ಮುಂದಿನ ದಿನಗಳಲ್ಲೂ ಈ ನೆಲದ ಕಥೆ, ಪಾತ್ರಗಳನ್ನು ಪರದೆ ಮೇಲೆ ತರಲಿ. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.

ಸಂಗೀತ ಸಂಯೋಜಕ ವಾಸುಕಿ ವೈಭವ್‌, ನಟ ನಾಗಭೂಷಣ್‌ ಅನಿಸಿಕೆ ಹಂಚಿಕೊಂಡರು.

***

ಬೆಳಗಾವಿಯ ದಾಂದಲೆ ಪ್ರಕರಣವನ್ನು ಚಿತ್ರರಂಗದ ಅನೇಕರು ಖಂಡಿಸಿದ್ದಾರೆ. ನಮ್ಮ ತನಕ್ಕೆ ಧಕ್ಕೆಯಾದರೆ ಹೋರಾಟಕ್ಕೆ ಇಳಿಯಲು ಸಿದ್ಧ.‌

–ತಾರಾ ಅನೂರಾಧ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT