ಮಂಗಳವಾರ, ಜನವರಿ 25, 2022
24 °C
ಸಂವಾದದಲ್ಲಿ ಪೇಚಿಗೆ ಸಿಲುಕಿದ ಅಭ್ಯರ್ಥಿಗಳು

ದೇವರ ಹೆಸರಿನಲ್ಲಿ ಪ್ರಮಾಣ ಮಾಡಲು ಹಿಂದೇಟು; ಪೇಚಿಗೆ ಸಿಲುಕಿದ ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಧಾನ ಪರಿಷತ್ ಅಛ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಾಟಾಳ್ ನಾಗರಾಜ್ (ಪಕ್ಷೇತರ), ಸಿ.ಎನ್.ಮಂಜೇಗೌಡ (ಜಾ.ದಳ), ಆರ್.ರಘು (ಬಿಜೆಪಿ) ಮತ್ತು ಡಾ.ಡಿ.ತಿಮ್ಮಯ್ಯ(ಕಾಂಗ್ರೆಸ್) ಭಾಗವಹಿಸಿದ್ದರು.

ಮೈಸೂರು: ‘ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದಿಲ್ಲ ಎಂದು ದೇವರ ಹೆಸರಿನಲ್ಲಿ ಆಣೆ, ಪ್ರಮಾಣ ಮಾಡುವಿರಾ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಲಾಗದೆ, ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯ ಅಭ್ಯರ್ಥಿಗಳು ಪೇಚಿಗೆ ಸಿಲುಕಿದ ಪ್ರಸಂಗ ಶುಕ್ರವಾರ ಇಲ್ಲಿ ನಡೆಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಏರ್ಪಡಿಸಿದ್ದ ಸಂವಾದದಲ್ಲಿ, ‘ಈ ಬಾರಿ ಒಬ್ಬೊಬ್ಬ ಅಭ್ಯರ್ಥಿಗೆ ₹ 15 ಕೋಟಿವರೆಗೆ ಖರ್ಚಾಗುತ್ತದೆ. ಮತದಾರರ ಖರೀದಿ ನಡೆಯುತ್ತಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬಂದಿವೆ. ನಾವು ಹಣ ಹಂಚುವುದಿಲ್ಲ ಎಂದು ಪ್ರಮಾಣ ಮಾಡಿ, ಇಡೀ ರಾಜ್ಯಕ್ಕೆ ಸಂದೇಶ ರವಾನಿಸುವಿರಾ’ ಎಂಬ ಪ್ರಶ್ನೆ ಎದುರಾಯಿತು.

ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಅವರನ್ನು ಹೊರತುಪಡಿಸಿದರೆ, ಬಿಜೆಪಿಯ ಆರ್‌.ರಘು ಕೌಟಿಲ್ಯ, ಕಾಂಗ್ರೆಸ್‌ನ ಡಾ.ಡಿ.ತಿ‌ಮ್ಮಯ್ಯ, ಜೆಡಿಎಸ್‌ನ ಸಿ.ಎನ್‌.ಮಂಜೇಗೌಡ ನೇರ ಉತ್ತರ ನೀಡಲಿಲ್ಲ.

‘ಮತದಾರರಿಗೆ ಇದುವರೆಗೆ ನಯಾಪೈಸೆ ಕೊಟ್ಟಿಲ್ಲ, ಮುಂದೆಯೂ ಕೊಡುವುದಿಲ್ಲ ಎಂದು ವೆಂಕಟರಮಣಸ್ವಾಮಿ ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ವಾಟಾಳ್‌ ನಾಗರಾಜ್ ಪ್ರಮಾಣ ಮಾಡಿದರು. ನಂತರ ಅವರು, ‘ನಾನು ಪ್ರಮಾಣ ಮಾಡಿದಂತೆ ನೀವೂ ಮಾಡಿ’ ಎಂದು ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಿದರು.

ಡಿ.ತಿಮ್ಮಯ್ಯ ಮಾತನಾಡಿ, ‘ಇದು ನನಗೆ ಮೊದಲ ಚುನಾವಣೆ. ಮತಕ್ಕೆ ದುಡ್ಡು ಕೊಡುವ ವಿಚಾರ ಗೊತ್ತಿಲ್ಲ. ಪಕ್ಷದ ಕೊಡುಗೆಗಳನ್ನು ನೋಡಿ ಮತ ಹಾಕುವಂತೆ ಮತದಾರರಲ್ಲಿ ಕೇಳಿಕೊಳ್ಳುತ್ತೇನೆ’ ಎಂದರು.

ರಘು ಕೌಟಿಲ್ಯ ಅವರು, ‘ಇಂತಿಷ್ಟು ಹಣ ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಖರ್ಚು ವೆಚ್ಚ ಇಲ್ಲದೆ ಯಾವ ಚುನಾವಣೆ ಆಗುವುದಿಲ್ಲ. ಆದರೆ ಮತಗಳು ಬಿಕರಿಗಿಲ್ಲ ಎಂದು ಸಾಬೀತುಪಡಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.

‘ದೇವರ ಹೆಸರಿನಲ್ಲಿ ಪ್ರಮಾಣ ಮಾಡಬೇಕು’ ಎಂದು ವಾಟಾಳ್‌ ಮತ್ತೆ ಒತ್ತಾಯಿಸಿದಾಗ ರಘು ಅವರು, ‘ಎಲ್ಲ ಅಭ್ಯರ್ಥಿಗಳ ಪರವಾಗಿ ಉತ್ತರಿಸುತ್ತಿದ್ದೇನೆ. ಕಣದಲ್ಲಿರುವ ಎಲ್ಲರೂ ನಾಮಪತ್ರ ಸಲ್ಲಿಸುವಾಗ ಸಂವಿಧಾನದ ಆಶಯದಂತೆ ಪ್ರಮಾಣವಚನ ಮಾಡಿದ್ದು, ಅದಕ್ಕೆ ಬದ್ಧರಾಗಿದ್ದೇವೆ. ಸಂವಿಧಾನಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ’ ಎಂದು ಚರ್ಚೆಗೆ ಅಂತ್ಯ ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು