ಸೋಮವಾರ, ಮಾರ್ಚ್ 27, 2023
30 °C
ದಸರೆಯ ಬಹುತೇಕ ಖರ್ಚುಗಳೂ ದುಬಾರಿ!

ಈ ಬಾರಿಯ ದಸರಾಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಈ ಬಾರಿ ನಡೆದ ಸರಳ ದಸರೆಗೆ ₹ 5.42 ಕೋಟಿ ವೆಚ್ಚವಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಇಲ್ಲಿನ ಅರಮನೆ ಮಂಡಳಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸರ್ಕಾರ ದಸರೆಗಾಗಿ ನೀಡಿದ್ದ ₹ 6 ಕೋಟಿಯಲ್ಲಿ ₹ 5.42 ಕೋಟಿ ವೆಚ್ಚ ಮಾಡಿ, ₹ 57 ಲಕ್ಷವನ್ನು ಉಳಿಸಲಾಗಿದೆ. ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗೆ ತಲಾ ₹ 50 ಲಕ್ಷ, ಹಾಸನಕ್ಕೆ ₹ 20 ಲಕ್ಷ ನೀಡಲಾಗಿತ್ತು’ ಎಂದರು.

‘ರಾಜವಂಶಸ್ಥರಿಗೆ ಗೌರವ ಸಂಭಾವನೆ ರೂಪದಲ್ಲಿ ₹ 40 ಲಕ್ಷ ನೀಡಲಾಗಿದೆ. ಅರಣ್ಯ ಇಲಾಖೆಗೆ ₹ 50 ಲಕ್ಷ, ರಂಗಾಯಣಕ್ಕೆ ₹ 10 ಲಕ್ಷ ನೀಡಲಾಗಿದೆ’ ಎಂದು ಹೇಳಿದರು.

‘ಮೈಸೂರಿನಲ್ಲಿ ವರ್ಷಪೂರ್ತಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಮುಖ್ಯಮಂತ್ರಿ ಉತ್ಸುಕರಾಗಿದ್ದಾರೆ. ಸದ್ಯದಲ್ಲೆ ತೀರ್ಮಾನಿಸಲಾಗುವುದು. ನಟ ಪುನೀತ್‌ ರಾಜ್‌ಕುಮಾರ್ ಹೆಸರನ್ನು ಉಳಿಸುವ ಪ್ರಯತ್ನವಾಗಿ ಕಾರ್ಯಕ್ರಮವೊಂದನ್ನು ರೂಪಿಸುವ ಚಿಂತನೆ ನಡೆದಿದೆ’ ಎಂದರು.

‘ಮಂಡ್ಯದ ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣ ಕುರಿತು ಸಿಒಡಿ ಹಾಗೂ ಸಹಕಾರ ಇಲಾಖೆ ಒಂದೆರಡು ದಿನಗಳಲ್ಲಿ ನೀಡಲಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಶಾಸಕ ಚಲುವರಾಯಸ್ವಾಮಿ ಹೇಳಿದಂತೆ ಅಲ್ಲಿ ₹ 1 ಸಾವಿರ ಕೋಟಿಯಷ್ಟು ಹಗರಣ ನಡೆದಿಲ್ಲ’ ಎಂದು ತಿಳಿಸಿದರು.

‘ಮಳೆಯಿಂದ ಮುಂದೆ ನಗರದಲ್ಲಿ ಅವಘಡಗಳು ಸಂಭವಿಸದಂತೆ ತಡೆಯಲು ನೀಲನಕ್ಷೆ ರೂಪಿಸಲಾಗಿದೆ. ಮುಖ್ಯಮಂತ್ರಿ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. ಸದ್ಯ, ಪ್ರತಿ ವಾರ್ಡಿಗೆ ₹ 8 ಲಕ್ಷ ಹಣ ನೀಡಲಾಗಿದೆ’ ಎಂದರು.

ದುಬಾರಿಯಾದ ವೆಚ್ಚ: ದಸರಾ ಮಹೋತ್ಸವಕ್ಕಾಗಿ ಕಳೆದ ವರ್ಷ ಸರ್ಕಾರ ₹ 10 ಕೋಟಿ ನೀಡಿತ್ತು. ಅದರಲ್ಲಿ ₹ 2.91 ಕೋಟಿಯಷ್ಟನ್ನು ಮಾತ್ರ ಖರ್ಚು ಮಾಡಿದ್ದ ಜಿಲ್ಲಾಡಳಿತ ₹ 7.08 ಕೋಟಿ ಹಣ ಉಳಿಸಿತ್ತು.

’ಈ ಬಾರಿ ಸರ್ಕಾರ ನೀಡಿದ್ದೇ ₹ 6 ಕೋಟಿ. ಅದರಲ್ಲಿ ₹ 5.42 ಕೋಟಿಯನ್ನು ವ್ಯಯಿಸಿ, ₹ 57 ಲಕ್ಷ ಮಾತ್ರ ಉಳಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದಸರೆ ಸ್ವಲ್ಪ ವಿಜೃಂಭಣೆಯಿಂದ ಇದ್ದುದ್ದರಿಂದ ಹೆಚ್ಚು ಹಣ ವ್ಯಯವಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಸ್ತಬ್ಧಚಿತ್ರಕ್ಕಾಗಿ ಕಳೆದ ಬಾರಿ ₹ 4.10 ಲಕ್ಷ ವ್ಯಯವಾಗಿತ್ತು. ಈ ಬಾರಿ ಅದು ₹ 18.85 ಲಕ್ಷಕ್ಕೆ ಏರಿಕೆ ಕಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮದ ನೇರಪ್ರಸಾರದ ವೆಚ್ಚವೂ ₹ 5.90 ಲಕ್ಷದಿಂದ ₹ 11.09 ಲಕ್ಷ‌ಕ್ಕೆ ಗಣನೀಯವಾಗಿ ಹೆಚ್ಚಾಗಿದೆ. ವೇದಿಕೆ ನಿರ್ಮಾಣ ಮತ್ತು ಅಗತ್ಯ ವ್ಯವಸ್ಥೆಗೆ ₹ 41.08 ಲಕ್ಷ ಇದ್ದ ವೆಚ್ಚವು ₹ 93.80 ಲಕ್ಷಕ್ಕೆ ಹೆಚ್ಚಿದೆ. ಸಾಂಸ್ಕೃತಿಕ ಕಾರ್ಯಕ್ರಮ/ ಕಲಾವಿದರ ಸಂಭಾವನೆಯ ವೆಚ್ಚವೂ  ₹ 44.78 ಲಕ್ಷದಿಂದ ₹ 1.03 ಕೋಟಿ ಏರಿಕೆಯಾಗಿದೆ.

ಮೇಲ್ನೋಟಕ್ಕೆ ಒಂದೆರಡು ಸ್ತಬ್ದಚಿತ್ರ, ಕಲಾತಂಡಗಳು ಹೆಚ್ಚಿದ್ದವು. ಕಳೆದ ಬಾರಿಯಷ್ಟೇ ವೇದಿಕೆಯಲ್ಲಿ ಈ ಬಾರಿಯೂ ಕಾರ್ಯಕ್ರಮಗಳು ನಡೆದಿವೆ. ವೆಚ್ಚ ಮಾತ್ರ ಹೆಚ್ಚಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು