ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗನಹಳ್ಳಿ ಟರ್ಮಿನಲ್‌ ನಿರ್ಮಾಣ ಇನ್ನಷ್ಟು ತಡ

ಮೊದಲ ಹಂತದ ಕಾಮಗಾರಿಯ ಡಿಪಿಆರ್‌ಗೆ ಇನ್ನೂ ದೊರೆಯದ ರೈಲ್ವೆ ಮಂಡಳಿ ಅನುಮತಿ
Last Updated 20 ಆಗಸ್ಟ್ 2020, 6:38 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ನಾಗನಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಯಾಟಲೈಟ್ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ರೈಲ್ವೆ ಮಂಡಳಿಯ ಅನುಮತಿ ಇನ್ನೂ ದೊರೆತಿಲ್ಲ.

ಮೈಸೂರು ನಗರ ರೈಲು ನಿಲ್ದಾಣದ ಮೇಲಿನ ಒತ್ತಡ ತಗ್ಗಿಸಲು ಮತ್ತು ಹೆಚ್ಚುವರಿ ರೈಲುಗಳನ್ನು ತರುವ ನಿಟ್ಟಿನಲ್ಲಿ ನಾಗನಹಗಳ್ಳಿಯಲ್ಲಿ ಟರ್ಮಿನಲ್‌ ನಿರ್ಮಿಸುವ ಪ್ರಸ್ತಾವವನ್ನು 2007 ರಲ್ಲಿ ಮಾಡಲಾಗಿತ್ತು. 2018–19ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಸೇರಿಸಲಾಗಿತ್ತು.

ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿತ್ತು. ಮೊದಲ ಹಂತದ ಕಾಮಗಾರಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಕಳೆದ ವರ್ಷವೇ ಸಲ್ಲಿಸಲಾಗಿತ್ತು. ಆದರೆ ರೈಲ್ವೆ ಮಂಡಳಿಯ ಅನುಮತಿ ಇನ್ನೂ ದೊರೆತಿಲ್ಲ.

‘ಡಿಪಿಆರ್‌ಗೆ ಒಪ್ಪಿಗೆ ದೊರೆತ ಮುಂದಿನ ಪ್ರಕ್ರಿಯೆ ನಡೆಸಲು ಸಾಧ್ಯ. ಕಳೆದ ಆಗಸ್ಟ್‌ನಲ್ಲಿ ಡಿಪಿಆರ್‌ ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿಯ ಅನುಮತಿಗಾಗಿ ಕಾಯುತ್ತಿದ್ದೇವೆ’ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಬುಧವಾರ ಆಯೋಜಿಸಿದ್ದ ‘ವರ್ಚ್ಯುವಲ್‌’ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದ ಯೋಜನೆ ಜಾರಿಗೊಳಿಸಲು 165 ಎಕರೆ ಜಾಗದ ಅವಶ್ಯಕತೆಯಿದ್ದು, ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಹೇಳಿದರು.

ಮೊದಲ ಹಂತದ ಯೋಜನೆಯಲ್ಲಿ ₹ 495.45 ಕೋಟಿ ವೆಚ್ಚದಲ್ಲಿ ನಾಲ್ಕು ಪ್ಲಾಟ್‌ಫಾರ್ಮ್‌ಗಳು ಮತ್ತು ಎರಡು ಪಿಟ್‌ ಲೇನ್‌ಗಳು ನಿರ್ಮಾಣವಾಗಲಿವೆ. ಎರಡನೇ ಹಂತದಲ್ಲಿ ಇನ್ನೆರಡು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಮಾರ್ಚ್‌ನಲ್ಲಿ ಸಮೀಕ್ಷೆ ಪೂರ್ಣ: ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣದ ಅಂತಿಮ ಹಂತದ ಸ್ಥಳ ಸಮೀಕ್ಷೆ ಕಾರ್ಯವನ್ನು (ಫೈನಲ್‌ ಲೊಕೇಶನ್‌ ಸರ್ವೇ) ಟೆಂಡರ್‌ ಕರೆದು ಇನ್ನೆರಡು ತಿಂಗಳಲ್ಲಿ ಆರಂಭಿಸಲಾಗುವುದು. ಮುಂದಿನ ವರ್ಷ ಮಾರ್ಚ್‌ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಮೈಸೂರು ವಿಭಾಗ ಮುಖ್ಯ ಎಂಜಿನಿಯರ್‌ ನಾರಾಯಣ ರಾವ್‌ ತಿಳಿಸಿದರು.

ಮೂಲಸೌಕರ್ಯ ಅಭಿವೃದ್ಧಿ: ನಂಜನಗೂಡು ಗೂಡ್ಸ್‌ ಟರ್ಮಿನಲ್‌ನಲ್ಲಿ ದೀಪಗಳ ಅಳವಡಿಕೆ, ಶೌಚಾಲಯ ನಿರ್ಮಾಣದ ಮೂಲಕ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ನಂಜನಗೂಡಿಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸಲು ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುವುದು ಎಂದು ಅಪರ್ಣಾ ಗರ್ಗ್‌ ಹೇಳಿದರು.

ಲಾಕ್‌ಡೌನ್‌ ಅವಧಿಯಲ್ಲಿ ಮೈಸೂರಿನಿಂದ 12 ಶ್ರಮಿಕ್‌ ವಿಶೇಷ ರೈಲುಗಳು ಸಂಚರಿಸಿದ್ದು, ಸುಮಾರು 17 ಸಾವಿರ ವಲಸೆ ಕಾರ್ಮಿಕರಿಗೆ ಅವರ ಊರು ತಲುಪಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್‌ ನಿರ್ವಹಣೆಗಾಗಿ ‘ಪಿಎಂ ಕೇರ್ ಫಂಡ್‌’ಗೆ ಮೈಸೂರು ವಿಭಾಗದ ಸಿಬ್ಬಂದಿಯ ಒಂದು ದಿನ ವೇತನ ₹ 75 ಲಕ್ಷ ಮೊತ್ತವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT